ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮಿಷಕ್ಕೆ ಬಲಿಯಾಗದೆ ಕಾಂಗ್ರೆಸ್‌ ಗೆಲ್ಲಿಸಿ: ಯು.ಬಿ.ಬಣಕಾರ

Last Updated 14 ಮಾರ್ಚ್ 2023, 14:32 IST
ಅಕ್ಷರ ಗಾತ್ರ

ಹಿರೇಕೆರೂರು (ಹಾವೇರಿ): ‘ಹಿರೇಕೆರೂರು ಕ್ಷೇತ್ರಕ್ಕೆ ಕಪ್ಪುಚುಕ್ಕೆ ಬಂದಿರುವುದು ಬಿ.ಸಿ.ಪಾಟೀಲರಿಂದ. ಬಿ.ಸಿ.ಪಾಟೀಲ ಮುಕ್ತ ತಾಲ್ಲೂಕು ಮಾಡಲು ಮತದಾರರು ಪಣ ತೊಡಬೇಕು. ಸಿದ್ದರಾಮಯ್ಯನವರು ಸರ್ಕಾರ ರಚಿಸಲು ಇಲ್ಲಿಂದ ಕಾಂಗ್ರೆಸ್‌ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಳುಹಿಸಬೇಕು’ ಎಂದು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಯು.ಬಿ.ಬಣಕಾರ ಮನವಿ ಮಾಡಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆ’ಯಲ್ಲಿ ಅವರು ಮಾತನಾಡಿದರು. ಚುನಾವಣೆಯಲ್ಲಿ ಹಣದ ಆಮಿಷಕ್ಕೆ ಬಲಿಯಾಗದೆ, ಜನರ ಸಮಸ್ಯೆಗೆ ಸ್ಪಂದಿಸುವ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಕೋರಿದರು.

ಈ ಪ್ರಜಾಧ್ವನಿ ವಿಜಯ ಧ್ವನಿಯಾಗಿ ಮೊಳಗಲು ನೀವು ಆಶೀರ್ವಾದ ಮಾಡಬೇಕು. ಈ ಯುದ್ಧ ಕಾಂಗ್ರೆಸ್‌ ಗೆಲುವು ಸಾಧಿಸುವವರರೆಗೆ ನಿಲ್ಲಬಾರದು. ಸಿದ್ದರಾಮಯ್ಯನವರ ಆಶೀರ್ವಾದದಿಂದ ಗೆದ್ದು, ಕಾಂಗ್ರೆಸ್‌ ಪಕ್ಷಕ್ಕೆ ದ್ರೋಹ ಮಾಡಿದವರು ಬಿ.ಸಿ.ಪಾಟೀಲ್‌ ಎಂದು ಜರಿದರು.

ಹಿರೇಕೆರೂರಿಗೆ ಕೊಡುಗೆ:

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಹಿರೇಕೆರೂರು ತಾಲ್ಲೂಕಿಗೆ ಸಾಕಷ್ಟು ಕೆಲಸಗಳನ್ನು ಮಾಡಿಕೊಟ್ಟಿದ್ದೆ. ನಾನು ಸಿಎಂ ಆಗಿದ್ದಾಗ, ಬಿ.ಸಿ. ಪಾಟೀಲರು ಹೇಳುವ ಎಲ್ಲ ಕೆಲಸಗಳನ್ನು ಮಾಡಿಕೊಟ್ಟಿದ್ದೆ. ರಟ್ಟೀಹಳ್ಳಿಯನ್ನು ಹೊಸ ತಾಲ್ಲೂಕು ಮಾಡಿದ್ದು, ರಟ್ಟೀಹಳ್ಳಿ ಕೆರೆಗೆ ನೀರು ತುಂಬಿಸಿದ್ದು, ಗುಡ್ಡದ ಮಾದಾಪುರಕ್ಕೆ ನೀರು ತುಂಬಿಸಿದ್ದು ನಾನು. ಇದನ್ನು ತಮಟೆ ಹೊಡೆದುಕೊಂಡು ಪಾಟೀಲರು ಎಲ್ಲ ಕಡೆ ಹೇಳುತ್ತಿದ್ದರು. ಈಗ ಬಿಜೆಪಿಗೆ ಹೋದ ಮೇಲೆ ನಾನೇ ಕೆಲಸ ಮಾಡಿದೆ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಮಾತಿನಲ್ಲಿ ತಿವಿದರು.

ಮಾಜಿ ಶಾಸಕ ಬಿ.ಎಚ್‌. ಬನ್ನಿಕೋಡ ಮಾತನಾಡಿ, ನಾನು ಕಾಂಗ್ರೆಸ್‌ ಪಕ್ಷದ ತತ್ವ, ಸಿದ್ಧಾಂತಕ್ಕೆ ಬದ್ಧನಾಗಿರುವವನು. ಹೀಗಾಗಿ ಬಿಜೆಪಿಗೆ ಹೋಗಲಿಲ್ಲ. ಮತ ಕೊಟ್ಟವರ ಋಣ ತೀರಿಸಲು ಬಿ.ಸಿ.ಪಾಟೀಲರಿಗೆ ಜನರು ಮತ ಹಾಕಿದ್ದರು. ಆದರೆ, ಪಾಟೀಲರು ಗೆದ್ದು ಬಂದ ನಂತರ ಶ್ರೀಮಂತರು, ಗುತ್ತಿಗೆದಾರರನ್ನು ಬೆಳೆಸಿದರು. ಮತ ಹಾಕಿದವರನ್ನು ಮರೆತರು ಎಂದು ಟೀಕಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಬಿರುಗಾಳಿ: ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಸಲೀಂ ಅಹಮದ್‌ ಮಾತನಾಡಿ, ಪಕ್ಷಕ್ಕೆ ಮೋಸ ಮಾಡಿದವರಿಗೆ ತಕ್ಕ ಸಂದೇಶ ನೀಡಲು ಹಿರೇಕೆರೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು 25 ಸಾವಿರ ಮತಗಳಿಂದ ಗೆಲ್ಲಿಸಿ. ರಾಜ್ಯದಲ್ಲಿ ಕಾಂಗ್ರೆಸ್‌ ಬಿರುಗಾಳಿ ಎದ್ದಿದೆ, 150 ಸ್ಥಾನಗಳನ್ನು ಗೆಲ್ಲಲಿದೆ. ಶಾಂತಿ–ಸಹಬಾಳ್ವೆ ನೆಲೆಸಲು ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕಾಗಿದೆ. ಜನತಾದಳಕ್ಕೆ ನೀವು ಓಟು ಹಾಕಿದರೆ, ಬಿಜೆಪಿಗೆ ಓಟು ಹಾಕಿದಂತೆ ಎಂದು ಹೇಳಿದರು.

‘ನಮ್ಮನ್ನು ಕೊಲ್ಲಬಹುದು, ಸಿದ್ಧಾಂತವನ್ನಲ್ಲ’

‘ಒಬ್ಬ ಸಚಿವ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಅಂತಾನೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಸಲೀಂ ಅಹಮದ್‌ ಅವರನ್ನು ಕೊಲ್ಲಬಹುದು. ನಮ್ಮ ತತ್ವ, ಸಿದ್ಧಾಂತ ಹಾಗೂ ವಿಚಾರಧಾರೆಗಳನ್ನು ಕೊಲ್ಲಲು ಸಾಧ್ಯವಿಲ್ಲ. ಇಂದಿರಾಗಾಂಧಿ, ರಾಜೀವ್‌ಗಾಂಧಿ ಈ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಭಾವಾವೇಶದಿಂದ ನುಡಿದರು.

ಭ್ರಷ್ಟಾಚಾರದಲ್ಲಿ ಉದಯವಾದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ವಿಜಯ ಸಂಕಲ್ಪ ಯಾತ್ರೆ ಬದಲು ಕ್ಷಮೆಯಾಚನೆ ಯಾತ್ರೆ ಮಾಡಿ. ಬಡವರಿಗೆ ಮನೆ ಕೊಡಲಿಲ್ಲ, ಯುವಕರಿಗೆ ಉದ್ಯೋಗ ಕೊಡಲಿಲ್ಲ, ಪೆಟ್ರೋಲ್‌, ಗ್ಯಾಸ್ ಬೆಲೆ ಇಳಿಸಲಿಲ್ಲ ಎಂದು ಜನರ ಬಳಿ ಕ್ಷಮೆಯಾಚಿಸಿ ಎಂದು ಹೇಳಿದರು.

‘ಗೆಲ್ಲುವವರಿಗೆ ಕಾಂಗ್ರೆಸ್‌ ಟಿಕೆಟ್‌’

ಹಿರೇಕೆರೂರಿನಲ್ಲಿ ಐದಾರು ಮಂದಿ ಕಾಂಗ್ರೆಸ್‌ ಟಿಕೆಟ್‌ ಕೇಳುತ್ತಿದ್ದಾರೆ. ಯಾರು ಗೆಲ್ಲುತ್ತಾರೋ ಅವರಿಗೆ ಟಿಕೆಟ್‌ ಕೊಡುತ್ತೇವೆ. ಒಬ್ಬರಿಗೆ ಮಾತ್ರ ಟಿಕೆಟ್‌ ಕೊಡೋಕೆ ಸಾಧ್ಯ. ಯಾರಿಗೆ ಟಿಕೆಟ್‌ ಸಿಕ್ಕರೂ ಉಳಿದ ಆಕಾಂಕ್ಷಿಗಳು ಜೊತೆ ನಿಂತು ಕಾಂಗ್ರೆಸ್‌ ಗೆಲ್ಲಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಶಾಸಕನ ಮನೆಯಲ್ಲಿ ₹8 ಕೋಟಿ ಸಿಕ್ಕಿದೆಯಲ್ಲ, ಇದು ಸಾಕ್ಷ್ಯವಲ್ಲವೇ? ಭ್ರಷ್ಟಾಚಾರದ ಬಗ್ಗೆ ದಾಖಲಾತಿ ಕೇಳುವ ಬೊಮ್ಮಾಯಿಗೆ ಕಿಂಚಿತ್ತೂ ಮಾನ ಮರ್ಯಾದೆ ಇಲ್ಲ. ಇಂಥ ಲಜ್ಜೆಗೆಟ್ಟವರು, ಮಾನಗೆಟ್ಟವರು, ಅಧಿಕಾರಕ್ಕೆ ಮತ್ತೆ ಬರಬೇಕಾ? ಎಂದು ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಕಾಂಗ್ರೆಸ್‌ ನಾಯಕರಾದ ಜಮೀರ್‌ ಅಹಮದ್‌ ಖಾನ್‌, ಕೆ.ಬಿ.ಕೋಳಿವಾಡ, ಪ್ರಕಾಶ್‌ ರಾಥೋಡ್‌, ರುದ್ರಪ್ಪ ಲಮಾಣಿ, ಬಿ.ಎಚ್‌.ಬನ್ನಿಕೋಡ, ಐ.ಜಿ.ಸನದಿ, ಯು.ಬಿ.ಬಣಕಾರ, ಸೋಮಣ್ಣ ಬೇವಿನಮರದ, ಅಜ್ಜಂಪೀರ್‌ ಖಾದ್ರಿ, ಡಿ.ಬಸವರಾಜು, ಎಂ.ಎಂ.ಹಿರೇಮಠ, ಎಸ್‌.ಕೆ. ಕರಿಯಣ್ಣನವರ್‌, ಆರ್‌.ಎಂ. ಕುಬೇರಪ್ಪ, ಕೊಟ್ರೇಶಪ್ಪ ಬಸೇಗಣ್ಣಿ, ಎ.ಕೆ.ಪಾಟೀಲ್‌, ಅಶೋಕ ಪಾಟೀಲ, ಶ್ರೀನಿವಾಸ ಹಳ್ಳಳ್ಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT