ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಪರಿಹಾರಕ್ಕಾಗಿ ಅಹೋರಾತ್ರಿ ಧರಣಿ 23ರಿಂದ

ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಸ್ಥಾಪಿಸಿ: ರೈತಸಂಘದ ಮುಖಂಡರಿಂದ ಒತ್ತಾಯ
Published 17 ಜನವರಿ 2024, 16:12 IST
Last Updated 17 ಜನವರಿ 2024, 16:12 IST
ಅಕ್ಷರ ಗಾತ್ರ

ಹಾವೇರಿ: ಬರಗಾಲದಿಂದ ಬೆಳೆ ಕಳೆದುಕೊಂಡಿರುವ ರೈತರಿಗೆ ಎಕರೆಗೆ ₹25 ಸಾವಿರ ಬೆಳೆ ನಷ್ಟ ಪರಿಹಾರ, ಹಾವೇರಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಜ. 23ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಾಗೂ ಅನಿರ್ದಿಷ್ಟಕಾಲ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.

ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯ ರೈತರು ಹಿಂದೆಂದೂ ಕಾಣದಂತಹ ಬರಗಾಲವನ್ನು ಕಂಡು, ಮೂರು ಬಾರಿ ಬಿತ್ತನೆ ಮಾಡಿ ಬೆಳೆ ಬಾರದಂತಾಗಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿ ಮನನೊಂದು ಆತ್ಮಹತ್ಯೆ ದಾರಿ ಹಿಡಿಯುವಂತಾಗಿದೆ. ಪರಿಹಾರ ಕೇಳಿದರೆ ಕೇಂದ್ರದ ಕಡೆ ರಾಜ್ಯ, ರಾಜ್ಯದ ಕಡೆ ಕೇಂದ್ರ ಸರ್ಕಾರ ಬೆರಳು, ತೋರಿಸುತ್ತಾ ಕಾಲ ಕಳೆಯುತ್ತಿದ್ದಾರೆ. ರಾಜ್ಯ ಸರ್ಕಾರವು ಕಾಟಾಚಾರಕ್ಕೆಂದು ಇತ್ತೀಚೆಗೆ ಬೆಳೆ ಪರಿಹಾರವಾಗಿ ₹2 ಸಾವಿರ ಘೋಷಿಸಿದ್ದು, ಇವರೆಗೂ ಯಾವ ರೈತರಿಗೂ ಪರಿಹಾರ ಬಂದಿಲ್ಲ ಎಂದು ದೂರಿದರು.

ಎನ್‌ಒಸಿ ರದ್ದುಪಡಿಸಿ:

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರೈತರಿಗೆ ಎನ್.ಒ.ಸಿ. ಕೇಳುತ್ತಿರುವುದು ಯಾವ ನ್ಯಾಯ. ಬೇರೆ ಜಿಲ್ಲೆಗಳಿಗೆ ಅನ್ವಯವಾಗದ ಕಾನೂನು ನಮ್ಮ ಜಿಲ್ಲೆಯ ರೈತರಿಗೆ ಏಕೆ? ತೋಟಗಾರಿಕೆ ಬೆಳೆಗಳಾದ ಅಡಿಕೆ, ಬಾಳೆ, ತೆಂಗು, ಇವುಗಳಿಗೆ ಹನಿ ನೀರಾವರಿ ಅಳವಡಿಸಿಕೊಂಡು ಬೆಳೆ ಬೆಳೆಯುತ್ತಾರೆ. ಮಧ್ಯಂತರ ಬೆಳೆಯಾಗಿ ಮೆಕ್ಕೆಜೋಳ, ಸೋಯಾ ಅವರೆ ಮುಂತಾದ ಬೆಳೆಗಳನ್ನು ಬೆಳೆಯಬೇಕಾದರೆ ತುಂತುರು ನೀರಾವರಿ ಪರಿಕರಗಳು ಬೇಕಾಗುತ್ತವೆ. ಸರ್ಕಾರದ ರಿಯಾಯತಿ ದರದಲ್ಲಿ ನೀಡುತ್ತಿದ್ದ ಪರಿಕರಗಳು ಕಳಪೆಯಾಗಿರುವುದರಿಂದ ಏಳು ವರ್ಷಗಳ ಬದಲಾಗಿ ಮೊದಲಿನಂತೆ ಮೂರು ವರ್ಷ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ಡಿಸಿಸಿ ಬ್ಯಾಂಕ್‌ ಸ್ಥಾಪಿಸಿ:

ನಮ್ಮ ಜಿಲ್ಲೆಗೆ ಡಿಸಿಸಿ ಬ್ಯಾಂಕ್ ಹಗಲುಗನಸಾಗಿದೆ. ನಮ್ಮ ಜಿಲ್ಲೆಯ ರೈತರಿಗೆ ಮೂರು ಲಕ್ಷಗಳವರೆಗೆ ಶೂನ್ಯ ಬಡ್ಡಿ ಆಧಾರದ ಸಾಲ ಕೊಡುವ ಯೋಜನೆಯಿಂದ ವಂಚಿತರಾಗಿದ್ದಾರೆ. ಇತ್ತೀಚಿಗೆ ಸರ್ಕಾರ ₹5 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡುವಂತೆ ನಿರ್ದೇಶನ ನೀಡಿದರೂ, ಕೆಸಿಸಿ ಬ್ಯಾಂಕ್ ಧಾರವಾಡದವರು ಸಾಲ ನೀಡುತ್ತಿಲ್ಲ. ಸರ್ಕಾರದ ಯೋಜನೆಯು ರೈತರಿಗೆ ತಲುಪಬೇಕಾದರೆ ನಮ್ಮ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಯಾಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಶಿವಬಸಪ್ಪ ಗೋವಿ, ಮಹಮ್ಮದ್ ಗೌಸ್, ದಿಳ್ಳೆಪ್ಪ ಮಣ್ಣೂರ, ಪ್ರಭುಗೌಡ ಪ್ಯಾಟಿ, ಶಿವಯೋಗಿ ಹೊಸಗೌಡ್ರ ಇತರರು ಇದ್ದರು.

ಮಲ್ಲಿಕಾರ್ಜುನ ಬಳ್ಳಾರಿ 
ಮಲ್ಲಿಕಾರ್ಜುನ ಬಳ್ಳಾರಿ 

ಹಾನಗಲ್‌ ತಾಲ್ಲೂಕಿನ 2228 ಅಡಿಕೆ ಬೆಳೆಗಾರರಿಗೆ ಹೆಕ್ಟೇರ್‌ಗೆ ₹28 ಸಾವಿರದಂತೆ ನೀಡಬೇಕಾದ ಅತಿವೃಷ್ಟಿ ಪರಿಹಾರ ಇದುವರೆಗೂ ಸಿಕ್ಕಿಲ್ಲ.

-ಮರಿಗೌಡ ಪಾಟೀಲ ರೈತ ಮುಖಂಡ

ಸಚಿವ ಶಿವಾನಂದ ಪಾಟೀಲರ ರೈತ ವಿರೋಧಿ ಹೇಳಿಕೆ ಬಗ್ಗೆ ಧ್ವನಿ ಎತ್ತಿದ ರೈತ ಮುಖಂಡರಿಗೆ ಸಚಿವರ ಕಡೆಯವರು ಬೆದರಿಕೆ ಹಾಕುತ್ತಿದ್ದಾರೆ. ಸಚಿವರು ರೈತರ ಬಗ್ಗೆ ಹಗುರವಾಗಿ ಮಾತನಾಡಿದ್ದು ಖಂಡನೀಯ -ಮಾಲತೇಶ ಪೂಜಾರ ರೈತ ಮುಖಂಡ

‘‌ಅಕ್ರಮ–ಸಕ್ರಮ ಯೋಜನೆ ಪೂರ್ಣಗೊಳಿಸಿ’

ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ ‘ರಾಜ್ಯ ಸರ್ಕಾರವು ರೈತರಿಗೆ ಉಪಯೋಗವಾಗುತ್ತಿದ್ದ ಅಕ್ರಮ-ಸಕ್ರಮ ಯೋಜನೆಯನ್ನು ರದ್ದುಗೊಳಿಸಿದ್ದರಿಂದ ಅನೇಕ ರೈತರು ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ ತೊಂದರೆಗೀಡಾಗಿದ್ದಾರೆ’ ಎಂದು ತಿಳಿಸಿದರು.  ಸರ್ಕಾರ ಯೋಜನೆ ರದ್ದುಗೊಳಿಸಬೇಕಾದರೆ ಸಾರ್ವಜನಿಕರ ಆಕ್ಷೇಪಣೆ ಕರೆದು ಕಾಲಾವಕಾಶ ನೀಡಿ ರದ್ದುಗೊಳಿಸಬೇಕು. ಆದರೆ ಸರ್ಕಾವು ಈ ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಿ ಏಕಾಏಕಿ ಯೋಜನೆ ರದ್ದುಪಡಿಸಿದ್ದು ಖಂಡನೀಯ. ವಿದ್ಯುತ್ ಪರಿವರ್ತಕಗಳ ಸಾಮರ್ಥ್ಯವನ್ನು ಹೆಚ್ಚು ಮಾಡಿ ಐ.ಪಿ. ಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿ ನಿರಂತರವಾಗಿ ವಿದ್ಯುತ್ ಪೂರೈಸಬೇಕು. ಅಕ್ರಮ-ಸಕ್ರಮ ಯೋಜನೆಯನ್ನು ಪುನಃ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT