ಮಂಗಳವಾರ, ಜುಲೈ 27, 2021
25 °C
ಮೂರನೇ ಅಲೆಗೂ ಮುನ್ನವೇ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ: ಬಸವರಾಜ ಬೊಮ್ಮಾಯಿ

ಮಕ್ಕಳ ಐಸಿಯು ವಾರ್ಡ್‌ ಆರಂಭಿಸಿ: ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಕೋವಿಡ್ ಮೂರನೇ ಅಲೆ ಆರಂಭವಾಗುವ ಮುನ್ನವೇ ಜೂನ್ 25ರಿಂದ ಜುಲೈ 25ರೊಳಗಾಗಿ ಜಿಲ್ಲೆಯಲ್ಲಿ ಗುರುತಿಸಲ್ಪಟ್ಟ 4.5 ಲಕ್ಷ ಮಕ್ಕಳ ಆರೋಗ್ಯ ತಪಾಸಣೆ ಪೂರ್ಣಗೊಳಿಸಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

ಬೆಂಗಳೂರಿನಿಂದ ಜಿಲ್ಲಾಡಳಿತದೊಂದಿಗೆ ಸೋಮವಾರ ‘ವಿಡಿಯೊ ಸಂವಾದ’ ಸಭೆ ನಡೆಸಿದ ಅವರು ಜಿಲ್ಲೆಯ ಕೋವಿಡ್ ಸ್ಥಿತಿಗತಿಗಳ ಮಾಹಿತಿ ಪಡೆದುಕೊಂಡರು. 

ಜಿಲ್ಲೆಯ 67 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಹಳ್ಳಿಗಳಲ್ಲಿ ವೈದ್ಯರ ತಂಡದೊಂದಿಗೆ ಮಕ್ಕಳ ಆರೋಗ್ಯ ತಪಾಸಣೆ ನಡೆಸಬೇಕು. ಅಗತ್ಯ ಔಷಧಿಗಳೊಂದಿಗೆ ತೆರಳಬೇಕು, ತೀವ್ರತರ ಆರೋಗ್ಯ ಸಮಸ್ಯೆಗಳಿಂದ ಬಳಲುವ ಮಕ್ಕಳಿಗೆ ಪೌಷ್ಟಿಕ ಆಹಾರ ಕಿಟ್ ನೀಡಬೇಕು. ತೀವ್ರತರ ಗಂಭೀರ ಆರೋಗ್ಯ ಸಮಸ್ಯೆ ಇರುವ ಮಕ್ಕಳನ್ನು ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಿಗೆ ದಾಖಲಿಸಿ ಮಕ್ಕಳ ತಜ್ಞರಿಂದ ಸೂಕ್ತ ಚಿಕಿತ್ಸೆ ನೀಡಬೇಕು ಎಂದರು. 

ಮಕ್ಕಳ ಕೋವಿಡ್ ಚಿಕಿತ್ಸೆಗಾಗಿ ಪ್ರತ್ಯೇಕ 30 ಹಾಸಿಗೆ ಸಾಮರ್ಥ್ಯದ ಪ್ರತ್ಯೇಕ ಐಸಿಯು ವಾರ್ಡ್ ಆರಂಭಿಸಿ ತಕ್ಷಣದಿಂದಲೇ ಸಿದ್ಧತೆ ಕೈಗೊಳ್ಳಿ ಎಂದು ಸೂಚನೆ ನೀಡಿದರು.

35 ವೆಂಟಿಲೇಟರ್:

ಜಿಲ್ಲೆಯಲ್ಲಿ ವೆಂಟಿಲೇಟರ್ ನಿರ್ವಹಣೆಗಾಗಿ ಟೆಕ್ನಿಷಿಯನ್‍ಗಳಿಗೆ ಒಂದು ತಿಂಗಳ ತರಬೇತಿ ನೀಡಿ ಎಂದು ಸೂಚನೆ ನೀಡಿದರು. ಸರ್ಕಾರದ ವತಿಯಿಂದ ಹೊಸದಾಗಿ ಜಿಲ್ಲೆಗೆ 25 ಹಾಗೂ ದಾನಿಗಳಿಂದ 10 ಒಳಗೊಂಡಂತೆ 35 ವೆಂಟಿಲೇಟರ್ ಜಿಲ್ಲೆಗೆ ಕಳುಹಿಸಿಕೊಡುವುದಾಗಿ ಹೇಳಿದರು.

ಕೋವಿಡ್‌ ಆರೈಕೆ ಕೇಂದ್ರ ಮುಚ್ಚಿ:

ಪಾಸಿಟಿವ್ ಪ್ರಕರಣ ತೀವ್ರತರ ಇಳಿಮುಖ ವಾಗುತ್ತಿವೆ. ಬಹಷ್ಟು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ರೋಗಿಗಳು ಇಲ್ಲದ ಕಾರಣ ಅಗತ್ಯ ಇಲ್ಲದ ಕೋವಿಡ್ ಕೇರ್ ಕೇಂದ್ರಗಳನ್ನು ತಾತ್ಕಲಿಕವಾಗಿ ಮುಚ್ಚಿ. ಈ ಕೇಂದ್ರಗಳಿಗೆ ಪೂರೈಸಲಾದ ಹಾಸಿಗೆ ಮತ್ತು ಇತರ ಸಾಮಗ್ರಿಗಳನ್ನು ಅಗತ್ಯ ಸಂದರ್ಭದಲ್ಲಿ ಮತ್ತೆ ಬಳಸಿಕೊಳ್ಳಲು ಅನುಕೂಲವಾಗುವಂತೆ ವ್ಯವಸ್ಥಿತವಾಗಿ ಜೋಡಿಸಿ ಒಂದೆಡೆ ಕಾಯ್ದಿರಿಸಿ ಎಂದು ಸೂಚಿಸಿದರು.

ಜಿಲ್ಲೆಯ ಕೋವಿಡ್ ಸ್ಥಿತಿಗತಿ, ನಿಯಂತ್ರಣ ಕುರಿತಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್‌ ರೋಶನ್‌ ಅವರು ಮಾಹಿತಿ ನೀಡಿದರು.

ಮರಣ ಪ್ರಮಾಣ ಹೆಚ್ಚಳ: ತರಾಟೆ

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಮಾಣ ಕಡಿಮೆ ಇದ್ದರೂ, ಮರಣ ಪ್ರಮಾಣ ಹೆಚ್ಚಾಗಿರುವ ಕುರಿತಂತೆ ಸಚಿವ ಬಸವರಾಜ ಬೊಮ್ಮಾಯಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ರಾಜ್ಯದಲ್ಲಿ ಮರಣ ಪ್ರಮಾಣ ಶೇ 2.5 ಪ್ರಮಾಣದಲ್ಲಿದ್ದರೆ, ಜಿಲ್ಲೆಯಲ್ಲಿ 3.5ರಷ್ಟಿದೆ. ಮರಣ ಪ್ರಮಾಣ ಹೆಚ್ಚಾಗಲು ಕಾರಣಗಳ ಕುರಿತು ಆಡಿಟ್ ಮಾಡಬೇಕು. ಮರಣ ಪ್ರಮಾಣ ಕಡಿಮೆ ಮಾಡಲು ಗಂಭೀರವಾಗಿ ಪ್ರಯತ್ನ ನಡೆಯುತ್ತಿಲ್ಲ ಎಂದು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.

ಜಿಲ್ಲೆಗೆ ತಜ್ಞರ ತಂಡ ಶೀಘ್ರ ಭೇಟಿ

ಜಿಲ್ಲೆಯಲ್ಲಿ ಮರಣ ಪ್ರಮಾಣ ಹೆಚ್ಚಳದ ವಿಶ್ಲೇಷಣೆಗೆ ರಾಜ್ಯದಿಂದ ತಜ್ಞರ ತಂಡವನ್ನು ಶೀಘ್ರವೇ ಕಳುಹಿಸಿ ಕೊಡಲಾಗುವುದು. ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣವನ್ನು ಕಡಿಮೆ ಮಾಡುವ ಹೊಣೆಗಾರಿಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರ ಮೇಲಿದೆ. ಇಬ್ಬರ ಹೊಣೆಗಾರಿಕೆಯಾಗಿದೆ. ಯಾವುದೇ ವೈದ್ಯರು ನಿರ್ಲಕ್ಷ್ಯವಹಿಸಿದರೆ ವರದಿ ಮಾಡಿ. ಇಂತಹ ವೈದ್ಯರ ಮೇಲೆ ಜಿಲ್ಲಾಧಿಕಾರಿ ಅವರು ಅಮಾನತು ಮಾಡಲು ಕ್ರಮವಹಿಸುವಂತೆ ಸಚಿವ ಬೊಮ್ಮಾಯಿ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಯೋಗೇಶ್ವರ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಡಿಎಚ್‌ಒ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್. ಹಾವನೂರ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು