ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸವಣೂರು ಪುರಸಭೆ ಚುನಾವಣೆ: ಅಲ್ಲಾವುದ್ದೀನ್ ಅಧ್ಯಕ್ಷ, ಖಮರುನ್ನಿಸಾ ಉಪಾಧ್ಯಕ್ಷೆ

ಸವಣೂರು ಪುರಸಭೆ ಚುನಾವಣೆಯಲ್ಲಿ ಅವಿರೋಧ ಆಯ್ಕೆ: ಕಾಂಗ್ರೆಸ್ ಪಾಲಾದ ಅಧಿಕಾರ
Published : 27 ಆಗಸ್ಟ್ 2024, 13:51 IST
Last Updated : 27 ಆಗಸ್ಟ್ 2024, 13:51 IST
ಫಾಲೋ ಮಾಡಿ
Comments

ಸವಣೂರು: ಸ್ಥಳೀಯ ಪುರಸಭೆಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಅಲ್ಲಾವುದ್ದೀನ್ ಹಸನಮಿಯ್ಯಾ ಮನಿಯಾರ, ಉಪಾಧ್ಯಕ್ಷರಾಗಿ ಖಮರುನ್ನಿಸಾ ಮೌಲಾಲಿ ಪಟೇಲ್ ಅವಿರೋಧವಾಗಿ ಆಯ್ಕೆಗೊಂಡರು.

ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ 23ನೇ ವಾರ್ಡಿನ ಕಾಂಗ್ರೆಸ್ ಸದಸ್ಯ ಅಲ್ಲಾವುದ್ದೀನ್ ಹಸನಮಿಯ್ಯಾ ಮನಿಯಾರ, ಉಪಾಧ್ಯಕ್ಷ ಸ್ಥಾನಕ್ಕೆ 14ನೇ ವಾರ್ಡಿನ ಜೆಡಿಎಸ್ (ಕಾಂಗ್ರೆಸ್ ಬೆಂಬಲಿತ) ಸದಸ್ಯೆ ಖಮರುನ್ನಿಸಾ ಮೌಲಾಲಿ ಪಟೇಲ್ ನಾಮಪತ್ರ ಸಲ್ಲಿಸಿದ್ದರು.

ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿದ್ದರಿಂದ ಚುನಾವಣಾಧಿಕಾರಿ, ತಹಶೀಲ್ದಾರ್ ಭರತರಾಜ್ ಕೆ.ಎನ್. ಅವರು, ಅಧ್ಯಕ್ಷರಾಗಿ ಅಲ್ಲಾವುದ್ದೀನ್ ಮನಿಯಾರ, ಉಪಾಧ್ಯಕ್ಷರಾಗಿ ಖಮರುನ್ನಿಸಾ ಪಟೇಲ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಘೋಷಿಸಿದರು.

ಪುರಸಭೆಯ 27 ಸದಸ್ಯರಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷ ಸೇರಿದಂತೆ ಅತಾವುಲ್ಲಾಖಾನ್ ಪಠಾಣ, ಫಜಲ ಅಹ್ಮದಖಾನ್ ಪಠಾಣ, ಎಸ್.ಆರ್.ಕಲ್ಮಠ, ಪೀರಅಹ್ಮದ್ ಗವಾರಿ, ಶಿವಾನಂದ ಅರಳಿಕಟ್ಟಿ, ಅಶೋಕ ಮನ್ನಂಗಿ, ಅಬ್ದುಲ್‌ ನಾಸೀರ್ ಖಿದ್ಮತಗಾರ, ಸೋಫಿಯಾ ಚುಡಿಗರ, ಆಯಿಶಾ ಫರಹೀನ ಚಂದುಬಾಯಿ ಸೇರಿದಂತೆ ಕೇವಲ 11 ಸದಸ್ಯರು ಮಾತ್ರ ಹಾಜರಿದ್ದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಚುನಾವಣಾಧಿಕಾರಿ ಭರತರಾಜ್ ಕೆ.ಎನ್. ಹಾಗೂ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ, ಪುರಸಭೆ ಸದಸ್ಯರು, ಬೆಂಬಲಿಗರು ಅಭಿನಂದಿಸಿದರು.

ಕಾರ್ಯಕರ್ತರಿಂದ ವಿಜಯೋತ್ಸವ

ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದಂತೆ  ಪುರಸಭೆ ಕ್ರಾಸ್‌ನಲ್ಲಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಪರಸ್ಪರ ಬಣ್ಣ ಎರಚಿಕೊಂಡು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಂತರ ಪುರಸಭೆಯಿಂದ ಡಾ. ವಿ.ಕೃ.ಗೋಕಾಕ ವೃತ್ತ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಬಸ್ ನಿಲ್ದಾಣ ರಸ್ತೆ ಶುಕ್ರವಾರ ಪೇಟೆ ಮಾರುಕಟ್ಟೆ ರಸ್ತೆ ಸಿಂಪಿ ಗಲ್ಲಿ ಸೇರಿದಂತೆ ಪಟ್ಟಣದ ಪ್ರಮುಖ ವಿಜಯೋತ್ಸವದ ಮೆರವಣಿಗೆ ನಡೆಸಲಾಯಿತು.

ಅವಿರೋಧ ಆಯ್ಕೆ

ಸವಣೂರ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯರಲ್ಲಿ ಸೋಮವಾರ ಬೆಳಗಿನವರೆಗೂ ಭಾರಿ ಪೈಪೋಟಿ ಇತ್ತು. ಆದರೆ ನಾಯಕರ ನಿರ್ಧಾರದಂತೆ ಓರ್ವ ಸದಸ್ಯರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು. ಪುರಸಭೆಯು 15 ಕಾಂಗ್ರೆಸ್ 9 ಬಿಜೆಪಿ 1 ಜೆಡಿಎಸ್ ಹಾಗೂ 2 ಪಕ್ಷೇತರ ಸೇರಿ ಒಟ್ಟು 27 ಸದಸ್ಯರನ್ನು ಹೊಂದಿದೆ. ಅದರಲ್ಲಿ ಜೆಡಿಎಸ್‌ನಿಂದ ಆಯ್ಕೆಗೊಂಡು ಈಚೆಗೆ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಖಮರುನ್ನಿಸಾ ಮೌಲಾಲಿ ಪಟೇಲ್‌ಗೆ ಅವರಿಗೆ ಉಪಾಧ್ಯಕ್ಷೆ ಸ್ಥಾನ ಒಲಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT