ಹಾವೇರಿ: ಕೋವಿಡ್ ಮೂರನೇ ಅಲೆಯಿಂದ ಜಿಲ್ಲೆಯ 2.98 ಲಕ್ಷ ಮಕ್ಕಳನ್ನು ರಕ್ಷಿಸಲು ಹಾವೇರಿ ಜಿಲ್ಲಾಡಳಿತ ವಿನೂತನ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕವಾದ 30 ‘ಆಕ್ಸಿಜನ್ ಬೆಡ್’ ಸಾಮರ್ಥ್ಯದ ‘ವಿಶೇಷ ಕೋವಿಡ್ ವಾರ್ಡ್’ ತೆರೆಯಲಾಗಿದೆ.
ಕೋವಿಡ್‌ನಿಂದ ಭಯಭೀತರಾದ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಲು ಕೋವಿಡ್ ವಾರ್ಡ್‌ನ ಗೋಡೆಗಳ ಮೇಲೆ ಆಕರ್ಷಕ ವರ್ಣಚಿತ್ರಗಳನ್ನು ಬಿಡಿಸಲಾಗಿದೆ. ಮಕ್ಕಳ ಮನಸೆಳೆಯುವ ಮಿಕ್ಕಿಮೌಸ್, ಡೊನಾಲ್ಡ್ ಡಕ್ ಸೇರಿದಂತೆ ವಿವಿಧ ಕಾರ್ಟೂನ್‌ಗಳನ್ನು ಕಲಾವಿದರು ಅರಳಿಸಿದ್ದಾರೆ. ಆಟವಾಡಲು ಮಕ್ಕಳ ಆಟಿಕೆಗಳನ್ನೂ ಇರಿಸಲಾಗಿದೆ.
ಈ ವಾರ್ಡ್‌ನಲ್ಲಿ ಐಸಿಯು ವೆಂಟಿಲೇಟರ್, ಆಕ್ಸಿಜನ್ ಕಾನ್ಸನ್‌ಟ್ರೇಟರ್, ನಿಯೋನಾಟಲ್ ಮಾನಿಟರ್, ಸಿರಿಂಜ್ ಇನ್‌ಫ್ಯೂಷನ್ ಪಂಪ್, ನಾನ್ ರೀಬ್ರೀತರ್ ಮಾಸ್ಕ್, ಅಂಬು ಬ್ಯಾಗ್ ಸೇರಿದಂತೆ ಅಗತ್ಯವಾದ ಎಲ್ಲ ವೈದ್ಯಕೀಯ ಉಪಕರಣಗಳನ್ನು ವ್ಯವಸ್ಥಿತವಾಗಿ ಜೋಡಿಸಲಾಗುತ್ತಿದೆ.
ಸಿಬ್ಬಂದಿಗೆ ವಿಶೇಷ ತರಬೇತಿ: ‘ಮಕ್ಕಳ ಕೋವಿಡ್ ವಾರ್ಡ್‌ನಲ್ಲಿ ಅಳವಡಿಸಿರುವ ವೈದ್ಯಕೀಯ ಉಪಕರಣಗಳನ್ನು ಸಮರ್ಪಕವಾಗಿ ಬಳಸುವ ಬಗ್ಗೆ160 ನರ್ಸಿಂಗ್ ಆಫೀಸರ್‌ಗಳಿಗೆ ತಜ್ಞವೈದ್ಯರಿಂದ ಕೌಶಲಯುಕ್ತ ತರಬೇತಿ ಕೊಡಿಸಲಾಗುತ್ತಿದೆ. ಇದರ ಜತೆಗೆ,10 ದಿನಗಳ ‘ಆನ್‌ಲೈನ್ ವೆಂಟಿಲೇಟರ್ ತರಬೇತಿ’ಯನ್ನೂ ನೀಡಲಾಗುತ್ತಿದೆ.ಮಕ್ಕಳ ವಾರ್ಡ್ ಮತ್ತು ನವಜಾತ ಶಿಶುಗಳ ವಿಶೇಷ ನಿಗಾ ಘಟಕದಲ್ಲಿ (ಎನ್‌ಐಸಿಯು) ಕೆಲಸ ಮಾಡಿ ಅನುಭವ ಇರುವ ನರ್ಸಿಂಗ್ ಆಫೀಸರ್‌ಗಳನ್ನೇ ‘ಮಕ್ಕಳ ಕೋವಿಡ್ ವಾರ್ಡ್’ಗೆ ನಿಯೋಜಿಸುತ್ತೇವೆ’ ಎಂದುಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್. ಹಾವನೂರ ತಿಳಿಸಿದರು.
3 ಲಕ್ಷ ಹೆಲ್ತ್ ಕಾರ್ಡ್: ‘ಕೋವಿಡ್ ಮೂರನೇ ಅಲೆಯಿಂದ ಜಿಲ್ಲೆಯಲ್ಲಿರುವ 18 ವರ್ಷದೊಳಗಿನ 2.98 ಲಕ್ಷ ಮಕ್ಕಳನ್ನು ಸುರಕ್ಷಿತವಾಗಿರಿಸಲು, ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ‘ವಾತ್ಸಲ್ಯ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ’ ಹಮ್ಮಿಕೊಂಡಿದ್ದೇವೆ. ಈಗಾಗಲೇ 98 ಸಾವಿರ ಮಕ್ಕಳನ್ನು ತಪಾಸಣೆ ಮಾಡಲಾಗಿದೆ. ಅಪೌಷ್ಟಿಕತೆ ನಿವಾರಿಸಲು ‘ಪೌಷ್ಟಿಕ ಆಹಾರ ಕಿಟ್’ ವಿತರಿಸುತ್ತಿದ್ದೇವೆ. ಅನಾರೋಗ್ಯದಿಂದ ಬಳಲುವ ಮಕ್ಕಳಿಗೆ ಮಕ್ಕಳ ತಜ್ಞರಿಂದ ವಿಶೇಷ ಚಿಕಿತ್ಸೆ ಕೊಡಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.
ಹಾವೇರಿ ಜಿಲ್ಲಾಡಳಿತದಿಂದ3 ಲಕ್ಷ ‘ಆರೋಗ್ಯ ತಪಾಸಣಾ ಚೀಟಿ’ ಮುದ್ರಣ ಮಾಡಿಸಿದ್ದು, ಮಕ್ಕಳಿಗೆ ವಿತರಿಸುತ್ತಿದ್ದೇವೆ. ಇದರಲ್ಲಿ ಮಕ್ಕಳ ಹೆಸರು, ವಿಳಾಸ, ತೂಕ, ಎತ್ತರ ಸೇರಿದಂತೆ ಆರೋಗ್ಯ ಸಂಬಂಧಿ ವಿವರಗಳು ಮತ್ತು ವೈದ್ಯರ ಸಲಹೆಗಳು ಇರುತ್ತವೆ. ಕೊರೊನಾ ಸೋಂಕು ತಗುಲಿದರೆ, ಮಕ್ಕಳಿಗೆ ಚಿಕಿತ್ಸೆ ನೀಡಲು ಈ ‘ಹೆಲ್ತ್ ಕಾರ್ಡ್’ ನೆರವಾಗಲಿದೆ ಎಂದು ಹೇಳಿದರು.
ಜಿಲ್ಲೆಯ 1,945 ಮಕ್ಕಳು ಗುಣಮುಖ
‘ಕೊರೊನಾ ಮೊದಲನೇ ಅಲೆಯಲ್ಲಿ 946 ಮತ್ತು ಎರಡನೇ ಅಲೆಯಲ್ಲಿ 1,024 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1,970 ಮಕ್ಕಳಿಗೆ ಕೋವಿಡ್ ದೃಢಗೊಂಡಿತ್ತು. ಈ ಪೈಕಿ 1,945 ಮಕ್ಕಳು ಗುಣಮುಖರಾಗಿದ್ದು, ಮನೆಗೆ ತೆರಳಿದ್ದಾರೆ. 24 ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ಮಗು ಮಾತ್ರ ಮೃತಪಟ್ಟಿದೆ. ಆ ಮಗು ರಕ್ತ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿತ್ತು’ ಎಂದು ಡಿಎಚ್ಒ ಡಾ.ರಾಘವೇಂದ್ರಸ್ವಾಮಿ ಎಚ್.ಎಸ್. ತಿಳಿಸಿದ್ದಾರೆ.
**
ಜಿಲ್ಲಾಸ್ಪತ್ರೆಯಲ್ಲಿ 30 ಹಾಸಿಗೆ, ತಾಲ್ಲೂಕು ಆಸ್ಪತ್ರೆಯಲ್ಲಿ 10 ಹಾಸಿಗೆ, ಪಿಎಚ್‌ಸಿಗಳಲ್ಲಿ 1 ಹಾಸಿಗೆಯನ್ನು ಮಕ್ಕಳ ಕೋವಿಡ್ ಚಿಕಿತ್ಸೆಗಾಗಿಯೇ ಮೀಸಲಿಡಲಾಗಿದೆ.
– ಸಂಜಯ ಶೆಟ್ಟೆಣ್ಣವರ, ಹಾವೇರಿ ಜಿಲ್ಲಾಧಿಕಾರಿ
**
ರಾಜ್ಯದಲ್ಲೇ ಮೊದಲ ಬಾರಿಗೆ ಕೈಗೊಂಡಿರುವ ‘ವಾತ್ಸಲ್ಯ ಮಕ್ಕಳ ಆರೋಗ್ಯ ಅಭಿಯಾನ’ ಸಚಿವ ಬಸವರಾಜ ಬೊಮ್ಮಾಯಿ ಅವರ ಪರಿಕಲ್ಪನೆ.
– ಮೊಹಮ್ಮದ್ ರೋಶನ್, ಸಿಇಒ, ಹಾವೇರಿ ಜಿಲ್ಲಾ ಪಂಚಾಯಿತಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.