ಬಿಜೆಪಿ ಒಲವಿಗೆ ‘ಕೈ’ ಭ್ರಮನಿರಸನ: ಶಾಸಕ ಬಸವರಾಜ ಬೊಮ್ಮಾಯಿ

ಸೋಮವಾರ, ಮೇ 27, 2019
33 °C
ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಹೇಳಿಕೆ

ಬಿಜೆಪಿ ಒಲವಿಗೆ ‘ಕೈ’ ಭ್ರಮನಿರಸನ: ಶಾಸಕ ಬಸವರಾಜ ಬೊಮ್ಮಾಯಿ

Published:
Updated:
Prajavani

ಹಾವೇರಿ: ಪ್ರಧಾನಿ ನರೇಂದ್ರ ಮೋದಿ ಆಡಳಿತದ ಮೇಲಿನ ವಿಶ್ವಾಸ, ಯುವ ಮತದಾರರ ಒಲವು ಹಾಗೂ ಕಾಂಗ್ರೆಸ್ ಬಗೆಗಿನ ಭ್ರಮನಿರಸನವು ಕ್ಷೇತ್ರದಲ್ಲಿ ಸಾಂಪ್ರದಾಯಿಕ ಕಾಂಗ್ರೆಸ್ ಮತದಾರರನ್ನೂ ಬಿಜೆಪಿಯತ್ತ ಸೆಳೆದಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಹಣ ಬಲ, ಆಡಳಿತ ಯಂತ್ರ ದುರುಪಯೋಗದ ಮೂಲಕ ಗೆಲ್ಲಲು ಯತ್ನಿಸುತ್ತಿರುವ ಕಾಂಗ್ರೆಸ್‌ಗೆ ಮತದಾರರು  ತಕ್ಕ ಉತ್ತರ ನೀಡಲಿದ್ದಾರೆ ಎಂದು ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕಾಂಗ್ರೆಸ್ ಪಾಲಿಗೆ ಮೋದಿ ಸಿಂಹಸ್ವಪ್ನವಾಗಿದ್ದಾರೆ. ಈ ಭಯದಿಂದಾಗಿ ಖುದ್ದು ಸಿದ್ದರಾಮಯ್ಯನವೂ ಭಾಷಣದಲ್ಲಿ ಮೋದಿ, ಮೋದಿ, ಮೋದಿ ಎನ್ನುತ್ತಿದ್ದಾರೆ ಎಂದು ಕುಟುಕಿದ ಬೊಮ್ಮಾಯಿ, ಜನತೆಗೆ ಅಭ್ಯರ್ಥಿಗಳ ಮುಖದಲ್ಲೂ ಮೋದಿ ಕಾಣುತ್ತಿದ್ದಾರೆ ಎಂದರು.

ಅಂದು ಕಾಂಗ್ರೆಸ್ಸಿಗರು ಇಂದಿರಾ ಗಾಂಧಿ ಹೆಸರಿನಲ್ಲಿ ಮತ ಕೇಳಿದ್ದರು. ಆದರೆ, ಈ ಬಾರಿ ರಾಹುಲ್‌ ಗಾಂಧಿ ಹೆಸರು ಯಾಕೆ ಹೇಳುತ್ತಿಲ್ಲ ಎಂದು ವ್ಯಂಗ್ಯವಾಡಿದ ಅವರು, ಚುನಾವಣೆಗೂ ಮೊದಲೇ ಸೋಲು ಒಪ್ಪಿಕೊಂಡಿರುವ ಕಾಂಗ್ರೆಸ್, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಅವರದ್ದು ಎಣ್ಣೆ–ಸೀಗೆಕಾಯಿ ಸಂಬಂಧವಾಗಿದ್ದು, ಇಬ್ಬರೂ ಸೋಲ್ತಾರೆ. ಬಿಜೆಪಿ 20ಕ್ಕೂ ಹೆಚ್ಚು ಸೀಟು ಗೆಲ್ಲಲಿದೆ ಎಂದರು.

ನಮ್ಮ (ಬಿಜೆಪಿ) ಅಭ್ಯರ್ಥಿಯ ಸಾಧನೆಗಳನ್ನು ಜನತೆಯೇ ಹೇಳುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲೇ ಜನತೆ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿದ್ದರೆ, ಸಮ್ಮಿಶ್ರ ಸರ್ಕಾರವು ಇನ್ನೂ ಟೇಕಾಫ್‌ ಆಗಿಲ್ಲ ಎಂದರು.

ಸಮ್ಮಿಶ್ರ ಸರ್ಕಾರಕ್ಕೆ ಜನತೆಯ ಬೆಂಬಲ ಹಾಗೂ ನೈತಿಕತೆಯ ನೆಲಗಟ್ಟುಗಳು ಇಲ್ಲ. ಹೀಗಾಗಿ, ಈ ಬಾರಿ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಸುಮಾರು 20 ಶಾಸಕರು ಈಗಾಗಲೇ ಜನಾಭಿಪ್ರಾಯಕ್ಕೆ ಮನ್ನಣೆ ನೀಡಲು ಸಿದ್ಧರಾಗಿದ್ದಾರೆ ಎಂದರು.

ವೀರಶೈವ ಮತ್ತು ಲಿಂಗಾಯತರು ಪ್ರಬುದ್ಧರು. ಅವರು ಕಳೆದ ವರ್ಷವೇ ಕಾಂಗ್ರೆಸ್‌ಗೆ ಪಾಠ ಕಲಿಸಿದ್ದಾರೆ. ಕಾಂಗ್ರೆಸ್‌ ಮತ್ತೆ ಅನುಕೂಲ ಸಿಂಧು ರಾಜಕಾರಣ ಮಾಡಿದರೆ, ಮತದಾನದ ಮೂಲಕ ತಕ್ಕ ಶಿಕ್ಷೆ ನೀಡಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮುಖಂಡರಾದ ಭೋಜರಾಜ ಕರೂದಿ, ಮಂಜುನಾಥ ಕುನ್ನೂರ, ವಿರೂಪಾಕ್ಷಪ್ಪ ಕಡ್ಲಿ, ಸಿದ್ದರಾಜ ಕಲಕೋಟಿ, ಪ್ರಭು ಹಿಟ್ನಳ್ಳಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !