ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ‘ಕೋಳೂರು ಪೇರಲ’ ಕೇಳೋರೇ ಇಲ್ಲ!

ತೋಟದಲ್ಲೇ ಉದುರಿ ಕೊಳೆಯುತ್ತಿರುವ ಹಣ್ಣುಗಳು: ಮಾರುಕಟ್ಟೆ ಸೌಲಭ್ಯವಿಲ್ಲದೆ ಕಂಗಾಲಾದ ರೈತರು
Last Updated 3 ಜೂನ್ 2021, 5:07 IST
ಅಕ್ಷರ ಗಾತ್ರ

ಹಾವೇರಿ: ಪೌಷ್ಟಿಕಾಂಶ ಮತ್ತು ರುಚಿಯಲ್ಲಿ ಹೆಸರುವಾಸಿಯಾಗಿರುವ ‘ಕೋಳೂರು ಪೇರಲ’ವನ್ನು ಖರೀದಿಸುವವರು ಗತಿಯಿಲ್ಲದೆ, ತೋಟದಲ್ಲೇ ನಿತ್ಯ ಸಾವಿರಾರು ಹಣ್ಣುಗಳು ಉದುರಿ ಕೊಳೆಯುತ್ತಿವೆ.

ತಾಲ್ಲೂಕಿನ ಕೋಳೂರು ಗ್ರಾಮದ ಸುಮಾರು 50ಕ್ಕೂ ಹೆಚ್ಚು ರೈತರು 460 ಎಕರೆಯಲ್ಲಿ ಪೇರಲ (ಸೀಬೆ) ಗಿಡಗಳನ್ನು ಬೆಳೆಸಿದ್ದಾರೆ. ಕಳೆದ ವರ್ಷ ಲಾಕ್‌ಡೌನ್‌ನಿಂದ ತೀವ್ರ ನಷ್ಟ ಅನುಭವಿಸಿದ್ದ ರೈತರು ಈ ಬಾರಿಯಾದರೂ ಉತ್ತಮ ಆದಾಯ ಸಿಗಬಹುದು ಎಂದು ನಿರೀಕ್ಷಿಸಿದ್ದರು.

ಆದರೆ, ಈ ಬಾರಿಯೂ ಸಾರಿಗೆ ಮುಷ್ಕರ, ಜನತಾ ಕರ್ಫ್ಯೂ, ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋವಿಡ್‌ ನಿರ್ಬಂಧಗಳು ರೈತರ ಬದುಕನ್ನು ಬೀದಿಗೆ ತಳ್ಳಿವೆ. ಕಣ್ಣ ಮುಂದೆಯೇ ಉದುರಿ ಕೊಳೆಯುತ್ತಿರುವ ಹಣ್ಣುಗಳನ್ನು ನೋಡಿ ರೈತರು ಕಣ್ಣೀರಿಡುತ್ತಿದ್ದಾರೆ.

ಆರಂಭದಲ್ಲಿ ರೈತರು ‘ಜವಾರಿ ಪೇರಲ’ ಗಿಡಗಳನ್ನು ಬೆಳೆಸಿದ್ದರು. 30 ವರ್ಷಗಳಿಂದೀಚೆಗೆ ಹೈಬ್ರಿಡ್‌ ತಳಿಗಳಾದ ಅಲಹಾಬಾದ್‌ ಸಫೇದ್‌, ಲಕ್ನೋ–49, ತೈವಾನ್‌ ಪಿಂಕ್‌ ಎಂಬ ತಳಿಯ ಗಿಡಗಳನ್ನು ಪೋಷಿಸಿ, ಉತ್ತಮ ಆದಾಯ ಪಡೆಯುತ್ತಿದ್ದರು. ಎರಡು ವರ್ಷಗಳಿಂದ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ರೈಲು ಸ್ಥಗಿತ: ರೈಲು ಪ್ರಯಾಣಿಕರೇ ಪೇರಲ ಹಣ್ಣಿನ ಪ್ರಮುಖ ಗ್ರಾಹಕರಾಗಿದ್ದರು. ಹೀಗಾಗಿಕೋಳೂರು, ಕಳಸೂರು, ಗಣಜೂರು ಗ್ರಾಮಗಳ ಸುಮಾರು 200 ಯುವಕರು ನಿತ್ಯ 300ಕ್ಕೂ ಅಧಿಕ ಪೇರಲ ಬುಟ್ಟಿಗಳನ್ನು ರಾಣೆಬೆನ್ನೂರು, ಹರಿಹರ ಮತ್ತು ದಾವಣಗೆರೆ ಕಡೆ ಕೊಂಡೊಯುತ್ತಿದ್ದರು. ಆದರೆ,ಲಾಕ್‌ಡೌನ್‌ ನಿರ್ಬಂಧದಿಂದ ಬಹುತೇಕ ಪ್ಯಾಸೆಂಜರ್‌ ರೈಲುಗಳ ಸಂಚಾರ ಸ್ಥಗಿತಗೊಂಡಿದ್ದು, ಮಾರಾಟ ನಿಂತು ಹೋಗಿದೆ.

₹18 ಲಕ್ಷ ನಷ್ಟ: ‘3 ಎಕರೆಯಲ್ಲಿ ಪೇರಲ ಗಿಡಗಳನ್ನು ಬೆಳೆಸಿದ್ದೇನೆ. ವರ್ಷಕ್ಕೆ ₹15ರಿಂದ 20 ಲಕ್ಷ ಆದಾಯ ಸಿಗುತ್ತಿತ್ತು. 10 ರೈಲುಗಳಲ್ಲಿ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದೆ. ದಿನಕ್ಕೆ 5 ಸಾವಿರ ಹಣ್ಣು ಖರ್ಚಾಗುತ್ತಿದ್ದವು. ಈಗ ರೈಲು ಸಂಚಾರವಿಲ್ಲದ ಕಾರಣ ಹಣ್ಣುಗಳನ್ನು ಕೇಳುವವರೇ ದಿಕ್ಕಿಲ್ಲಂತಾಗಿದೆ. ಕಳೆದ ವರ್ಷ ಮತ್ತು ಈ ವರ್ಷದ ಲಾಕ್‌ಡೌನ್‌ನಿಂದ ಒಟ್ಟು ₹18 ಲಕ್ಷ ನಷ್ಟವಾಗಿದೆ’ ಎಂದು ಕೋಳೂರು ರೈತ ಮಂಜುನಾಥ ಅಣ್ಣಿಗೇರಿ ಸಮಸ್ಯೆ ತೋಡಿಕೊಂಡರು.

‘ಕಳೆದ ಬಾರಿ ಲಾಕ್‌ಡೌನ್‌ ಇದ್ದರೂ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಹಣ್ಣುಗಳನ್ನು ಕಳುಹಿಸಲು ಅವಕಾಶ ಸಿಕ್ಕಿತ್ತು. ಈ ಬಾರಿ ಹೊರ ಜಿಲ್ಲೆಗಳಿಗೂ ಕಳುಹಿಸಲು ಸಾಧ್ಯವಾಗುತ್ತಿಲ್ಲ.ಕಳೆದ ವರ್ಷ ಕೇವಲ ₹3 ಲಕ್ಷ ಆದಾಯ ಸಿಕ್ಕಿತು. ಈ ಬಾರಿ ದಿನಕ್ಕೆ ನಾಲ್ಕೈದು ಬುಟ್ಟಿಗಳನ್ನು ಮಾತ್ರ ಸ್ಥಳೀಯ ವ್ಯಾಪಾರಿಗಳಿಗೆ ಮಾರುತ್ತಿದ್ದೇನೆ. ನಿತ್ಯ 2 ಸಾವಿರ ಹಣ್ಣು ಮಾರಾಟವಾದರೆ, 3 ಸಾವಿರ ಹಣ್ಣು ತೋಟದಲ್ಲೇ ಕೊಳೆಯುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬಿಟ್ಟ ಹಣ್ಣು ಮಣ್ಣುಪಾಲು: ‘ತೋಟಕ್ಕೆ ಬಳಸುವ ಕೊಟ್ಟಿಗೆ ಗೊಬ್ಬರ, ಕೀಟನಾಶಕ, ಕಳೆನಾಶಕ, ಉಳುಮೆ, ಕೂಲಿ ಕಾರ್ಮಿಕರ ಖರ್ಚು ಕೂಡ ಹುಟ್ಟುತ್ತಿಲ್ಲ. ಸಾಗಣೆಗೆ ಬಸ್‌, ರೈಲು ಸೌಲಭ್ಯವಿಲ್ಲ. ಬೆಳಿಗ್ಗೆ 6ರಿಂದ 10ರವರೆಗೆ ವಾರದಲ್ಲಿ ಎರಡು ಮೂರು ದಿನ ಮಾತ್ರ ಅವಕಾಶ ಇರುವುದರಿಂದ ವ್ಯಾಪಾರಿಗಳು ಹಣ್ಣು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಕೊಳೆತ ಹಣ್ಣುಗಳನ್ನು ಆಯ್ದು, ತೋಟದ ಪಕ್ಕ ಗುಂಡಿ ತೋಡಿ ಮುಚ್ಚುತ್ತಿದ್ದೇವೆ’ ಎಂದು ಕೋಳೂರು ರೈತ ಮುತ್ತಣ್ಣ ಅಂಗಡಿ, ಸತೀಶ ಕ್ಯಾಲಕೊಂಡ ಮುಂತಾದ ರೈತರು ನೋವು ತೋಡಿಕೊಂಡರು.

‘ಕೈಗಾರಿಕಾ ಪ್ರದೇಶಕ್ಕೆ ಭೂಮಿ ಕೊಡಲ್ಲ’
‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯವರುಕೈಗಾರಿಕಾ ಎಸ್ಟೇಟ್‌ ನಿರ್ಮಿಸಲು ಕೋಳೂರು ಸುತ್ತಮುತ್ತಲಿನ 407 ಎಕರೆ ಜಾಗ ಗುರುತಿಸಿದ್ದಾರೆ. ಈ ಜಾಗ ಕೃಷಿಗೆ ಫಲವತ್ತಾದ ಭೂಮಿಯಾಗಿದ್ದು, ಪೇರಲ, ಮಾವು, ಸಪೋಟ (ಚಿಕ್ಕು) ತೋಟಗಳಿಂದ ಕಂಗೊಳಿಸುತ್ತಿದೆ. ಇಂಥ ಜಾಗವನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ’ ಎಂದು ಕೋಳೂರು ರೈತ ಮಂಜುನಾಥ ಅಣ್ಣಿಗೇರಿ ತಿಳಿಸಿದರು.

ಹೆದ್ದಾರಿ ಪಕ್ಕ ಸಾವಿರಾರು ಎಕರೆ ಬೀಳು ಜಮೀನು, ಗುಡ್ಡಗಳಿದ್ದರೂ ಅಧಿಕಾರಿಗಳು ರೈತರ ಕೃಷಿಭೂಮಿ ಮೇಲೆ ಕಣ್ಣಾಕಿದ್ದಾರೆ. ಮಗುವನ್ನು ಬೆಳೆಸಿದಂತೆ ಈ ತೋಟಗಳನ್ನು ಆರೈಕೆ ಮಾಡಿದ್ದೇವೆ. ಇಂಥ ಬಯಲು ಪ್ರದೇಶದಲ್ಲಿ ಹಸಿರಿನಿಂದ ಕಂಗೊಳಿಸುವ ಭೂಮಿಯನ್ನು ಹಾಳು ಮಾಡಲು ಬಿಡುವುದಿಲ್ಲ ಎಂದು ರೈತರು ಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT