ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾದಿಂದ ರೈಲಿನಲ್ಲಿ ಗಾಂಜಾ ತಂದು ಮಾರಾಟ: ನಾಲ್ವರ ಬಂಧನ

Published 9 ಜೂನ್ 2024, 19:42 IST
Last Updated 9 ಜೂನ್ 2024, 19:42 IST
ಅಕ್ಷರ ಗಾತ್ರ

ಹಾವೇರಿ: ಒಡಿಶಾದಿಂದ ರೈಲಿನಲ್ಲಿ ಗಾಂಜಾ ತಂದು ಹಾವೇರಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಾರುತ್ತಿದ್ದ ಜಾಲ ಭೇದಿಸಿರುವ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

‘ನಾಗೇಂದ್ರಮಟ್ಟಿಯ ದಿಳ್ಳೆಪ್ಪ ಅಳಲಗೇರಿ, ಸಾಹಿಲ್ ಕರ್ಜಗಿ, ಸುಭಾಷ ವೃತ್ತದ ಫಾರೂಕ್ ಅಹಮ್ಮದ್ ಹಾಗೂ ಇಸ್ಮಾಯಿಲ್ ನದಾಫ ಬಂಧಿತರು. ಇವರಿಂದ ₹7.91 ಲಕ್ಷ ಮೌಲ್ಯದ 9 ಕೆ.ಜಿ 900 ಗ್ರಾಂ ಗಾಂಜಾ ಹಾಗೂ 4 ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ರೈಲು ನಿಲ್ದಾಣ ಬಳಿಯ ತನಿಷಾ ಹೋಟೆಲ್ ಸಮೀಪದಲ್ಲಿರುವ ಸೇತುವೆ ಕೆಳಭಾಗದಲ್ಲಿ ಸೇರಿದ್ದ ಆರೋಪಿಗಳು, ಗಾಂಜಾ ಪೊಟ್ಟಣಗಳನ್ನು ಇಟ್ಟುಕೊಂಡಿದ್ದರು. ಈ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ದಾಳಿ ಮಾಡಿ, ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು. ಗಾಂಜಾ ಸಮೇತ ಸಿಕ್ಕಿಬಿದ್ದ ಆರೋಪಿಗಳು, ಸಾಗಣೆ ಹಾಗೂ ಮಾರಾಟದ ಬಗ್ಗೆ ಬಾಯ್ಬಿಟ್ಟರು‘ ಎಂದು ಹೇಳಿದರು.

‘ಒಡಿಶಾದಲ್ಲಿರುವ ಗಾಂಜಾ ಪೆಡ್ಲರ್‌ಗಳ ಜೊತೆಯಲ್ಲಿ ಆರೋಪಿಗಳು ಒಡನಾಟ ಹೊಂದಿದ್ದಾರೆ. ಆಗಾಗ ಒಡಿಶಾಗೆ ಹೋಗುತ್ತಿದ್ದ ಆರೋಪಿಗಳು, ಅಲ್ಲಿಯೇ ಕಡಿಮೆ ಬೆಲೆಗೆ ಗಾಂಜಾ ತರಿಸುತ್ತಿದ್ದರು. ಪಾರ್ಸೆಲ್ ಹಾಗೂ ಬ್ಯಾಗ್‌ಗಳಲ್ಲಿ ಗಾಂಜಾ ಪೊಟ್ಟಣಗಳನ್ನು ಇಟ್ಟುಕೊಂಡು ಹಾವೇರಿಗೆ ರೈಲಿನ ಮೂಲಕ ತರುತ್ತಿದ್ದರು‘ ಎಂದು ತಿಳಿಸಿದರು.

‘ರೈಲು ನಿಲ್ದಾಣದಲ್ಲಿ ಸರಾಗವಾಗಿ ಇಳಿದು ತಮ್ಮ ಮನೆಗೆ ಗಾಂಜಾ ಕೊಂಡೊಯ್ಯುತ್ತಿದ್ದರು. ನಂತರ, ಹಲವು ಮಧ್ಯವರ್ತಿಗಳಿಗೆ ಗಾಂಜಾ ನೀಡಿ ಅವರ ಮೂಲಕ ಗ್ರಾಹಕರಿಗೆ ತಲುಪಿಸುತ್ತಿದ್ದರು. ಗಾಂಜಾ ಹೂವು, ಮೊಗ್ಗು, ಒಳಗಿದ ಗಾಂಜಾ ಸಹ ಆರೋಪಿಗಳ ಬಳಿ ಸಿಕ್ಕಿದೆ. ಆರೋಪಿಗಳು, ಹಲವು ವರ್ಷಗಳಿಂದ ಕೃತ್ಯ ಎಸಗುತ್ತಿರುವ ಮಾಹಿತಿ ಇದೆ. ಈ ಬಗ್ಗೆ ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿದರು.

ಹಾವೇರಿ ಜಿಲ್ಲಾ ಎಸ್ಪಿ ಅಂಶುಕುಮಾರ್, ಎಎಸ್ಪಿ ಸಿ. ಗೋಪಾಲ್ ಹಾಗೂ ಡಿವೈಎಸ್ಪಿ ಕೆ.ಎಲ್. ಗಣೇಶ್ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಮೋತಿಲಾಲ್ ಆರ್. ಪವಾರ್ ಅವರು ಕಾರ್ಯಾಚರಣೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT