ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಣೂರು: 80 ಶಾಲಾ ಕೊಠಡಿಗಳು ಶಿಥಿಲ

ಕೊಠಡಿ ಕೊರತೆಯಿಂದ ಶಿಕ್ಷಕರು, ಮಕ್ಕಳ ಪರದಾಟ: ದುರಸ್ತಿಗೆ ಪೋಷಕರ ಆಗ್ರಹ
Published 24 ಜೂನ್ 2023, 15:34 IST
Last Updated 24 ಜೂನ್ 2023, 15:34 IST
ಅಕ್ಷರ ಗಾತ್ರ

-ಗಣೇಶಗೌಡ ಎಂ.ಪಾಟೀಲ

ಸವಣೂರು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ತಾಲ್ಲೂಕಿನಲ್ಲಿ 50ಕ್ಕೂ ಹೆಚ್ಚು ಶಾಲಾ ಕೊಠಡಿಗಳು ಶಿಥಿಲಗೊಂಡಿವೆ. ಮಳೆಗಾಲ ಪ್ರಾರಂಭವಾಗಿದ್ದು, ಮಕ್ಕಳ ಕಲಿಕೆಗೆ ಅಡ್ಡಿಯಾಗಿರುವುದಲ್ಲದೆ ಪೋಷಕರ ಆತಂಕಕ್ಕೆ ಕಾರಣವಾಗಿದೆ.

ಪ್ರಸಕ್ತ ಸಾಲಿನಲ್ಲಿ ಕೆಲವು ಶಾಲೆಗಳಲ್ಲಿ ಕೊಠಡಿಗಳಿಲ್ಲದೆ ಎರಡೆರಡು ತರಗತಿ ಮಕ್ಕಳಿಗೆ ಒಂದೇ ಕೊಠಡಿಯಲ್ಲಿ ಬೋಧಿಸಲಾಗುತ್ತಿದೆ. ಕಾರಡಗಿ ಉರ್ದು, ಸವಣೂರ ಪಟ್ಟಣದ ಯು.ಎಂ.ಪಿ.ಎಸ್, ಸಿದ್ದಾಪೂರ ಗ್ರಾಮದ ಶಾಲೆಗಳಿಗೆ ಕೊಠಡಿಗಳ ಅಗತ್ಯವಿದೆ.

‘ಪ್ರಸಕ್ತ ಶೈಕ್ಷಣಿಕ ವರ್ಷ, ಮಳೆಗಾಲ ಒಂದೇ ಸಮಯಕ್ಕೆ ಪ್ರಾರಂಭವಾಗಿರುವುದರಿಂದ ಅಂದಾಜು 30 ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿವೆ ಹಾಗೂ 50 ಕೊಠಡಿಗಳು ಭಾಗಶಃ ಶಿಥಿಲಗೊಂಡಿವೆ. ಕಾಮಗಾರಿಗೆ ಅಂದಾಜು ₹5 ಕೋಟಿ ಅನುದಾನ ಅವಶ್ಯವಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ಸಾಲಿಮಠ ಮಾಹಿತಿ ನೀಡಿದರು.

ಕೆಲವು ಸರ್ಕಾರಿ ಶಾಲೆಗಳಲ್ಲಿ ಅಡುಗೆ ಕೊಠಡಿಗಳ ಕೊರತೆ ಇದೆ. ಇನ್ನು ಕೆಲವು ಕಡೆ ಶಿಕ್ಷಕರ ಕೊಠಡಿ, ಕಚೇರಿ ಕೊಠಡಿಗಳ ಕೊರತೆ ಇದೆ. ಕೆಲವು ಶಾಲೆಗಳಲ್ಲಿ ಶೌಚಾಲಯ ಕೊರತೆಯಿಂದ ಮಕ್ಕಳು ಪರದಾಡುವಂತಾಗಿದೆ. ಕೆಲವು ಕಡೆ ಇದ್ದರೂ ನಿರ್ವಹಣೆ ಕೊರತೆಯಿಂದ ಬಳಕೆಗೆ ಅನುಪಯುಕ್ತವಾಗಿವೆ.

ಮಳೆಯಿಂದ ಶಿಥಿಲಗೊಂಡ ಶಾಲಾ ಕೊಠಡಿಗಳನ್ನು ದುರಸ್ತಿಗೊಳಿಸಬೇಕು ಮತ್ತು ಕೊರತೆಯಿರುವ ಕಡೆ ಹೆಚ್ಚುವರಿ ಕೊಠಡಿ ನಿರ್ಮಾನಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ. 

ರಾಜ್ಯ ವಲಯದಿಂದ ₹12 ಲಕ್ಷ ಅನುದಾನದಲ್ಲಿ ತಾಲ್ಲೂಕಿನ ಫಕ್ಕೀರನಂದಿಹಳ್ಳಿ ಗ್ರಾಮದ ಶಾಲೆಯ ಒಂದು ಕೊಠಡಿ ನಿರ್ಮಾಣ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನ ಬಹುತೇಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ತೊಂಡೂರು, ತೆವರಮೆಳ್ಳಿಹಳ್ಳಿ, ಹೊಸನೀರಲಗಿ, ತೆಗ್ಗಿಹಳ್ಳಿ, ಅಲ್ಲಿಪೂರ, ಸಿದ್ದಾಪೂರ ಗ್ರಾಮಗಳಲ್ಲಿ ಹೊಸದಾಗಿ ಪ್ರೌಢಶಾಲೆ ಮಂಜೂರಾಗಿದೆ. ಕೊಠಡಿಗಳ ಅಗತ್ಯವಿದ್ದು, ಕೂಡಲೇ ನಿರ್ಮಾಣ ಕಾಮಗಾರಿ ಪ್ರಾರಂಭಗೊಳ್ಳಬೇಕಿದೆ.

ಕೋವಿಡ್‌ ಸೋಂಕಿನಿಂದ 2-3 ವರ್ಷಗಳ ಅವಧಿಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತಿಲ್ಲ. ಆನ್‌ಲೈನ್‌ ಶಿಕ್ಷಣದ ಮೊರೆ ಹೋಗಲಾಯಿತು. ಅದರಿಂದ ನಿರೀಕ್ಷಿತ ಫಲಿತಾಂಶ ಸಿಗದೆ ಮಕ್ಕಳು ಮತ್ತು ಪೋಷಕರು ಕಂಗಾಲಾದರು. ಎಂದಿನಂತೆ ಶಾಲೆಗಳು ಪ್ರಾರಂಭಗೊಂಡು ಮಕ್ಕಳ ಕಲಿಕೆ ಸುಧಾರಣೆ ಆಗುವ ಭರವಸೆ ಮೂಡಿದೆ.

ತಾಲ್ಲೂಕಿನಲ್ಲಿ ಸರ್ಕಾರಿ ಪ್ರಾಥಮಿಕ 113, ಪ್ರೌಢ 17, ಅನುದಾನರಹಿತ ಪ್ರಾಥಮಿಕ ಶಾಲೆ 29, ಪ್ರೌಢ 10 ಒಟ್ಟು 169 ಶಾಲೆಗಳಿವೆ. ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಅವರ ಶೈಕ್ಷಣಿಕ ಕಾಳಜಿಯಿಂದ 119 ಶಾಲಾ ಕಟ್ಟಡಗಳು ದುರಸ್ತಿಗೊಂಡಿವೆ. ಮುಖ್ಯಮಂತ್ರಿ ಅನುದಾನದಲ್ಲಿ 32 ಶಾಲಾ ಕೊಠಡಿ, 10 ಶೌಚಾಲಯ, 6 ಶಾಲಾ ಕಾಂಪೌಂಡ್‌ ನಿರ್ಮಿಸಲಾಗಿದೆ.

ವಿವೇಕ ಯೋಜನೆಯಡಿ 25 ಕೊಠಡಿಗಳ ನಿರ್ಮಾಣ ಕಾಮಗಾರಿ ಮುಗಿಯುವ ಹಂತ ತಲುಪಿದೆ. 2022-23ನೇ ಸಾಲಿನ ತಾ.ಪಂ. ನಿರ್ಬಂಧಿತ ಅನುದಾನದಲ್ಲಿ 11 ಶಾಲಾ ಕೊಠಡಿಗಳನ್ನು ದುರಸ್ತಿಗೊಳಿಸಲಾಗಿದೆ.

ಸವಣೂರು ತಾಲ್ಲೂಕಿನ ಹೂವಿನಶಿಗ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡದ ಹಿಂಬದಿಯ ಗೋಡೆ ಕುಸಿದು ಬಿದ್ದಿರುವ ದೃಶ್ಯ
ಸವಣೂರು ತಾಲ್ಲೂಕಿನ ಹೂವಿನಶಿಗ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡದ ಹಿಂಬದಿಯ ಗೋಡೆ ಕುಸಿದು ಬಿದ್ದಿರುವ ದೃಶ್ಯ

ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿ ಮುಗಿಯುವ ಹಂತದಲ್ಲಿದ್ದು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ - ವಿ.ವಿ.ಸಾಲಿಮಠ ಬಿಇಒ ಸವಣೂರು

ಕೋವಿಡ್‌ ಸೋಂಕಿನಿಂದ ಶಿಕ್ಷಣ ವ್ಯವಸ್ಥೆಗೆ ಪೆಟ್ಟು ಬಿದ್ದಿದೆ. ಭವಿಷ್ಯದ ದೃಷ್ಠಿಯಿಂದ ಮಕ್ಕಳ ಕಲಿಕೆಯಲ್ಲಿ ಸುಧಾರಣೆ ತರಲು ಶಿಕ್ಷಕರು ಹೆಚ್ಚಿನ ಶ್ರಮವಹಿಸಬೇಕಿದೆ - ರಮೇಶ ಅರಗೋಳ ಪ್ರಗತಿಪರ ರೈತ ಮಂತ್ರೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT