ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ವಾರಾಂತ್ಯ ಕರ್ಫ್ಯೂಗೆ ಮಿಶ್ರ ಪ್ರತಿಕ್ರಿಯೆ

ಮಾಸ್ಕ್‌ ಧರಿಸದವರಿಗೆ ದಂಡ ಹಾಕಿದ ಪೊಲೀಸರು: ಅಂಗಡಿ ಮುಂಗಟ್ಟುಗಳು ಬಂದ್‌
Last Updated 8 ಜನವರಿ 2022, 16:13 IST
ಅಕ್ಷರ ಗಾತ್ರ

ಹಾವೇರಿ: ಕೊರೊನಾ ಮೂರನೇ ಅಲೆ ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ವಾರಾಂತ್ಯ ಕರ್ಫ್ಯೂ’ಗೆ ನಗರ ಸೇರಿದಂತೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಶುಕ್ರವಾರ ರಾತ್ರಿ 8ರಿಂದ ಆರಂಭಗೊಂಡಿರುವ ಕರ್ಫ್ಯೂ ಶನಿವಾರವಿಡೀ ಮುಂದುವರಿಯಿತು. ಜನರ ಅನಗತ್ಯ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಕೆಲವು ಮುಖ್ಯ ರಸ್ತೆಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿ, ವಾಹನ ಸಂಚಾರ ನಿಯಂತ್ರಿಸಲಾಯಿತು. ಹಾವೇರಿ ನಗರದ ಪಿ.ಬಿ. ರಸ್ತೆಯಲ್ಲಿ ಮಾಸ್ಕ್‌ ಧರಿಸದೇ ಬೈಕ್‌ ಮತ್ತು ಕಾರುಗಳಲ್ಲಿ ಬಂದವರನ್ನು ಪೊಲೀಸರು ತಡೆದು ತಲಾ ₹100 ದಂಡ ಹಾಕಿದರು.

ಹಾಲು, ಹಣ್ಣು, ತರಕಾರಿ, ಮಾಂಸ, ದಿನಸಿ ಸೇರಿದಂತೆ ಅಗತ್ಯ ಸೇವೆಗಳ ಮಳಿಗೆಗಳು ಎಂದಿನಂತೆ ಇಡೀ ದಿನ ವ್ಯಾಪಾರ ನಡೆಸಿದವು. ಮೆಡಿಕಲ್‌ ಸ್ಟೋರ್‌, ಕ್ಲಿನಿಕ್‌ ಮತ್ತು ಆಸ್ಪತ್ರೆಗಳು ತೆರೆದಿದ್ದವು. ಸಿನಿಮಾ ಮಂದಿರ, ಬಾರ್, ವಾಣಿಜ್ಯ ಮಳಿಗೆಗಳು ಬಾಗಿಲು ಮುಚ್ಚಿದ್ದವು. ಸರ್ಕಾರಿ ಕಚೇರಿ ಮತ್ತು ಶಾಲೆಗಳು ಮುಚ್ಚಿದ್ದವು.

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ‘ಪಾರ್ಸಲ್‌’ ಸೇವೆ ಲಭ್ಯವಿತ್ತು. ದೂರದ ಊರುಗಳಿಂದ ಬಸ್‌ಗಳಲ್ಲಿ ಬಂದ ಜನರು ಹೋಟೆಲ್‌ನಲ್ಲೇ ಊಟ ಮಾಡಲು ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದ್ದ ದೃಶ್ಯ ಕಂಡು ಬಂದಿತು. ಕೆಲ ಹೋಟೆಲ್‌ ಮಾಲೀಕರು ಒಳಗಡೆ ಉಪಾಹಾರ ಸೇವಿಸಲು ಅವಕಾಶ ಮಾಡಿಕೊಟ್ಟರು. ಹಾವೇರಿ ನಗರದ ಗುರುಭವನದ ಸಮೀಪದ ರಸ್ತೆ ಬದಿಯ ಚಾಟ್ಸ್‌ ಸೆಂಟರ್‌ಗಳು ಬಂದ್‌ ಆಗಿದ್ದವು.

ಬಸ್‌, ಆಟೊ ಸಂಚಾರ:ಸದಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಹಾವೇರಿ ಕೇಂದ್ರೀಯ ಬಸ್‌ ನಿಲ್ದಾಣದಲ್ಲಿ ಕಡಿಮೆ ಸಂಖ್ಯೆಯ ಪ್ರಯಾಣಿಕರು ಕಂಡು ಬಂದರು. ಬಸ್‌ಗಳ ಸಂಖ್ಯೆಯೂ ಕಡಿಮೆಯಿತ್ತು. ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಆಟೊ, ಟ್ಯಾಕ್ಸಿ ಸಂಚಾರ ನಡೆಸಿದವು.

ಸಂಜೆ 4 ಗಂಟೆಯ ನಂತರ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಯಿತು. ಜನರು ಕೂಡ ತಿನಿಸುಗಳನ್ನು ಖರೀದಿಸಲು ಮನೆಗಳಿಂದ ಹೊರ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT