ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ರಸ್ತೆಯಲ್ಲಿ ಸಂಚಾರದ ಸರ್ಕಸ್‌: ಬೈಕ್‌ ಸವಾರರು ಹೈರಾಣ

ಬ್ಯಾಡಗಿ ಮತ್ತು ಹಾವೇರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ
Last Updated 25 ಸೆಪ್ಟೆಂಬರ್ 2021, 2:39 IST
ಅಕ್ಷರ ಗಾತ್ರ

ತಿಳವಳ್ಳಿ: ರಸ್ತೆಯುದ್ದಕ್ಕೂ ತಗ್ಗು ಗುಂಡಿಗಳು, ಅಲ್ಲಲ್ಲಿ ಚದುರಿ ಬಿದ್ದ ಕಲ್ಲುಗಳು, ಕೆಸರಿನಿಂದ ಆವೃತವಾಗಿರುವ ಈ ರಸ್ತೆಯಲ್ಲಿ ಸಂಚಾರ ಮಾಡುವುದು ಬೈಕ್‌ ಸವಾರರ ಪಾಲಿಗೆ ದೊಡ್ಡ ಸವಾಲು. ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟಬುತ್ತಿ.

ತಿಳವಳ್ಳಿಯ ಹರ್ಡೀಕರ ಬಡಾವಣೆಯಿಂದ ಹಾವೇರಿ ಮತ್ತು ಬ್ಯಾಡಗಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ದುಸ್ಥಿತಿ ಇದು.

ಈ ಕೆಸರುಗದ್ದೆಯಂಥ ರಸ್ತೆಯಲ್ಲಿ ನಿತ್ಯ ಓಡಾಡುವ ಜನರು ರಸ್ತೆಯ ದುಃಸ್ಥಿತಿ ಕಂಡು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಕನಿಷ್ಠ ಪಕ್ಷ ತಗ್ಗು ಗುಂಡಿಗಳಿಗೆ ಒಂದಿಷ್ಟು ಮಣ್ಣು ಹಾಕಿ, ಡಾಂಬರು ಹಚ್ಚುವ ತಾತ್ಕಾಲಿಕ ದುರಸ್ತಿಯನ್ನೂ ಸಮರ್ಪಕವಾಗಿ ಮಾಡುತ್ತಿಲ್ಲ.

ನಿತ್ಯ ಸರ್ಕಸ್ ಮಾಡುತ್ತ ಈ ರಸ್ತೆಯಲ್ಲಿ ಸಂಚರಿಸುವಂತಾಗಿದೆ. ದಶಕಗಳಿಂದ ಈ ಭಾಗಕ್ಕೆ ಸಂಪರ್ಕಿಸುವ ರಸ್ತೆ ಹದಗೆಟ್ಟಿದರೂ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದಕ್ಕೂ ತಮಗೂ ಏನು ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಕಂಗಣ್ಣಿಗೆ ಗುರಿಯಾಗಿದೆ.

ಅವೈಜ್ಞಾನಿಕ ಚರಂಡಿ:ಹರ್ಡೀಕರ್ ವೃತ್ತದಿಂದ ದೊಡ್ಡಕೆರೆವರೆಗೂ ನಿರ್ಮಿಸಿದ ಚರಂಡಿಯನ್ನು ಅಲ್ಲಿ ವಾಸಿಸುವ ಜನರು ಮತ್ತು ವ್ಯಾಪಾರಸ್ಥರು ಸಂಪೂರ್ಣವಾಗಿ ಮುಚ್ಚಿರುವುದಿರಂದ ಮಳೆಯ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದ ರಸ್ತೆಯು ಸಂಪೂರ್ಣವಾಗಿ ಹಾಳಾಗಿದೆ.

ಬೇಸತ್ತ ಸಾರ್ವಜನಿಕರು ಗ್ರಾಮ ಪಂಚಾಯ್ತಿಗೆ ಮನವಿ ಸಲ್ಲಿಸಿದರು. ಬಳಿಕ ಪಂಚಾಯ್ತಿಯವರು ಒಂದು ಕಡೆಯ ಚರಂಡಿಯನ್ನು ಜೆಸಿಬಿ ಮೂಲಕ ತೆಗೆಸಿದ್ದಾರೆ. ಆದರೆ ಇನ್ನೊಂದು ಬದಿಯಲ್ಲಿ ಚರಂಡಿ ಇಲ್ಲದೆ ಇರುವುದರಿಂದ ಮತ್ತೆ ಮಳೆಯ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದ ರಸ್ತೆಯಲ್ಲಿ ಆಳೆತ್ತರದ ಗುಂಡಿಗಳು ಬಿದ್ದು ಪ್ರಯಾಣಿಕರಿಗೆ ತೊಂದರೆಯುಂಟಾಗಿದೆ ಎಂದು ಸ್ಥಳೀಯ ನಿವಾಸಿ ರೇಣುಕಾಚಾರಿ ಬಡಿಗೇರ ದೂರುತ್ತಾರೆ.

ವಾಹನ ಸವಾರರಿಗೆ ಸಂಕಷ್ಟ:ಪ್ರತಿದಿನಾ ಶಾಲಾ ವಾಹನಗಳು, ಬಸ್ಸುಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಇದೇ ಮಾರ್ಗವಾಗಿ ಸಂಚಾರ ಮಾಡಬೇಕಾಗಿರುವುದರಿಂದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ತಪ್ಪಿಸುವುದೇ ವಾಹನ ಸವಾರರಿಗೆ ದೊಡ್ಡ ಸವಾಲಾಗಿದೆ. ಭಾರಿ ಗಾತ್ರದ ವಾಹನಗಳು ಗುಂಡಿಗಳನ್ನು ನೋಡದೇ ವೇಗವಾಗಿ ಚಲಿಸುತ್ತಿರುತ್ತವೆ. ರಸ್ತೆಯ ಗುಂಡಿಯ ಅಕ್ಕಪಕ್ಕದಲ್ಲಿನ ದೂಳು ದ್ವಿಚಕ್ರ ವಾಹನ ಸವಾರರಿಗೆ ಅಡರುತ್ತಿದೆ. ಕೆಲವು ಸಲ ದೂಳು ದ್ವಿಚಕ್ರ ವಾಹನಸವಾರರ ಕಣ್ಣಿಗೆ ಬಿದ್ದು, ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿವೆ. ಮಳೆ ಬಂದರಂತೂ ವಾಹನ ಸವಾರರ ಗೋಳು ಹೇಳತೀರದು.

ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಗ್ಗು ಗುಂಡಿಗಳಿಂದ ಕೂಡಿದ ರಸ್ತೆಯನ್ನು ಹೊಸದಾಗಿ ಡಾಂಬರೀಕರಣ ಮಾಡಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT