ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪತ್ತು ನಿರ್ವಹಣಾ ಯೋಜನೆ ತಯಾರಿಸಿ: ಡಿ.ಸಿ ಸಂಜಯ ಶೆಟ್ಟೆಣ್ಣವರ ಸೂಚನೆ

ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ
Last Updated 23 ಏಪ್ರಿಲ್ 2021, 15:11 IST
ಅಕ್ಷರ ಗಾತ್ರ

ಹಾವೇರಿ: ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ, ಮುಂಗಾರು ಅತಿವೃಷ್ಟಿ ಉಂಟಾದ ಸಂದರ್ಭದಲ್ಲಿ ಎದುರಾಗುವ ಪ್ರಾಕೃತಿಕ ವಿಪತ್ತುಗಳನ್ನು ಎದುರಿಸಲು ತಾಲ್ಲೂಕುವಾರು ವಿಪತ್ತು ನಿರ್ವಹಣಾ ಯೋಜನೆ ತಯಾರಿಸಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸಿದ್ಧವಾಗಿರುವಂತೆ ಎಲ್ಲ ತಹಶೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ತಾಲ್ಲೂಕು ತಹಶೀಲ್ದಾರ್‌, ನಗರ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ‘ವಿಡಿಯೊ ಸಂವಾದ’ ಸಭೆ ನಡೆಸಿದರು.

102 ಹಳ್ಳಿಗಳಲ್ಲಿ ನೀರಿನ ಸಮಸ್ಯೆ:ಗ್ರಾಮೀಣ ಭಾಗದ 102 ಹಳ್ಳಿಗಳಿಗೆ ನೀರಿನ ಸಮಸ್ಯೆ ಎದುರಾಗಲಿದ್ದು, ಸಮಸ್ಯೆ ನಿವಾರಣೆಗೆ ಈ ಭಾಗದಲ್ಲಿ 76 ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ್ದೀರಿ. ಈ ಕುರಿತಂತೆ ತಹಶೀಲ್ದಾರ್‌ ನೇತೃತ್ವದಲ್ಲಿ ತಾಲ್ಲೂಕುವಾರು ಸಭೆ ನಡೆಸಿ ಪುನರ್ ಪರಿಶೀಲನೆ ನಡೆಸಿ. ಸರ್ಕಾರಿ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಇಲ್ಲದಿದ್ದರೆ ಇಳುವರಿ ಆಧರಿಸಿ ಖಾಸಗಿ ಕೊಳವೆಬಾವಿಗಳಿಗೆ ಬಾಡಿಗೆ ನಿಗದಿಪಡಿಸಿ ನೀರು ಪೂರೈಸಿ ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಸದ್ಯ ಐದು ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ. ಎಲ್ಲಿಯೂ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿಲ್ಲ. ಮುಂದೆ ಸಮಸ್ಯೆ ಎದುರಾದರೆ ಆದ್ಯತೆ ಮೇಲೆ ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಿ ಎಂದು ಸೂಚನೆ ನೀಡಿದರು.

ತೀವ್ರ ಅಸಮಾಧಾನ:ಹಾವೇರಿ ಮತ್ತು ರಾಣೆಬೆನ್ನೂರು ನಗರಗಳಲ್ಲಿ 24x7 ಪೂರೈಕೆ ಯೋಜನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣವೇ ತಾಂತ್ರಿಕ ಸಮಸ್ಯೆ ನಿವಾರಣೆಗೆ ಕ್ರಮವಹಿಸಿ, ನಿಯಮಿತವಾಗಿ ನೀರು ಪೂರೈಸಿ. ನಳದ ನೀರಿಗೆ ಪಂಪ್ ಮೂಲಕ ನೀರು ಬಳಸುವವರ ಮೇಲೆ ಕ್ರಮಕೈಗೊಳ್ಳಿ ಎಂದು ಸೂಚನೆ ನೀಡಿದರು.

ಯೋಜನೆ ರೂಪಿಸಿ:ಜಿಲ್ಲಾ ವಿಪತ್ತು ನಿರ್ವಹಣಾ ಮಾದರಿಯಲ್ಲಿ ತಾಲ್ಲೂಕುವಾರು ವಿಪತ್ತು ನಿರ್ವಹಣಾ ಯೋಜನೆಯನ್ನು ತಯಾರಿಸಿ ವಿಪತ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ವಿಪತ್ತು ನಿರ್ವಹಣಾ ಉಪಕರಣಗಳ ಸಿದ್ಧತೆ, ಅಧಿಕಾರಿಗಳ ಹೆಸರು ಹಾಗೂ ಸಂಪರ್ಕ ಸಂಖ್ಯೆಗಳ ಮಾಹಿತಿಯ ಸಕಾಲೀಕರಣಗೊಳಿಸಿ. ಬೆಂಕಿ ಅವಘಡ, ಪ್ರವಾಹ, ಅತಿವೃಷ್ಟಿ ಆಪತ್ತುಗಳ ಯೋಜಿತ ನಿರ್ವಹಣೆ ಹಾಗೂ ಪರಿಹಾರ ಕಾರ್ಯಗಳೀಗೆ ಸಿದ್ಧವಾಗಿರಿ ಎಂದು ಸೂಚನೆ ನೀಡಿದರು.

ಪರ್ಯಾಯ ಬೆಳೆ:ಮುಂಗಾರು ಹಂಗಾಮಿನಲ್ಲಿ ತಾಲ್ಲೂಕುವಾರು ಹವಾಮಾನಕ್ಕೆ ಅನುಗುಣವಾಗಿ ಮಳೆಯಾದಲ್ಲಿ ಬೆಳೆಯಬೇಕಾದ ಬೆಳೆ, ಒಂದೊಮ್ಮೆ ಮಳೆ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಅಥವಾ ತಡವಾಗಿ ಮಳೆಯಾದರೆ ಪರ್ಯಾಯ ಬೆಳೆ ಯೋಜನೆ ಕುರಿತಂತೆ ಕೃಷಿ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT