ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾವ್ಯವನ್ನು ದಮನಿತರ ಧ್ವನಿಯಾಗಿಸಿದ ಕವಿ’

ಡಾ.ಸಿದ್ಧಲಿಂಗಯ್ಯ ಶ್ರದ್ಧಾಂಜಲಿ ಕಾರ್ಯಕ್ರಮ: ವಿಜಯಕಾಂತ ಪಾಟೀಲ ಅಭಿಮತ
Last Updated 14 ಜೂನ್ 2021, 17:32 IST
ಅಕ್ಷರ ಗಾತ್ರ

ಹಾವೇರಿ: ‘ಕಾವ್ಯವನ್ನು ದಮನಿತರ ಧ್ವನಿಯಾಗಿಸಿ, ದಲಿತ ಪ್ರಜ್ಞೆಯನ್ನು ಸಾಮೂದಾಯಿಕ ಜಾಗೃತಿಯನ್ನಾಗಿ ಪರಿರ್ವತಿಸಿದ ಡಾ. ಸಿದ್ಧಲಿಂಗಯ್ಯ ಅವರ ಬದುಕು ಮತ್ತು ಬರಹ ಮುಂದಿನ ಯುವ ಜನಾಂಗಕ್ಕೆ ಅನುಕರಣೀಯ ಮತ್ತು ದಾರಿದೀಪ’ ಎಂದು ಸಾಹಿತಿ ವಿಜಯಕಾಂತ ಪಾಟೀಲ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾವೇರಿ ವತಿಯಿಂದ ವರ್ಚುವಲ್ ವೇದಿಕೆ ಮೂಲಕ ಹಮ್ಮಿಕೊಂಡಿದ್ದ ಸಾಹಿತಿ ಡಾ.ಸಿದ್ಧಲಿಂಗಯ್ಯ ಅವರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಿದ್ಧಲಿಂಗಯ್ಯ ಅವರು ವಿದ್ಯಾರ್ಥಿ ದೆಸೆಯಿಂದಲೇ ಹೋರಾಟದ ಬದುಕು ನಡೆಸಿದರು. ತಾವು ಅನುಭವಿಸಿದ ನೋವು, ಅವಮಾನ, ಆಕ್ರೋಶವನ್ನು ತಮ್ಮ ಕಾವ್ಯದ ಮೂಲಕ ಅಭಿವ್ಯಕ್ತಿಗೊಳಿಸಿದರೂ, ಅದರಲ್ಲಿ ಸಾಹಿತ್ಯಿಕ ಮತ್ತು ಸಾಮುದಾಯಿಕ ಗುಣ ಇದ್ದುದರಿಂದಲೇಅವು ಜನಮಾನಸದಲ್ಲಿ ನೆಲೆಗೊಂಡವು’ ಎಂದು ಹೇಳಿದರು.

ಬ್ಯಾಡಗಿಯ ಕವಯತ್ರಿ ಸಂಕಮ್ಮ ಸಂಕಮ್ಮನವರ ಮಾತನಾಡಿ, ಸಿದ್ಧಲಿಂಗಯ್ಯ ಎಂದು ಪದವಿ ಪುರಸ್ಕಾರ ಹುದ್ದೆಗಳನ್ನು ಬೆನ್ನು ಹತ್ತಿ ಹೋದವರಲ್ಲ, ಅವೆಲ್ಲವೂ ಅವರನ್ನು ಹುಡುಕಿಕೊಂಡು ಬಂದವು. ಅದಕ್ಕೆ ಕಾರಣ ಅವರ ವ್ಯಕ್ತಿತ್ವ ಮತ್ತು ಸಾಹಿತ್ಯ ಕೃಷಿ ಕಾರಣ ಎಂದರು.

ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಸಿದ್ಧಲಿಂಗಯ್ಯ ಅವರು ದೈತ್ಯ ಪ್ರತಿಭೆ. ಹಲವಾರು ಪ್ರಶಸ್ತಿಗಳು ಬಂದಿದ್ದರೂ ಸದಾ ಜನಸ್ನೇಹಿ ಮತ್ತು ಕಿಂಕರಭಾವ ಅವರದಾಗಿತ್ತು. ಅವರ ಸಾಹಿತ್ಯ ರಚನೆಗಳು ವರ್ತಮಾನದ ಅನ್ಯಾಯಗಳ ವಿರುದ್ಧ ಜಲ್ವಂತ ಪ್ರತಿಭಟನೆಗೆ ಮಾಧ್ಯಮವಾಗಿತ್ತು. ಮೊದಲ ಬಂಡಾಯ ಸಾಹಿತ್ಯ ಸಮ್ಮೇಳನ ಸಂಘಟಿಸುವಲ್ಲಿ ಪಾತ್ರ ಅತ್ಯಂತ ಮಹತ್ತರವಾಗಿತ್ತು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಾಂತೇಶ ಅಂಬಿಗೇರ, ಸೋಮಶೇಖರ ಮೆಸ್ತಾ, ನಜೀರ ಸವಣೂರ, ಸಿ.ಎಸ್.ಮರಳಿಹಳ್ಳಿ, ಷಣ್ಮುಖಪ್ಪ ಮುಚ್ಚಂಡಿ ಮತ್ತಿತರರು ನುಡಿ ನಮನ ಸಲ್ಲಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಎಚ್.ಬಿ.ಲಿಂಗಯ್ಯ ಮಾತನಾಡಿ, ‘ಅವರ ಪ್ರಸಿದ್ಧ ಕವಿತೆ ಇಕ್ರಲಾ ವದಿಲ್ರಾ.. ಸಾಲುಗಳು ಮೇಲ್ನೋಟಕ್ಕೆ ಅಕ್ರೋಶ ಅನಿಸಿದರೂ, ಆಳದಲ್ಲಿ ಅದು ಅವರ ನೋವಿನ ನುಡಿಗಳೇ ಆಗಿವೆ. ಕರ್ನಾಟಕದ ದಲಿತ ಸಾಹಿತ್ಯ ಇತಿಹಾಸ ಬರೆದರೆ ಅದು ಸಿದ್ಧಲಿಂಗಯ್ಯನವರ ಇತಿಹಾಸವೇ ಆಗುತ್ತದೆ ಎಂದು ಹೇಳಿದರು.

ಸಮಾರಂಭದಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿ ಎಸ್.ಎಸ್. ಬೇವಿನಮರದ, ಜಿಲ್ಲೆಯ ತಾಲ್ಲೂಕುಗಳ ಕಸಾಪ ಅಧ್ಯಕ್ಷರಾದ ಪ್ರಭು ಅರಗೋಳ, ರತ್ನಮ್ಮ ಎ.ಬಿ. ನಾಗರಾಜ ಅಡಿಗ, ಸೋಮೇಶ್ವರ ಮೇಸ್ತಾ, ರಾಮು ಮುದಿಗೌಡರ, ನಾಗರಾಜ ದ್ಯಾಮನಕೊಪ್ಪ, ಬಿ.ಎಂ. ಜಗಾಪುರ, ಎಸ್.ಎಂ ಬಡಿಗೇರ ಇದ್ದರು.

ಶಿವಬಸವ ಮರಳಿಹಳ್ಳಿ ಸ್ವಾಗತಿಸಿದರು. ಹಾವೇರಿ ತಾಲೂಕಾ ಕಸಾಪ ಅಧ್ಯಕ್ಷ ವಾಯ್.ಬಿ.ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಸಾಪ ಕಾರ್ಯದರ್ಶಿ ಬಿ.ಪಿ ಶಿಡೇನೂರ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT