ಶನಿವಾರ, ಮೇ 28, 2022
30 °C
ಇಳುವರಿ ಹೆಚ್ಚಿಸಿದ ಸಾಯಯವ ಪದ್ಧತಿ: ಇತರರಿಗೂ ಮಾದರಿಯಾದ ಪರಮೇಶಪ್ಪ ಹಲಗೇರಿ

ರಟ್ಟೀಹಳ್ಳಿ: ಮಿಶ್ರ ಬೇಸಾಯ, ಕೈ ತುಂಬ ಆದಾಯ

ಪ್ರದೀಪ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ರಟ್ಟೀಹಳ್ಳಿ: ‘ಭೂತಾಯಿಯನ್ನು ನಂಬಿ ಸೇವೆ ಮಾಡಿದರೆ ಎಂದಿಗೂ ಕೈ ಬಿಡುವುದಿಲ್ಲ. ನಿರಂತರ ಪರಿಶ್ರಮ, ಶ್ರದ್ಧೆ ಮತ್ತು ‌ತಾಳ್ಮೆಯಿಂದ ಕೃಷಿಯಲ್ಲಿ ಖುಷಿ ಕಾಣಬಹುದು’ ಎನ್ನುತ್ತಾರೆ ಪ್ರಗತಿಪರ ರೈತ ರಟ್ಟೀಹಳ್ಳಿ ತಾಲ್ಲೂಕಿನ ಬತ್ತಿಕೊಪ್ಪ ಗ್ರಾಮದ ಪರಮೇಶಪ್ಪ ಹಲಗೇರಿ.

ಇವರು ತಮ್ಮ ಐದು ಎಕರೆ ಜಮೀನಿನಲ್ಲಿ ಆರಂಭದಲ್ಲಿ ಸಾಂಪ್ರದಾಯಿಕ ಬೆಳೆ ಬೆಳೆದು, ಸಮರ್ಪಕ ಮಾರುಕಟ್ಟೆ ದರವಿಲ್ಲದೆ ಹಲವಾರು ಬಾರಿ ಕೈ ಸುಟ್ಟುಕೊಂಡರು. ನಂತರ ಕೃಷಿ ತಜ್ಞರ ಮಾರ್ಗದರ್ಶನದಿಂದ ತಾಲ್ಲೂಕಿನ ಯಶಸ್ವಿ ರೈತರಲ್ಲಿ ಇವರು ಒಬ್ಬರಾಗಿದ್ದಾರೆ.

ಎರಡು ಕೊಳವೆಬಾವಿ ಹೊಂದಿರುವ ಇವರು 120 ತೆಂಗಿನ ಮರ, 300 ತೇಗದ ಗಿಡ, ನಿಂಬೆ, ಮಾವು, ದಾಳಿಂಬೆ, ಬೆಟ್ಟದ ನೆಲ್ಲಿ, ಪೇರಲ, ಚಿಕ್ಕು(ಸಪೋಟಾ), ಸೀತಾಫಲ, ಕಾಳುಮೆಣಸು.. ಹೀಗೆ ಅನೇಕ ತೋಟಗಾರಿಕೆ ಬೆಳೆಗಳನ್ನು ಕೈಗೊಂಡು ಆದಾಯ ಹೆಚ್ಚಿಸಿಕೊಂಡಿದ್ದಾರೆ. ಜತೆಗೆ ಎರಡು ಎಕರೆ ಅಡಿಕೆ ಬೆಳೆದಿದ್ದಾರೆ. 

ಎರೆಹುಳು ತೊಟ್ಟಿ ನಿರ್ಮಾಣ:

ಜಮೀನಿನಲ್ಲಿ ನಾಲ್ಕು ಎರೆಹುಳು ತೊಟ್ಟಿ ನಿರ್ಮಿಸಿದ್ದಾರೆ. ಜೊತೆಗೆ ನಿರಂತರ ಆದಾಯಗಳಿಸುವ ಉದ್ದೇಶದಿಂದ ಜೇನುಕೃಷಿ, ಕುರಿ ಸಾಕಾಣಿಕೆ, ಹಸು ಸಾಕಾಣಿಕೆ ಮಾಡುತ್ತಿದ್ದಾರೆ. ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿ ಮೀನು ಸಾಕಾಣಿಕೆ ಮಾಡಿದ್ದಾರೆ.

ನಮ್ಮ ಜಮೀನಿನಲ್ಲಿ 16 ವರ್ಷಗಳಿಂದ ಒಂದು ಎಕೆರೆಯಲ್ಲಿ ಟೊಮೆಟೊ ಬೀಜೋತ್ಪಾದನೆಯಲ್ಲಿ ತೊಡಗಿಕೊಂಡಿದ್ದೇನೆ. ಒಂದು ಎಕರೆ ವಿಸ್ತೀರ್ಣದಲ್ಲಿ ಪ್ರತಿ 3 ಅಡಿಗೆ ಒಂದರಂತೆ ಸುಮಾರು 3,500 ಟೊಮೆಟೊ ಸಸಿಗಳನ್ನು ಬೆಳೆಸಲಾಗಿದೆ. ಅಂದಾಜು 40 ಕೆ.ಜಿ. ಬೀಜದ ಇಳುವರಿಯ ಲೆಕ್ಕಾಚಾರವಿದೆ.

‘ಕೆ.ಜಿ. ಗೆ ₹12 ಸಾವಿರದಿಂದ ₹14 ಸಾವಿರ ದರ ಸಿಕ್ಕರೆ ಸುಮಾರು ₹6 ಲಕ್ಷ ನಿರೀಕ್ಷಿಸಲಾಗಿದೆ. ಇದರಲ್ಲಿ ಖರ್ಚು ತೆಗೆದು ಸುಮಾರು ₹3 ರಿಂದ ₹4 ಲಕ್ಷ ಆದಾಯವನ್ನು ಪ್ರತಿ ವರ್ಷ ಪಡೆಯಬಹುದಾಗಿದೆ’ ಎನ್ನುತ್ತಾರೆ ಪರಮೇಶಪ್ಪ ಹಲಗೇರಿ.

ಸಾವಯವ ಪದ್ಧತಿ:

ಪ್ರತಿಶತ 75ರಷ್ಟು ನಾವು ಇಲ್ಲಿ ಸಾವಯವ ಪದ್ಧತಿಗೆ ಅನುಗುಣವಾಗಿ ಎರೆಹುಳು ಗೊಬ್ಬರ, ಕುರಿಗೊಬ್ಬರ, ಉಪಯೋಗಿಸುತ್ತಿದ್ದು, ಶೇ 30ರಷ್ಟು ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಸಲಾಗುತ್ತಿದೆ. ಒಂದೊಮ್ಮೆ ಬೀಜಗಳ ಪರಿಶುದ್ಧತೆ, ಗುಣಮಟ್ಟ ಕಳಪೆಯಾದಲ್ಲಿ ಹಾನಿ ಸಂಭವ ಇರುತ್ತದೆ. ಇಂತಹ ಸಂದರ್ಭದಲ್ಲಿ ಬೀಜ ನೀಡಿದ ಕಂಪನಿಗಳು ಯಾವುದೇ ಪರಿಹಾರ ನೀಡುವುದಿಲ್ಲ. ಸರ್ಕಾರ ಇಂತಹ ಸಂದರ್ಭದಲ್ಲಿ ನೆರವಿಗೆ ಬರಬೇಕು ಎನ್ನುವುದು ನನ್ನ ಅನಿಸಿಕೆ ಎನ್ನುತ್ತಾರೆ ಪರಮೇಶಪ್ಪ.

ಇವರ ಕೃಷಿ ಚಟುವಟಿಕೆಗೆ ಪತ್ನಿ ಶೋಭಾ ಅವರ ಸಹಕಾರವಿದೆ. 15 ಕೂಲಿಕಾರ್ಮಿಕರು ನಿರಂತರವಾಗಿ ಪರಮೇಶಪ್ಪ ಅವರ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. 

‘ಕೃಷಿ ಪಂಡಿತ’ ಪ್ರಶಸ್ತಿಯ ಗರಿ

ಪರಮೇಶಪ್ಪ ಹಲಗೇರಿ ಅವರು ವಿವಿಧ ಸಂಘ ಸಂಸ್ಥೆಗಳಿಂದ ‘ಉತ್ತಮ ಕೃಷಿಕ’ ಪ್ರಶಸ್ತಿ ಪಡೆದಿದ್ದಾರೆ. 2019ರಲ್ಲಿ ಬೆಳಗಾವಿಯಲ್ಲಿ ಭಾರತೀಯ ಕೃಷಿಕ ಸಮಾಜದಿಂದ ‘ಪ್ರಗತಿಪರ ಕೃಷಿಕ ಪ್ರಶಸ್ತಿ’, ರಾಣೆಬೆನ್ನೂರಿನ ಹಿರೇಮಠ ಅನ್ನದಾತ ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಾರೆ. ಜಿಲ್ಲಾ ಕೃಷಿ ಇಲಾಖೆ ಹಾಗೂ ಆತ್ಮಯೋಜನೆ ಸಹಯೋಗದೊಂದಿಗೆ ಸರ್ಕಾರದ ‘ಜಿಲ್ಲಾ ಕೃಷಿ ಪಂಡಿತ’ ಪ್ರಶಸ್ತಿ ಪಡೆದಿದ್ದಾರೆ.

ಉತ್ತರ ಕರ್ನಾಟಕ ರೈತ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾಗಿ, ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕುರುವತ್ತಿ ಬಸವೇಶ್ವರ ನರ್ಸರಿ ಪ್ರಾರಂಭಿಸಿದ್ದು, ಇದರ ಮೂಲಕ ಅಡಿಕೆ ಸಸಿಗಳನ್ನು ಮಾರಾಟ ಮಾಡುತ್ತಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು