ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆ ಅಭಾವ: ತರಕಾರಿ ದುಬಾರಿ

ಟೊಮೆಟೊ, ಮೆಣಸಿನಕಾಯಿ, ಹಿರೇಕಾಯಿ ಶತಕ * ಬೀನ್ಸ್ ದ್ವಿಶತಕ
Published 19 ಜೂನ್ 2024, 14:50 IST
Last Updated 19 ಜೂನ್ 2024, 14:50 IST
ಅಕ್ಷರ ಗಾತ್ರ

ಹಾವೇರಿ: ಮುಂಗಾರು ಆರಂಭವಾದರೂ ವಾಡಿಕೆಯಂತೆ ಮಳೆಯಾಗದಿದ್ದರಿಂದ ಕೃಷಿ ಜಮೀನುಗಳಿಗೆ ನೀರಿನ ಅಭಾವ ಸೃಷ್ಟಿಯಾಗುತ್ತಿದ್ದು, ಇದರ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ತರಕಾರಿ ಹಾಗೂ ಸೊಪ್ಪಿನ ದರ ಮತ್ತಷ್ಟು ದುಬಾರಿ ಆಗಿದೆ.

ನಗರಕ್ಕೆ ಪೂರೈಕೆಯಾಗುವ ತರಕಾರಿ ಪ್ರಮಾಣವೂ ಈಚಿನ ದಿನಗಳಲ್ಲಿ ತೀರಾ ಕಡಿಮೆಯಾಗಿದೆ. ಲಭ್ಯವಿರುವ ತರಕಾರಿಗಳನ್ನು ಹೋಲ್‌ಸೇಲ್ ವ್ಯಾಪಾರಸ್ಥರು, ಹೆಚ್ಚಿನ ಬೆಲೆ ಕೊಟ್ಟು ಖರೀದಿಸುತ್ತಿದ್ದಾರೆ. ಖರ್ಚು ಹಾಗೂ ಲಾಭದ ಲೆಕ್ಕಾಚಾರ ಹಾಕಿಕೊಂಡು, ಚಿಲ್ಲರೆ ಮಾರುಕಟ್ಟೆಯಲ್ಲಿ ತರಕಾರಿ ಮಾರುತ್ತಿದ್ದಾರೆ.

ನಗರದ ಲಾಲ್‌ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರದಲ್ಲಿ ಇಳಿಕೆ ಕಾಣಿಸಿದೆ. ಬೆಲೆ ಏರಿಕೆಯಿಂದಾಗಿ ಬಹುತೇಕ ಜನರು ತರಕಾರಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ‘ಟೊಮೆಟೊ ಕೆ.ಜಿ.ಗೆ ₹ 100 ಆಗಿದೆ. ಇದರ ಬದಲಿಗೆ ಜನರು ಹುಣಸೆಹಣ್ಣು ಬಳಸಲಾರಂಭಿಸಿದ್ದಾರೆ. ಇದರಿಂದಾಗಿ ಟೊಮೆಟೊ ಖರೀದಿಯೂ ಕಡಿಮೆಯಾಗುತ್ತಿದೆ’ ಎಂದು ವ್ಯಾಪಾರಿ ಅಹ್ಮದ್ ಹೇಳಿದರು.

‘ಟೊಮೆಟೊ, ಮೆಣಸಿನಕಾಯಿ, ಹಿರೇಕಾಯಿ, ಹಾಗಲಕಾಯಿ, ಡೋಣಗಾಯಿ ದರವು ಪ್ರತಿ ಕೆ.ಜಿ.ಗೆ ₹ 100ರಿಂದ ₹ 140 ಆಗಿದೆ. ಬೀನ್ಸ್‌ ದರ ಕೆ.ಜಿ.ಗೆ ₹ 200ರಿಂದ ₹ 220 ಇದೆ. ಮುಳಗಾಯಿ, ಕ್ಯಾರೆಟ್, ಬೆಂಡೆಕಾಯಿ ಬೆಲೆ ಸ್ಥಿರವಾಗಿದೆ. ಮಳೆ ಅಭಾವ ಹೆಚ್ಚಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ತರಕಾರಿ ದರ ಮತ್ತಷ್ಟು ದುಬಾರಿ ಖಚಿತ’ ಎಂದು ಅವರು ತಿಳಿಸಿದರು.

‘ಬೆಳಗಾವಿ ಹಾಗೂ ಮಹಾರಾಷ್ಟ್ರದಿಂದ ತರಕಾರಿ ಪೂರೈಕೆಯಾಗುತ್ತಿದೆ. ಕಡಿಮೆ ಪ್ರಮಾಣದಲ್ಲಿ ತರಕಾರಿ ಬರುತ್ತಿರುವುದರಿಂದ, ಲಭ್ಯವಿರುವ ತರಕಾರಿಗೆ ಬೇಡಿಕೆ ಹೆಚ್ಚಿದೆ. ವ್ಯಾಪಾರಸ್ಥರು, ಹೆಚ್ಚು ಹಣ ಕೊಟ್ಟು ತರಕಾರಿ ಖರೀದಿಸಿ ಮಾರುತ್ತಿದ್ದಾರೆ’ ಎಂದರು.

ಸೊಪ್ಪಿನ ಬೆಲೆಯೂ ಏರಿಕೆ: ‘ಕೊತಂಬರಿ, ಮೆಂತ್ಯ, ಪಾಲಕ್ ಸೇರಿದಂತೆ ಸೊಪ್ಪಿನ ಬೆಲೆಯೂ ಒಂದು ಸೂಡಿಗೆ ಕಟ್ಟಿಗೆ ₹ 3ಯಿಂದ ₹ 5 ಏರಿಕೆ ಆಗಿದೆ. ಕರಿಬೇವು ಬೆಲೆ ಕೊಂಚ ಕಡಿಮೆಯಾಗಿದೆ. ಮೂಲಂಗಿ ಒಂದಕ್ಕೆ ₹10 ಆಗಿದ್ದು, ಮಾರುಕಟ್ಟೆಯಲ್ಲಿ ಮೂಲಂಗಿ ಕೊರತೆ ಇದೆ’ ಎಂದು ವ್ಯಾಪಾರಿಗಳು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT