ಮಂಗಳವಾರ, ಜನವರಿ 21, 2020
28 °C
ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಸಮಾರೋಪ

ಸೋಲು–ಗೆಲುವು ಸಮನಾಗಿ ಸ್ವೀಕರಿಸಿ: ಶಾಸಕ ನೆಹರು ಓಲೇಕಾರ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕ್ರೀಡೆಗಳಲ್ಲಿ ಸೋಲು– ಗೆಲುವು ಸಾಮಾನ್ಯ. ಯಾರೇ ಸೋತರೂ, ಗೆದ್ದರೂ ಕೂಡಾ ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು. ಪೊಲೀಸ್ ಕರ್ತವ್ಯದಲ್ಲಿ ದೈಹಿಕ ಹಾಗೂ ಮಾನಸಿಕ ದೃಢತೆ ಅವಶ್ಯ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಮುಕ್ತಾಯ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಕ್ರೀಡಾಕೂಟಗಳು ಕೇವಲ ಕ್ರೀಡೆಗೆ ಮಾತ್ರ ಸೀಮಿತವಾಗಿರಬೇಕು. ಕ್ರೀಡೆಗಳಲ್ಲಿ ಯಾರೂ ದ್ವೇಷ ಇಟ್ಟುಕೊಳ್ಳಬಾರದು. ಭಾಗವಹಿಸುವ ಅವಕಾಶಗಳು ಸಿಕ್ಕಾಗ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪೊಲೀಸ್‌ ಇಲಾಖೆಯಲ್ಲಿ ಪ್ರತಿದಿನವೂ ದೈಹಿಕ ಶ್ರಮವಿರುತ್ತದೆ. ಬಹಳ ಕೂತುಹಲದಿಂದ ನಡೆದ ಹಗ್ಗಜಗ್ಗಾಟವನ್ನು ನೋಡಿದರೆ ಕ್ರೀಡಾಪಟುಗಳಲ್ಲಿ ಸಮಬಲದ ಶಕ್ತಿಯಿದೆ ಎಂಬುದು ತಿಳಿಯುತ್ತದೆ. ಇಂತಹ ಕ್ರೀಡಾಕೂಟಕ್ಕೆ ಸಾರ್ವಜನಿಕರನ್ನು ಕರೆ ತನ್ನಿ ಎಂದರು.

ಕ್ರೀಡಾ ಸ್ಫರ್ಧಿಗಳ ಪಥ ಸಂಚಲನ ಜರುಗಿತು. ಕ್ರೀಡಾಕೂಟದ ಧ್ವಜಾರೋಹಣ ಹಾಗೂ ಧ್ವಜ ಸಮರ್ಪಣೆ ಮಾಡಲಾಯಿತು.

ವಾರ್ಷಿಕ ಕ್ರೀಡಾಕೂಟದ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಪ್ರಶಸ್ತಿ ವಿತರಿಸಲಾಯಿತು.

ಎಸ್ಪಿ ಕೆ.ಜಿ.ದೇವರಾಜು, ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಈರಣ್ಣ ಸಂಗೂರ, ಮಾಜಿ ಸಚಿವ ಆರ್.ಶಂಕರ್, ಡಿವೈಎಸ್‍ಪಿ ವಿಜಯಕುಮಾರ, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ಮುಸ್ಸಫ್ ಕರ್ಜಗಿ, ಜಿ.ಪಂ.ಸದಸ್ಯರು ಇದ್ದರು. 

ಫಲಿತಾಂಶ

ಕಬಡ್ಡಿಯಲ್ಲಿ ಹಾವೇರಿ ಉಪ ವಿಭಾಗ– ಪ್ರಥಮ, ಡಿಎಆರ್‌ ಹಾವೇರಿ–ದ್ವಿತೀಯ, ವಾಲಿಬಾಲ್‌ನಲ್ಲಿ ಡಿಎಆರ್‌ ಹಾವೇರಿ– ಪ್ರಥಮ, ಶಿಗ್ಗಾವಿ ಉಪ ವಿಭಾಗ– ದ್ವಿತೀಯ, ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ರಾಣೆಬೆನ್ನೂರು ಉಪವಿಭಾಗ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಎರಡೂ ತಂಡಗಳು ಸಮಬಲ ಸಾಧಿಸಿ ಪ್ರಶಸ್ತಿ ಹಂಚಿಕೊಂಡವು. ಕ್ರಿಕೆಟ್‌ನಲ್ಲಿ ಜಿಲ್ಲಾ ಪೊಲೀಸ್‌ ತಂಡ– ಪ್ರಥಮ, ಮಾಧ್ಯಮ ತಂಡ– ದ್ವಿತೀಯ ಸ್ಥಾನ ಗಳಿಸಿದವು. 

ಪುರುಷರ ವಿಭಾಗದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಂತೋಷ ನಾಯಕ ಹಾಗೂ ಮಹಿಳೆಯರ ವಿಭಾಗದಲ್ಲಿ ಯಶೋದಾ ಪೂಜಾರ ಮತ್ತು ವೀಣಾ ಹೊನ್ನಗೌಡರ ‘ವೀರಾಗ್ರಣಿ’ ಪ್ರಶಸ್ತಿ ಪಡೆದುಕೊಂಡರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು