ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಗದ ಚಾಲನೆ ಅಪಘಾತಕ್ಕೆ ಆಹ್ವಾನ

‘ಅಪಘಾತ ರಹಿತ ಚಾಲನಾ ತರಬೇತಿ’ ಕಾರ್ಯಾಗಾರದಲ್ಲಿ ಡಿವೈಎಸ್ಪಿ ಎಂ.ಎಸ್ ಪಾಟೀಲ ಹೇಳಿಕೆ
Last Updated 17 ಆಗಸ್ಟ್ 2022, 13:38 IST
ಅಕ್ಷರ ಗಾತ್ರ

ಹಾವೇರಿ: ‘ಕರ್ತವ್ಯದ ಒತ್ತಡದಲ್ಲಿ ವೇಗವಾಗಿ ವಾಹನ ಚಲಾಯಿಸುವುದು ಅಪಘಾತಕ್ಕೆ ಆಹ್ವಾನ ನೀಡಿದಂತಾಗುತ್ತದೆ. ಆದ್ದರಿಂದ ಚಾಲಕರು ಸಂಚಾರ ನಿಯಮ ಉಲ್ಲಂಘನೆ ಮಾಡದೆ ಸಿಮೀತ ವೇಗದಲ್ಲಿ ವಾಹನ ಚಲಾಯಿಸಬೇಕು’ ಎಂದು ಡಿವೈಎಸ್ಪಿ ಎಂ.ಎಸ್ ಪಾಟೀಲ ಹೇಳಿದರು.

ನಗರದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗೀಯ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಅಪಘಾತ ರಹಿತ ಚಾಲನಾ ತರಬೇತಿ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಚಾಲಕರು ವಾಹನ ಚಾಲನೆಯಲ್ಲಿ ನಿರ್ಲಕ್ಷ್ಯವಹಿಸಬಾರದು. ಅಪಘಾತಗಳು ಸಂಭವಿಸದಂತೆ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಚಾಲಕರು ರಸ್ತೆ ಮೇಲೆ ಎಳೆದಿರುವ ವಿವಿಧ ಸಂಚಾರ ನಿಯಮದ ಪಟ್ಟಿಗಳನ್ನು ಗಮನದಲ್ಲಿಟ್ಟುಕೊಂಡು ವಾಹನ ಚಲಾಯಿಸಬೇಕು. ಅಪಘಾತ ಸಂಭವಿಸಿದಾಗ ಸಂಸ್ಥೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಅಪಘಾತವನ್ನು ಪರಿಶೀಲಿಸಬೇಕು ಎಂದು ಹೇಳಿದರು.

ಆರ್ಥಿಕ ಹೊರೆ:

ಉಪಮುಖ್ಯ ಅಂಕಿಸಂಖ್ಯಾಧಿಕಾರಿ ಮತ್ತು ವಿಭಾಗದ ಉಸ್ತುವಾರಿ ಅಧಿಕಾರಿಗಳಾದ ಮಹದೇವ ಮುಂಜಿ ಮಾತನಾಡಿ, ಕಳೆದ ನಾಲ್ಕು ತಿಂಗಳಿನಲ್ಲಿ ಹಾವೇರಿ ವಿಭಾಗದಲ್ಲಿ ಸಂಭವಿಸಿದ ವಿವಿಧ ಅಪಘಾತಕ್ಕೆ ಪರಿಹಾರ ನೀಡುವ ಮೂಲಕ ₹2.50 ಕೋಟಿ ಆರ್ಥಿಕ ಹೊರೆ ಸಂಸ್ಥೆ ಮೇಲೆ ಬಿದ್ದಿದೆ. ಅದ್ದರಿಂದ ಚಾಲಕರು ಸಮಚಿತ್ತದಿಂದ ಜಾಗೃತರಾಗಿ ವಾಹನ ಚಲಾಯಿಸಬೇಕು ಎಂದು ಸೂಚಿಸಿದರು.

ಅಪಘಾತ ರಹಿತ ಚಾಲನೆ ಮಾಡಿದ ಚಾಲಕರು, ಮುಖ್ಯಮಂತ್ರಿಯವರಿಂದ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಪಡೆದು, ಸಂಸ್ಥೆಯ ಇತರ ವಾಹನ ಚಾಲಕರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಸ್. ಜಗದೀಶ ಅಧ್ಯಕ್ಷತೆ ವಹಿಸಿದ್ದರು. ಹಾವೇರಿ ಶಹರ ಸಿ.ಪಿ.ಐ ಸುರೇಶ ಸಗರಿ, ಕಚೇರಿ ಆಡಳಿತಾಧಿಕಾರಿ ದಿವಾಕರ್ ಕೆ., ವಿಭಾಗೀಯ ಸಹಾಯಕ ಕುಶಲಕರ್ಮಿ ಚಂದ್ರು ಲಿಂಗಣ್ಣನವರ, ಸಿಬ್ಬಂದಿಗಳಾದ ಕೇಶವಮೂರ್ತಿ, ಅಶ್ರಫ್ ಅಲಿ, ಎಚ್.ಡಿ.ತೋಳಹುಣಸಿ, ವಾ.ಕ.ರ.ಸಾ ಸಂಸ್ಥೆಯ ವಾಹನ ಚಾಲಕರು ಇದ್ದರು.

ಚಾಲಕರಿಗೆ ಕಾರ್ಯಾಗಾರ

ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಆರ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ‘ರಸ್ತೆ ಸುರಕ್ಷತೆಯ ಕುರಿತು ಚಾಲಕರಿಗೆ ಎಲ್ಲ ರೀತಿಯ ಮುಂಜಾಗ್ರತೆ ತರಬೇತಿ, ಸಲಹೆ ನೀಡಲಾಗುತ್ತಿದೆ. ಅಲ್ಲದೆ ಅಪಘಾತರಹಿತ ಚಾಲನೆಯ ಅನೇಕ ಕಾರ್ಯಾಗಾರವನ್ನು ಚಾಲಕರು, ನಿರ್ವಾಹಕರಿಗೆ ಹಮ್ಮಿಕೊಳ್ಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಈ ಕಾರ್ಯಾಗಾರವನ್ನು ಪ್ರತಿ 15 ದಿನಕ್ಕೊಮ್ಮೆ ಆಯೋಜಿಸಲಾಗುವುದು ಎಂದರು.

ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಆರ್ಥಿಕವಾಗಿ ಕುಗ್ಗುತ್ತಿದೆ. ಆದ್ದರಿಂದ ಸಂಸ್ಥೆಯ ಬೆನ್ನೆಲುಬುಗಳಾದ ನಾವು ಆತ್ಮಸಾಕ್ಷಿಗೆ ಬದ್ಧರಾಗಿ ಕರ್ತವ್ಯ ನಿರ್ವಹಿಸಿದ್ದಲ್ಲಿ ಸಂಸ್ಥೆ ಆರ್ಥಿಕವಾಗಿ ಸದೃಢವಾಗಲಿದೆ ಎಂದರು.

ಸಂಚಾರ ವ್ಯವಸ್ಥಾಪಕರಾದ ಜಿ.ಬಿ.ಅಡರಕಟ್ಟಿ ಸ್ವಾಗತಿಸಿ, ಅಂಕಿ ಸಂಖ್ಯೆ ಸಹಾಯಕ ಸಂಚಾರ ಶಾಖೆಯ ವಿವೇಕಾನಂದ ವಂದಿಸಿದರು. ಸಿಬ್ಬಂದಿ ಮೇಲ್ವಿಚಾರಕರಾದ ಮಲ್ಲಿಕಾರ್ಜುನ ಹಿಂಚಿಗೇರಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT