ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವೈಕ್ಯದ ಬೀಡು, ನವಾಬರ ನಾಡು ಸವಣೂರು

Published 4 ಜೂನ್ 2023, 3:12 IST
Last Updated 4 ಜೂನ್ 2023, 3:12 IST
ಅಕ್ಷರ ಗಾತ್ರ

ಗಣೇಶಗೌಡ ಎಂ ಪಾಟೀಲ

ಸವಣೂರು: ಸಂತ–ಶರಣರ ನಾಡು ಮತ್ತು ನವಾಬರ ಬೀಡು ಎಂದೇ ಹೆಸರಾದ ಸವಣೂರು ಭಾವೈಕ್ಯತೆಗೆ ಹೆಸರುವಾಸಿ. ಸವಣೂರು ನವಾಬರ ಆಡಳಿತದ ಒಂದು ಸಂಸ್ಥಾನವಾಗಿ ರಾಜ್ಯದಲ್ಲಿ ಮಾತ್ರವಲ್ಲದೆ, ದೇಶ– ವಿದೇಶಗಳಲ್ಲಿಯೂ ತನ್ನ ಹೆಸರನ್ನು ಪಸರಿಸಿಕೊಂಡಿದೆ.

ಧಾರವಾಡದ ಫೇಡಾ, ಬೆಳಗಾವಿಯ ಕುಂದಾ, ಗೋಕಾಕದ ಕರದಂಟು ಇವುಗಳ ಸಾಲಿಗೆ ಸೇರುವ ಇನ್ನೊಂದು ಆಹಾರ ಪದಾರ್ಥವೇ ಸುಪ್ರಸಿದ್ಧ ಸವಣೂರು ಶಿವಲಾಲ ಖಾರ. ಉಳಿದೆಲ್ಲ ತಿನಿಸುಗಳು ಸಿಹಿಯನ್ನೇ ಮೈ ತುಂಬಿಕೊಂಡಿದ್ದರೆ, ಸವಣೂರಿನ ಈ ಖಾದ್ಯ ಸಿಹಿ, ಉಪ್ಪು ಖಾರಗಳ ಸಮ್ಮಿಶ್ರಣ. ರುಚಿಯಲ್ಲಿಯೂ, ಶುಚಿಯಲ್ಲಿಯೂ ಅನನ್ಯ. ತನ್ನ ಗುಣಮಟ್ಟವನ್ನು ಎಂಟು ದಶಕಗಳಿಂದ ಕಾಯ್ದುಕೊಂಡು ಬಂದಿರುವ ಸವಣೂರಿನ ಶಿವಲಾಲ ಖಾರ ನಾಡಿನ ತುಂಬಾ ತನ್ನ ಕಂಪು ಹರಡಿದೆ.

ಮೂಲತಃ ಕರಾಚಿಯವರಾದ ದಯಾಲಜಿ ಕೋಟಕ್ ಅವರಿಗೂ ಸವಣೂರಿನ ಸಂಸ್ಥಾನದ ನವಾಬರಿಗೂ ಗುಜರಾತ್ ರಾಜ್ಯದ ರಾಜಕೋಟದಲ್ಲಿ ಭೇಟಿಯಾಗಿತ್ತು. ಕೋಟಕ್ ಅವರ ಕುರಕಲು ತಿನಿಸುಗಳು, ಸಿಹಿ ಪದಾರ್ಥಗಳ ಗುಣಮಟ್ಟಕ್ಕೆ ನವಾಬರು ಮನಸೋತು ‘ಉತ್ತಮ ಸಂಗತಿಗಳು ಯಾವುದೇ ಇದ್ದರೂ ಅದು ತಮ್ಮ ಸಂಸ್ಥಾನದಲ್ಲಿರಬೇಕು. ಸಂಸ್ಥಾನದ ಎಲ್ಲ ಜನರಿಗೆ ಕುರಕಲು ತಿನಿಸುಗಳು ಮತ್ತು ಸಿಹಿ ಪದಾರ್ಥಗಳು ಸವಣೂರು ಸಂಸ್ಥಾನದ ಜನರಿಗೆ ಬೇಕು’ ಎನ್ನುವಂತ ಎಂಬ ಹಿರಿದಾಸೆ ನವಾಬರದಾಗಿತ್ತು.

ಅದ್ದರಿಂದ, ಸುಪ್ರಸಿದ್ದ ಸವಣೂರು ಶಿವಲಾಲ ಖಾರಾ ಮಾಲೀಕರಾದ ದಯಾಲಜಿ ಕೋಟಕ್ ಅವರಿಗೆ ಸವಣೂರಿನಲ್ಲಿ ನೆಲೆಸುವಂತೆ ಸವಣೂರಿನ ನವಾಬರು ಆಹ್ವಾನವನ್ನೂ ನೀಡಿದರು. ಕೋಟಕ್ ಅವರನ್ನು ಕರೆತಂದ ನವಾಬರು, ಅವರ ತಿನಿಸುಗಳ ತಯಾರಿಕೆ ಹಾಗೂ ಮಾರಾಟಕ್ಕೆ ಸೂಕ್ತ ನೆರವನ್ನೂ ಕಲ್ಪಿಸಿದರು. 1931ರಿಂದ ಸವಣೂರಿನಲ್ಲಿ ತಮ್ಮ ಸಿಹಿ ಹಾಗೂ ಖಾರದ ತಿನಿಸುಗಳ ಮಾರಾಟವನ್ನು ಆರಂಭಿಸಿದ ಕೋಟಕ್ ಕುಟುಂಬ ವರ್ಗ, ಇಂದಿಗೂ ತಮ್ಮ ಖ್ಯಾತಿಯನ್ನು ಉಳಿಸಿಕೊಂಡಿದ್ದು ಖಾರದೊಂದಿಗೆ ಸ್ಪಲ್ಪ ಸಿಹಿ ಮಿಶ್ರಣ ಸವಣೂರು ಶಿವಲಾಲ ಖಾರಾದ ವಿಶೇಷತೆಯಾಗಿದೆ.

ವೀಳ್ಯದೆಲೆಯ ರಂಗು

ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೇ ಪ್ರಸಿದ್ಧಿ ಪಡೆದುಕೊಂಡ ಹಾವೇರಿ ಜಿಲ್ಲೆ ಅಷ್ಟೇ ಅಲ್ಲದೆ ಸವಣೂರು ವೀಳ್ಯದೆಲೆ ದೇಶ, ವಿದೇಶಗಳಲ್ಲಿಯೂ ಪ್ರಸಿದ್ಧಿ ಪಡೆದುಕೊಂಡಿದೆ. ಪಟ್ಟಣದ ಸೇರಿದಂತೆ ತಾಲ್ಲೂಕಿನಾದ್ಯಂತ ಸುಮಾರು 300 ಹೆಕ್ಟರ್ ಪ್ರದೇಶಗಳಿಗಿಂತಲು ಹೆಚ್ಚಿನ ಪ್ರದೇಶದಲ್ಲಿ ವೀಳ್ಯದೆಲೆಯನ್ನು ರೈತರು ಬೆಳೆದು ಮಾರಾಟ ಮಾಡುತ್ತಿರುವುದು ವಿಶೇಷ.

ಸ್ಥಳೀಯ ರೈತರು ಬೆಳೆದ ವೀಳ್ಯದೆಲೆ ತಿನ್ನಲು ಬಳಸುವುದಲ್ಲದೆ ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಮಂಗಳೂರು, ಮುಂಬೈ, ಕೊಲ್ಕತ್ತಾ ಅಲ್ಲದೆ ಪಾಕಿಸ್ತಾನದ ಕರಾಚಿಗೂ ರಫ್ತಾಗುತ್ತಿರುವುದು ಹೆಮ್ಮೆಯ ವಿಷಯ.

ವಿಷ್ಣುತೀರ್ಥ ಪುಷ್ಕರಣಿ

ನವಾಬರ ದಿವಾನರಾಗಿದ್ದ ಖಂಡೇರಾಯ ನಿರ್ಮಿಸಿಕೊಟ್ಟ ಭವ್ಯವಾದ ಮಠ ಹಾಗೂ ವಿಷ್ಣುತೀರ್ಥ ಪುಷ್ಕರಣಿ ಇಂದಿಗೂ ಸಹಸ್ರಾರು ಭಕ್ತರ ಶ್ರದ್ಧಾ ಕೇಂದ್ರವಾಗಿದ್ದು, ಇಲ್ಲಿನ ಸತ್ಯಭೋಧತೀರ್ಥರ ಮೂಲ ವೃಂದಾವನ ಸನ್ನಿಧಾನ ನಾಡಿನ ಪ್ರಮುಖ ತೀರ್ಥಕ್ಷೇತ್ರವಾಗಿ ರೂಪಗೊಂಡಿದೆ. ಎರಡು ಶತಮಾನಗಳ ಇತಿಹಾಸ ಇರುವ ಶ್ರೀಮಠದದಲ್ಲಿ ನಿರಂತರವಾಗಿ ಹತ್ತಾರು ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಇತ್ತೀಚಿನ ದಶಕಗಳಲ್ಲಿ ಹಲವಾರು ಬೃಹತ್ ಕಾರ್ಯಕ್ರಮಗಳಿಗೂ ಶ್ರೀಮಠ ವೇದಿಕೆಯಾಗಿದೆ.

ದೊಡ್ಡಹುಣಸೆ ಮರಗಳ ಆಕರ್ಷಣೆ

ಪಟ್ಟಣದ ದೊಡ್ಡಹುಣಸೆ ಕಲ್ಮಠದಲ್ಲಿರುವ ಅನೇಕ ಶತಮಾನಗಳನ್ನು ಕಂಡಿರುವ ಮೂರು ಅದ್ಬುತ ಹುಣಸೆ ಮರಗಳು ಪರಿಸರ ಪ್ರೇಮಿಗಳನ್ನು, ಪ್ರವಾಸಿಗರನ್ನು ಆಕರ್ಷಿಸುವ ಜತೆಗೆ ಪಟ್ಟಣದ ಸೊಬಗನ್ನೂ ಹೆಚ್ಚಿಸಿವೆ. ಇತಿಹಾಸದ ಕೊಂಡಿಯಾಗಿ, ಪ್ರಕೃತಿಯ ಭವ್ಯ ಪರಂಪರೆಯ ಸಾಕ್ಷಿಯಾಗಿ ನಿಂತಿವೆ. 

ಹಠಯೋಗಿ ಗೋರಕನಾಥರು ದೇಶ ಸಂಚಾರದ ವೇಳೆ ಸವಣೂರಿನ ಕಲ್ಮಠಕ್ಕೆ ಬಂದು ಇಲ್ಲಿ ಅನೇಕ ವರ್ಷಗಳವರೆಗೆ ಅನುಷ್ಠಾನಗೈದು ತನ್ನ ಯೋಗ ಶಕ್ತಿ ನೆಟ್ಟರೆಂದು ಸ್ಥಳೀಯರು ತಿಳಿಸುತ್ತಾರೆ.

ವೃಕ್ಷಗಳ ತಳವು ಉಬ್ಬಿದ ಬಾಟಲಿಯಂತೆ ಇದ್ದು, ಕ್ರಮೇಣ ಮೇಲೆ ಹೋದಂತೆ ಮೊನಚಾಗುತ್ತದೆ. ಎಲೆಯು ಸುಮಾರು 4 ದಳದಿಂದ 7ದಳದವರೆಗೆ ಅಂಗೈ ಅಗಲದಂತೆ ಕಾಣುತ್ತದೆ.

ಮೂಲತಃ ಉಷ್ಣ ಆಫ್ರಿಕಾ ಖಂಡಕ್ಕೆ ಸೇರಿದ ವೃಕ್ಷಗಳಿವು. ಫ್ರೆಂಚ್ ಸಸ್ಯ ವಿಜ್ಞಾನಿ ಅಡೆನ್ಸನ್ ಅವರ ಸ್ಮರಣಾರ್ಥವಾಗಿ ಈ ಮರಗಳಿಗೆ ‘ಅಡೆನ್ಸೋನಿಯಾ’ ಎಂದು ಹೆಸರಿಸಲಾಗಿದೆ. ಇವು ಜಗತ್ತಿನ ಅತ್ಯಂತ ಪ್ರಾಚೀನ ವೃಕ್ಷಗಳ ಸಾಲಿಗೆ ಸೇರಿವೆ.

ಸವಣೂರಿನ ವೀಳ್ಯದೆಲೆಯ ತೋಟ
ಸವಣೂರಿನ ವೀಳ್ಯದೆಲೆಯ ತೋಟ
ಸವಣೂರು ಪಟ್ಟಣದಲ್ಲಿ 2 ಸಾವಿರ ವರ್ಷಗಳ ಹಿಂದೆ ತಪಸ್ವಿ ಗೋರಕನಾಥರು ನೆಟ್ಟ ಹುಣಸೆ ಮರಗಳು
ಸವಣೂರು ಪಟ್ಟಣದಲ್ಲಿ 2 ಸಾವಿರ ವರ್ಷಗಳ ಹಿಂದೆ ತಪಸ್ವಿ ಗೋರಕನಾಥರು ನೆಟ್ಟ ಹುಣಸೆ ಮರಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT