ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯದ ಜತೆ ಯೋಗ, ಕ್ರೀಡೆಗೂ ಆದ್ಯತೆ

ಹೆಡಿಯಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ: ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ
Last Updated 20 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಖಾಸಗಿ ಶಾಲೆಗಳ ಭರಾಟೆಯ ನಡುವೆಯೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಾಲೆಗಳಲ್ಲಿ ತಾಲ್ಲೂಕಿನ ಹೆಡಿಯಾಲ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಒಂದಾಗಿದೆ.

ಈ ಶಾಲೆಯು 1901ರಲ್ಲಿ ಪ್ರಾರಂಭವಾಗಿದೆ. ದಾಖಲಾತಿ ಮತ್ತು ಹಾಜರಾತಿಯಲ್ಲಿ ಬಹಳಷ್ಟು ಸಾಧನೆ ಮಾಡಿದೆ. ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಹೆಚ್ಚಾಗುತ್ತಿದೆ. 1 ರಿಂದ 7ನೇ ತರಗತಿವರೆಗೆ 82 ಬಾಲಕರು, 89 ಬಾಲಕಿಯರು ಸೇರಿ ಒಟ್ಟು 171 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ನುರಿತ, 7 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸ್ಥಳೀಯವಾಗಿ ಈ ಶಾಲೆ ಯೋಗ, ಕ್ರೀಡೆ, ಸಾಂಸ್ಕೃತಿಕ ಮತ್ತು ಕಲಿಕಾ ಗುಣಮಟ್ಟಕ್ಕೂ ಹೆಸರು ವಾಸಿಯಾಗಿದೆ.

ಇಲ್ಲಿನ ರೈತರು ಸೀಡ್ಸ್‌ ಉತ್ಪಾದನೆಯಲ್ಲಿ ಹೆಚ್ಚು ಪ್ರಗತಿ ಹೊಂದಿದ್ದಾರೆ. ಹೀಗಾಗಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಿದ್ದಾರೆ. ಪಟ್ಟಣ ಪ್ರದೇಶದ ಖಾಸಗಿ ಶಾಲೆಗೆ ಸೇರಿದ ಮಕ್ಕಳು ಮತ್ತೆ ಸರ್ಕಾರಿ ಶಾಲೆಯತ್ತ ಮುಖ ಮಾಡಿದ್ದಾರೆ ಎನ್ನುತ್ತಾರೆ ಜಗನ್ನಾಥರಾವ್‌ ಕುಲಕರ್ಣಿ.

ಈ ಶಾಲೆಯು ಸ್ವಂತ ಕಟ್ಟಡ ಹೊಂದಿದ್ದು, 10 ಕೊಠಡಿಗಳಿದ್ದು, ಅವುಗಳಲ್ಲಿ 8 ಕೊಠಡಿಗಳು ಶಿಥಿಲಗೊಂಡಿವೆ. ಈ ಶಾಲೆಯಲ್ಲಿ ಹೆಚ್ಚಾಗಿ ಬಡ, ಕೃಷಿ ಮತ್ತು ಕೂಲಿ ಕಾರ್ಮಿಕರ ಮಕ್ಕಳು ಓದುತ್ತಿದ್ದಾರೆ. ಮೂಲ ಸೌಲಭ್ಯದಿಂದ ವಂಚಿತವಾಗಿತ್ತು. ಕೊಠಡಿಗಳ ಕೊರತೆ ಕಂಡು ಬಂದಿತ್ತು. ನೆರೆ ಪರಿಹಾರ ಯೋಜನೆಯಲ್ಲಿ ಒಂದು ಕೊಠಡಿ ಮಂಜೂರಾಗಿದೆ.

ದಾನಿಗಳು ಕೂಡ ಶಾಲೆಗೆ ಮೂಲಸೌಲಭ್ಯ ನೀಡಲು ಸಹಕಾರಿಯಾಗಿದ್ದಾರೆ. ಇದೇ ಶಾಲೆಯಲ್ಲಿ ಕಲಿತು ಶಿಕ್ಷಕರಾಗಿ ಬೇರೆ ಬೇರೆ ಕಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ವೃಂದ ಈ ಸರ್ಕಾರಿ ಶಾಲೆಯನ್ನು ಉನ್ನತೀಕರಿಸಲು ಮುಂದಾಗಿದ್ದಾರೆ.

ತಾವು ಕಲಿತ ಶಾಲೆಯಲ್ಲಿ ಮಕ್ಕಳು ಕಂಪ್ಯೂಟರ್‌ ಆಧಾರಿತ ಶಿಕ್ಷಣ ಹೊಂದಬೇಕು. ಸುಸಜ್ಜಿತ ಗ್ರಂಥಾಲಯ ತೆರೆಯಲು ಆಸಕ್ತಿ ಹೊಂದಿದ್ದು, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಕಂಪ್ಯೂಟರ್‌ ಮತ್ತು ಸ್ಮಾರ್ಟ್‌ ಕ್ಲಾಸ್‌ ತೆರೆಯಲು ಸಭೆ ಸೇರಿ ಹಣ ಸಂಗ್ರಹಿಸಲು35 ಶಿಕ್ಷಕರು ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿಕೊಂಡು ಬ್ಯಾಂಕ್‌ ಖಾತೆ ತೆರೆದು ಹಣ ಸಂಗ್ರಹಿಸುತ್ತಿದ್ದಾರೆ ಎನ್ನುತ್ತಾರೆ ನಿವೃತ್ತ ಶಿಕ್ಷಕ ಹಾಗೂ ಮಾರ್ಗದರ್ಶಕರಾದ ಆರ್‌.ಬಿ.ತೋಟಗೇರ ಮತ್ತುಮುಖ್ಯ ಶಿಕ್ಷಕ ಬಿ.ಪಿ.ಶಿಡೇನೂರು.

ತರಳಬಾಳು ಶಾಖಾ ಮಠ ಸಾಣೆಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಇದೇ ಸರ್ಕಾರಿ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ. ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಇಲ್ಲಿನ ಶಿಕ್ಷಕರು ಮಕ್ಕಳ ಮನೆ ಮನೆಗೆ ತೆರಳಿ ಮಕ್ಕಳನ್ನು ಶಾಲೆಗೆ ಕರೆ ತಂದು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪಾಠ ಪ್ರವಚನ ಮಾಡಿ ಅವರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕ ನಾಗರಾಜ ಕುಸಗೂರ ಅವರು ಮಕ್ಕಳನ್ನು ಕ್ಲಸ್ಟರ್‌ ಮಟ್ಟದಲ್ಲಿಯೇ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಲು ತರಬೇತಿ ನೀಡಿದ್ದಾರೆ ಎನ್ನುತ್ತಾರೆ ಎಸ್‌ಡಿಎಂಸಿ ಸದಸ್ಯರು.

ಡಿಜಿಟಲ್‌ ಗ್ರಂಥಾಲಯ ನಿರ್ಮಾಣ, ಕೈತೋಟ ನಿರ್ಮಾಣ ಮಾಡುವ ಯೋಜನೆ ಇದೆ. ಮಕ್ಕಳಿಗೆ ಯೋಗ ಶಿಕ್ಷಣ ಕೂಡ ಕಲಿಸಲಾಗುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಕ್ರೀಡೆ, ವಿಜ್ಞಾನ ಮತ್ತು ಸಾಂಸ್ಕೃತಿಕ ಚಟುವಟಕೆಗಳಲ್ಲಿ ಬಹಳಷ್ಟು ಸಾಧನೆ ಮಾಡಿದ್ದಾರೆ. ಶಿಕ್ಷಣದೊಂದಿಗೆ ವ್ಯಕ್ತಿತ್ವ ವಿಕಸನಕ್ಕೂ ಒತ್ತು ನೀಡಲಾಗಿದೆ ಎನ್ನುತ್ತಾರೆ ಎಸ್‌ಎಡಿಎಂಸಿ ಅಧ್ಯಕ್ಷ ಬಸವರಾಜ ಬಾರ್ಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT