ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ಸರ್ಕಾರಿ ಕಚೇರಿಗಳ ಕೊರತೆ

ಬೃಹತ್‌ ಕೈಗಾರಿಕೆಗಳ ಸ್ಥಾಪನೆಯಾಗಲಿ, ಪಟ್ಟಣಕ್ಕೆ ಮೂಲಸೌಕರ್ಯ ಕಲ್ಪಿಸಲಿ
Last Updated 18 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ಮಲೆನಾಡಿನ ಅಂಚಿಗೆ ಹೊಂದಿಕೊಂಡಿರುವ ರಟ್ಟೀಹಳ್ಳಿ ನೂತನ ತಾಲ್ಲೂಕು ಕೇಂದ್ರವಾಗಿ ನಾಲ್ಕು ವರ್ಷ ಕಳೆದಿವೆ. ತಾಲ್ಲೂಕು ಕೇಂದ್ರವಾದರೂ ಸರ್ಕಾರಿ ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಜನಸಾಮಾನ್ಯರಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ.

ತಾಲ್ಲೂಕಿನ 63 ಗ್ರಾಮಗಳ ಜನರು ತಮ್ಮ ದಿನನಿತ್ಯದ ಸರ್ಕಾರಿ ಕೆಲಸ ಕಾರ್ಯಗಳಿಗೆ ಹಿರೇಕೆರೂರು ಪಟ್ಟಣಕ್ಕೆ ಅಲೆಯಬೇಕಾದ ಅನಿವಾರ್ಯತೆಯಿದೆ. ಇನ್ನಾದರೂ ಎಲ್ಲ ಸರ್ಕಾರಿ ಕಚೇರಿಗಳು ತಾಲ್ಲೂಕು ಕೇಂದ್ರದಲ್ಲಿ ಪ್ರಾರಂಭಿಸಿ ಕ್ಷೇತ್ರದ ಜನರ ಅಲೆದಾಟವನ್ನು ತಪ್ಪಿಸಬೇಕು ಎಂಬುದು ಸ್ಥಳೀಯರ ಕೂಗು.

ಉದ್ಯೋಗ ಸೃಷ್ಠಿಸಿ:

ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ತಾಂತ್ರಿಕ ಶಿಕ್ಷಣ ಉತ್ತೇಜಿಸಲು ಪಟ್ಟಣದಲ್ಲಿ ಡಿಪ್ಲೊಮಾ ಕಾಲೇಜು ಸ್ಥಾಪನೆಯಾಗಬೇಕು. ಈ ಭಾಗದಲ್ಲಿ ನೈಸರ್ಗಿಕ ಸಂಪತ್ತು ಹೇರಳವಾಗಿದ್ದು, ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವ ಬೃಹತ್ ಕೈಗಾರಿಕೆಗಳು ಸ್ಥಾಪಿಸಬೇಕು. ನಿರುದ್ಯೋಗ ಸಮಸ್ಯೆ ದೂರ ಮಾಡಬೇಕು.

ಮಾದರಿ ಶಾಲೆ ತೆರೆಯಿರಿ:

ಶಿಕಾರಿಪುರ - ರಾಣೆಬೆನ್ನೂರು ಮಾರ್ಗ ರೈಲು ಯೋಜನೆಯನ್ನು ಶೀಘ್ರವಾಗಿ ಕಾರ್ಯಾರಂಭಗೊಳಿಸಬೇಕು. ಜೊತೆಗೆ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ನಿರ್ಮಾಣ ಕಾರ್ಯ ಆಗಬೇಕಿದೆ. ತಾಲ್ಲೂಕಿನಾದ್ಯಂತ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಲು ರಟ್ಟೀಹಳ್ಳಿಗೆ ಬಸ್ ಡಿಪೋ ನಿರ್ಮಿಸಬೇಕು. ತಾಲ್ಲೂಕಿನ ಪ್ರತಿಯೊಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಂದರಂತೆ ಸುವ್ಯವಸ್ಥಿತ ಮಾದರಿ ಶಾಲೆಗಳ ಪ್ರಾರಂಭ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪುನಶ್ಚೇತನಗೊಳಿಸುವ ಕೆಲಸವಾಗಬೇಕು. ಪಟ್ಟಣದಲ್ಲಿ ಸಂತೆ ಮೈದಾನ, ಸುಸಜ್ಜಿತವಾದ ಗ್ರಂಥಾಲಯ, ನ್ಯಾಯಾಲಯ, ಜೀವವಿಮಾ ಕಚೇರಿ ಪ್ರಾರಂಭಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಕಾಲುವೆ ದುರಸ್ತಿ:

ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆಗಳನ್ನು ದುರಸ್ತಿಗೊಳಿಸಿ, ರೈತರಿಗೆ ನೆರವಾಗಬೇಕು. ಸರ್ವೀಸ್ ರಸ್ತೆ ನಿರ್ಮಾಣ, ಕಿರುಗಾಲುವೆ ನಿರ್ಮಾಣಕ್ಕೆ ಮುಂದಾಗಬೇಕು. ಮತದಾರರಿಂದ ಆಯ್ಕೆಯಾಗುವ ಜನಪ್ರತಿನಿಧಿಗಳು ಸಮಗ್ರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿ ಮಹೇಶ ಕೆರೂರ.

‘ಕುಡಿಯುವ ನೀರು ಯೋಜನೆ ಪೂರ್ಣಗೊಳಿಸಿ’

ಹಿರೇಕೆರೂರು ತಾಲ್ಲೂಕು ಕೇಂದ್ರ ಸೇರಿದಂತೆ ತಾಲ್ಲೂಕಿನ ವಿವಿಧ ಹಳ್ಳಿಗಳಿಗೆ ತುಂಗಭದ್ರಾ ನದಿಯಿಂದ ಕುಡಿಯುವ ನೀರಿನ ಪೂರೈಕೆಗೆ ₹335 ಕೋಟಿ ಅನುದಾನ ನೀಡಲಾಗಿದ್ದು, ಶೀಘ್ರವಾಗಿ ರಟ್ಟೀಹಳ್ಳಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲ ಹಳ್ಳಿಗಳಿಗೆ (24x7) ಕುಡಿಯುವ ನೀರು ಪೂರೈಸುವಂತಾಗಬೇಕು. ರಟ್ಟೀಹಳ್ಳಿ ಪಟ್ಟಣದಲ್ಲಿ ಮೂಲಸೌಕರ್ಯ ಉತ್ತೇಜಿಸಲು ಹೊಸ ಬಡಾವಣೆಗಳು ಸೇರಿದಂತೆ ಎಲ್ಲೆಡೆ ಒಳಚರಂಡಿ ವ್ಯವಸ್ಥೆ, ಗುಣಮಟ್ಟದ ರಸ್ತೆಗಳ ನಿರ್ಮಾಣವಾಗಬೇಕು. ವ್ಯಾಪಾರ ವಹಿವಾಟು ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ತಾಲ್ಲೂಕಿನ ಎಲ್ಲ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ವೈದ್ಯರನ್ನು ನೇಮಿಸಬೇಕು. ಜನರಿಗೆ ಆರೋಗ್ಯ ಸೇವೆ ಒದಗಿಸಿ
-ಶಂಭಣ್ಣ ಗೂಳಪ್ಪನವರ, ವರ್ತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT