ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಪ್ರೇಕ್ಷಕರ ಮೈನವಿರೇಳಿಸುವ ಮಲ್ಲಕಂಬ ಪಟುಗಳು

ಕವಲೆತ್ತು ಗ್ರಾಮದ ‘ಗ್ರಾಸಿಂ ಸಿರಿಗನ್ನಡ ವಿದ್ಯಾಲಯ’ದ ವಿದ್ಯಾರ್ಥಿಗಳ ಸಾಹಸ ಪ್ರದರ್ಶನ
Last Updated 11 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಕುಮಾರಪಟ್ಟಣ: ಗಂಡು ಕ್ರೀಡೆ, ಸಾಹಸ ಕಲೆ ಮಲ್ಲಕಂಬ ಕ್ರೀಡೆಯ ಉದಯಕ್ಕೆ ಮಂಗನ ಪಟ್ಟು ಮೂಲ ಪ್ರೇರಣೆಯಾಗಿದೆ. ಜಟ್ಟಿಗಳು, ಪೈಲ್ವಾನರು ಹಾಗೂ ಯುದ್ಧಮಲ್ಲರು ಆಡುತ್ತಿದ್ದ ಇಂಥ ಸಮರ ಕ್ರೀಡೆಯಲ್ಲಿ ರಾಣೆಬೆನ್ನೂರು ತಾಲ್ಲೂಕಿನ ಕವಲೆತ್ತು ಗ್ರಾಮದ ‘ಗ್ರಾಸಿಂ ಸಿರಿಗನ್ನಡ ವಿದ್ಯಾಲಯ’ದ ವಿದ್ಯಾರ್ಥಿಗಳು ಗುರುತಿಸಿಕೊಂಡಿದ್ದಾರೆ.

ಇಲ್ಲಿನ ಆದಿತ್ಯ ಬಿರ್ಲಾ ಆವರಣದಲ್ಲಿ ಇತ್ತೀಚೆಗೆ 71ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಅನಾವರಣ ಕಾರ್ಯಕ್ರಮದಲ್ಲಿ 25 ಬಾಲಕರು, 25 ಬಾಲಕಿಯರು ಹೀಗೆ 50 ಮಂದಿ ಮಕ್ಕಳು ಮಲ್ಲಕಂಬ ಹಾಗೂ ಹಗ್ಗದ ಕಂಬಪ್ರದರ್ಶಿಸಿ ಪ್ರೇಕ್ಷಕರ ಜನಮನ ಗೆದ್ದು ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಹೂಗಾರ್ ತಂಡದ ಸಿದ್ದು ಮತ್ತು ಗಂಗಮ್ಮ 15 ದಿನಗಳ ಕಾಲ ತರಬೇತಿ ನೀಡಿ ಮಕ್ಕಳನ್ನು ಗಟ್ಟಿಗೊಳಿಸಿದರು. ಒಂದು ಮಲ್ಲಕಂಬ ಮತ್ತು ಹಗ್ಗದ ಕಂಬವನ್ನು ಬಳಸಲಾಗಿದೆ. ಏಕ ಕಾಲಕ್ಕೆ ಮೂರು ನಿರಾಧಾರ ಕಂಬಗಳ ಕ್ರೀಡೆ ಕಲಿಸಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರದರ್ಶನ ನೀಡುವ ಕನಸಿದೆ ಎಂದು ದೈಹಿಕ ಶಿಕ್ಷಣ ಶಿಕ್ಷಕ ಎಂ.ಪರಶುರಾಂ ಎಂದು ಭವಿಷ್ಯದ ಯೋಜನೆಗಳ ವಿವರ ನೀಡಿದರು.

‘ಮಲ್ಲಕಂಬ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ಮಕ್ಕಳ ತೂಕದಲ್ಲಿ ಇಳಿಮುಖವಾಗಿದ್ದು, ದೈಹಿಕ ಮತ್ತು ಮಾನಸಿಕವಾಗಿ ಚುರುಕಾಗಿದ್ದಾರೆ. ಸಮವಸ್ತ್ರ, ಚಿಬುಕಇಲ್ಲದ ಟೀಕ್‌ಹುಡ್ ಕಂಬ ಹಾಗೂ ಹಗ್ಗದ ಸರಂಜಾಮುಗಳನ್ನು ಖರೀದಿಸಿದ್ದೇವೆ. ಇದಲ್ಲದೆ ಯೋಗಾಸನ, ಪಿರಾಮಿಡ್ ಕ್ರೀಡಾ ಮಾದರಿಗಳನ್ನು ಪರಿಚಯಿಸಲಾಗುತ್ತಿದೆ’ ಎಂದು ಮುಖ್ಯ ಶಿಕ್ಷಕಿ ಮಂಜುಳಾ.ಎಸ್ ಹೇಳುತ್ತಾರೆ.

ಇಂಥ ಸಾಹಸಮಯ ಕ್ರೀಡೆಗಳನ್ನು ಆಯೋಜಿಸಲು ಪಾಲಕರ ಅನುಮತಿ ಮತ್ತು ಸಹಕಾರ ಅವಶ್ಯ. ಜೊತೆಗೆ ಶಿಕ್ಷಕರಿಗೂ ಮಕ್ಕಳ ಸುರಕ್ಷತೆ ಬಗ್ಗೆ ಜವಾಬ್ದಾರಿ ಇದ್ದರೆ ಇದು ಸಾರ್ಥಕವಾಗಲಿದೆ.ಕೇಂದ್ರ ಸರ್ಕಾರದ ‘ಫಿಟ್‌ ಇಂಡಿಯಾ’ ಕಲ್ಪನೆಯೊಂದಿಗೆ ಮಕ್ಕಳಿಗೆ ಮಲ್ಲಕಂಬ ಕ್ರೀಡೆ ಕಲಿಸಲಾಗಿದೆ ಎಂದರು.

ಇಂಥ ಅದ್ಭುತ ಕ್ರೀಡೆಯಿಂದಾಗಿ ನಮ್ಮಲ್ಲಿ ಉತ್ಸಾಹ ಇಮ್ಮಡಿಯಾಗಿದೆ. ತೂಕ ಕಡಿಮೆಯಾಗಿ ದೇಹದ ಮೇಲೆ ಹಿಡಿತ ಹೆಚ್ಚಾಗಿದೆ. ಭಯವೂ ಕೂಡ ದೂರವಾಗಿದೆ. ಹೆಚ್ಚಿನ ಸಾಧನೆ ಮಾಡಬೇಕೆಂಬ ಹಂಬಲವಿದೆ ಎಂದು ವಿದ್ಯಾರ್ಥಿಗಳಾದ ಮನೋಜ್ ಮತ್ತು ಅಲಿ ʼಪ್ರಜಾವಾಣಿʼಯೊಂದಿಗೆ ಸಂತಸ ಹಂಚಿಕೊಳ್ಳುತ್ತಾರೆ.

ಹಗ್ಗದ ಕಂಬದಲ್ಲಿ ಬಾಲಕಿಯರ ವಿಭಿನ್ನ ಪ್ರದರ್ಶನ

ನ್ಯೂನತೆ ಸರಿದೂಗಿಸಲು ಅನುಕೂಲ
‘ದೇಹ ಮತ್ತು ಮನಸ್ಸನ್ನು ನಿಗ್ರಹಿಸಿ ಅನೇಕ ದೈಹಿಕ ನ್ಯೂನತೆಗಳನ್ನು ಸರಿದೂಗಿಸಲು ಮಲ್ಲಕಂಬ ಅನುಕೂಲವಾಗಿದೆ. ‘ಮಲ್ಲ’ ಎಂದರೆ ಪೈಲ್ವಾನ್ ಎಂದೇ ಗುರುತಿಸುವ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಹುಟ್ಟಿದ ಈ ಕಲೆ ದೊರೆಗಳ ಆಳ್ವಿಕೆಯಲ್ಲಿ ಹೆಚ್ಚು ಚಾಲ್ತಿಯಲ್ಲಿತ್ತು. ನಮ್ಮ ಹೂಗಾರ್ ಕಮಡೊಳ್ಳಿ ತಂಡದಲ್ಲಿ ಸತತ ಎಂಟು ವರ್ಷಗಳ ಅನುಭವ ಹೊಂದಿರುವ 200ಕ್ಕೂ ಹೆಚ್ಚು ಮಂದಿ ಬೇರೆಯವರಿಗೆ ತರಬೇತಿ ನೀಡುತ್ತಿದ್ದಾರೆ. ನಮ್ಮ ತಂಡಕ್ಕೆ ಮೂರು ಬಾರಿ ವರ್ಲ್ಡ್‌ ರೆಕಾರ್ಡ್ ಸಿಕ್ಕಿದೆ’ ಎಂದು ಹಿರಿಯ ತರಬೇತುದಾರ ಸಿದ್ಧಾರೂಢ ಹೂಗಾರ ತಿಳಿಸಿದರು.

‘ಚಲನಚಿತ್ರಗಳು ಸೇರಿದಂತೆ ಚೀನಾ, ಮಾಲ್ಡೀವ್ಸ್, ಥೈಲೆಂಡ್‌ ದೇಶಗಳಲ್ಲಿ ತರಬೇತಿ ನೀಡಲಾಗಿದೆ. ಕನ್ನಡ ಖಾಸಗಿ ವಾಹಿನಿಯ ಡಾನ್ಸ್‌ ಕರ್ನಾಟಕ ಡಾನ್ಸ್‌, ಕಿಲಾಡಿ ಕುಟುಂಬ ಷೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ತರಬೇತಿ ಪಡೆದವರು ಭಾರತೀಯ ಸೇನೆಯಲ್ಲಿದ್ದಾರೆ. ಶಾಸ್ತ್ರೀಯ ಮಲ್ಲಕಂಬವು ದೇಹ ಮತ್ತು ಮನಸ್ಸಿಗೆ ಸಹಕಾರಿ’ ಎಂಬುದು ಹೂಗಾರ ಅವರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT