ಸೋಮವಾರ, ಜನವರಿ 17, 2022
19 °C
ಜಯಂತಿಗಳಂದು ಮಾತ್ರ ನೆನಪಾಗುವ ಮಹಾತ್ಮರ ಮೂರ್ತಿಗಳು: ಸ್ವಚ್ಛತೆ, ಸುರಕ್ಷತೆಯ ಕೊರತೆ

ಹಾವೇರಿ: ಪ್ರತಿಮೆ, ಪುತ್ಥಳಿಗೆ ನಿತ್ಯ ದೂಳಿನ ಮಜ್ಜನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಗರ ಮತ್ತು ಪಟ್ಟಣಗಳ ಪ್ರಮುಖ ವೃತ್ತಗಳಲ್ಲಿ ಪ್ರತಿಷ್ಠಾಪಿಸಿರುವ ಸಂತರು, ಶರಣರು, ಸ್ವಾತಂತ್ರ್ಯ ಯೋಧರು ಹಾಗೂ ಗಣ್ಯರ ಪ್ರತಿಮೆ–ಪುತ್ಥಳಿಗಳು ನಾಡಹಬ್ಬ, ಜಯಂತಿ, ಪುಣ್ಯಸ್ಮರಣೆಗಳಂದು ಹಾರ ಹಾಕಲು ಮಾತ್ರ ಸೀಮಿತವಾಗಿವೆ. ಸೂಕ್ತ ನಿರ್ವಹಣೆ ಕೊರತೆಯಿಂದ ನಿತ್ಯವೂ ದೂಳಿನ ಮಜ್ಜನಕ್ಕೆ ತುತ್ತಾಗುತ್ತಿವೆ.

ಪ್ರತಿಮೆ–ಪುತ್ಥಳಿಗಳಿಗೆ ಶೆಲ್ಟರ್‌ ವ್ಯವಸ್ಥೆಯಿಲ್ಲದೆ ಬಿಸಿಲು ಮತ್ತು ಮಳೆಯಿಂದ ಹಾಳಾಗುತ್ತಿವೆ. ದೂಳು ಮತ್ತು ಹಕ್ಕಿ–ಪಕ್ಷಿಗಳ ಹಿಕ್ಕೆಗಳಿಂದ ವಿರೂಪಗೊಳ್ಳುತ್ತಿವೆ. ಸೂಕ್ತ ಭದ್ರತೆಯ ಕೊರತೆಯಿಂದ ಪುಂಡ ಪೋಕರಿಗಳ ಕಿಡಿಗೇಡಿತನಕ್ಕೆ ಬಲಿಯಾಗುತ್ತಿವೆ. ಇನ್ನೂ ಕೆಲವು ಕಡೆ ಫುಟ್‌ಪಾತ್‌ ವ್ಯಾಪಾರಿಗಳು ಹಗ್ಗ ಕಟ್ಟಲು, ಫ್ಲೆಕ್ಸ್‌–ಬ್ಯಾನರ್‌ ಕಟ್ಟುವುದಕ್ಕೆ ದುರ್ಬಳಕೆಯಾಗುತ್ತಿವೆ.

ನಗರದ ಜೆ.ಎಚ್‌. ಪಟೇಲ್‌ ವೃತ್ತದಲ್ಲಿ ಹಲವಾರು ವರ್ಷಗಳಿಂದ ಹಾವೇರಿ ಜಿಲ್ಲೆಯ ನಿರ್ಮಾತೃ ಜೆ.ಎಚ್‌. ಪಟೇಲರ ಪುತ್ಥಳಿ ಮರುಪ್ರತಿಷ್ಠಾಪನೆಯ ಕಾರ್ಯ ನನೆಗುದಿಗೆ ಬಿದ್ದಿದೆ. 2017ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಹಾವೇರಿಗೆ ಭೇಟಿ ನೀಡಿದ ಸಂದರ್ಭ, ಪಟೇಲರ ಪುತ್ಥಳಿ ಅವರನ್ನು ಹೋಲುತ್ತಿಲ್ಲ ಎಂಬ ಕಾರಣದಿಂದ ಬದಲಿಸಲು ಸೂಚಿಸಿದ್ದರು. ಇದುವರೆಗೂ ಪುತ್ಥಳಿ ಪ್ರತಿಷ್ಠಾಪಿಸದೇ ಇರುವುದರಿಂದ ವೃತ್ತ ಭಣಗುಡುತ್ತಿದೆ. 

ಸ್ವಚ್ಛತೆಗೆ ಆದ್ಯತೆ

ರಟ್ಟೀಹಳ್ಳಿ: ತಾಲ್ಲೂಕಿನಲ್ಲಿ ಮಾಸೂರು ಗ್ರಾಮದಲ್ಲಿ ಸರ್ವಜ್ಞನ ಪ್ರತಿಮೆ ಹಾಗೂ ಮಾಜಿ ಶಿಕ್ಷಣ ಸಚಿವ ಜಿ.ಬಿ. ಶಂಕರರಾವ್ ಅವರ ಪ್ರತಿಮೆಯನ್ನು ಕುಡುಪಲಿ ಗ್ರಾಮದ ಕಾಲೇಜು ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದೆ.

‘ಸರ್ವಜ್ಞ ಪ್ರತಿಮೆಯನ್ನು ಸರ್ಕಾರಿ ಶಾಲಾ ಆವರಣದಲ್ಲಿ ಸ್ಥಾಪಿಸಲಾಗಿದೆ. ಅಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಪ್ರತಿದಿನ ಪುತ್ಥಳಿ ಸುತ್ತಲೂ ಕಸ ಗುಡಿಸುವುದು ಸೇರಿದಂತೆ ಸ್ವಚ್ಛತೆಯನ್ನು ಕಾಪಾಡಿಕೊಂಡು ಬರಲಾಗುತ್ತದೆ. ಅಲ್ಲದೆ ಗ್ರಾಮದ ಸರ್ವಜ್ಞ ಪ್ರಾಧಿಕಾರ ಹೋರಾಟ ಸಮಿತಿ, ಹಲವಾರು ಸ್ಥಳೀಯ ಸಂಘ-ಸಂಸ್ಥೆಗಳು ಪ್ರತಿಮೆಯ ಸ್ವಚ್ಛತೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕಾವ್ಯ ಹಿತ್ತಲಮನಿ.

ಸ್ಮಾರಕ ಸಮಿತಿಯಿಂದ ಪ್ರತಿಮೆ ನಿರ್ವಹಣೆ

ಹಿರೇಕೆರೂರು: ಪಟ್ಟಣದ ಪ್ರವಾಸಿ ಮಂದಿರ ಸಮೀಪದ ವೃತ್ತಕ್ಕೆ ಸರ್ವಜ್ಞನ ಹೆಸರು ಇಡಲಾಗಿದ್ದು, ವೃತ್ತದಲ್ಲಿ ಸರ್ವಜ್ಞ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ. ಸರ್ವಜ್ಞ ಸ್ಮಾರಕ ಸಮಿತಿಯಿಂದ ಪ್ರತಿಮೆ ನಿರ್ವಹಣೆ ಮಾಡಲಾಗುತ್ತಿದೆ.

ಎತ್ತರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದರಿಂದ ಹಾಗೂ ಒಳಗೆ ಪ್ರವೇಶಿಸಲು ಬಾರದಂತೆ ಸ್ಟೀಲ್ ಪೈಪ್ ಅಳವಡಿಸಿರುವುದರಿಂದ ಸರ್ವಜ್ಞ ಮೂರ್ತಿ ಸುರಕ್ಷಿತವಾಗಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಪಟ್ಟಣದಲ್ಲಿ ಯಾವುದೇ ಜಯಂತಿ, ಸರ್ಕಾರಿ ಕಾರ್ಯಕ್ರಮ, ರಾಷ್ಟ್ರೀಯ ಹಬ್ಬಗಳು, ವಿಜಯ ದಶಮಿ, ದೀಪಾವಳಿ ಮುಂತಾದ ಪ್ರಮುಖ ಹಬ್ಬಗಳಂದು ಸರ್ವಜ್ಞ ಪ್ರತಿಮೆಯನ್ನು ಸ್ವಚ್ಛಗೊಳಿಸಿ, ಪೂಜಿಸಿ, ಹೂವಿನ ಅಲಂಕಾರ ಮಾಡಲಾಗುತ್ತದೆ. ರಸ್ತೆಯ ದೂಳು ಹೆಚ್ಚಾದರೆ ಪದೇ ಪದೇ ಸ್ವಚ್ಛಗೊಳಿಸುವ ವ್ಯವಸ್ಥೆ ಮಾಡಿದ್ದೇವೆ ಎಂದು ಸರ್ವಜ್ಞ ಸ್ಮಾರಕ ಸಮಿತಿ ಅಧ್ಯಕ್ಷ ಎಸ್.ಎಸ್.ಪಾಟೀಲ ತಿಳಿಸಿದರು.

ಮೆರುಗು ಹೆಚ್ಚಿಸಿದ ವಿದ್ಯುದ್ದೀಪ

ಹಾನಗಲ್: ತಾಲ್ಲೂಕು ಪಂಚಾಯ್ತಿ ಅಂಗಳದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್ ಪ್ರತಿಮೆ ಮತ್ತು ಕುಮಾರೇಶ್ವರ ವಿರಕ್ತಮಠದ ಆವರಣದಲ್ಲಿ ಬಸವೇಶ್ವರ, ಕಿತ್ತೂರು ರಾಣಿ ಚನ್ನಮ್ಮ ಪುತ್ಥಳಿ ಸ್ಥಾಪಿಸಲಾಗಿದೆ. ದಲಿತ ಮುಖಂಡರ ಶ್ರಮದ ಮೂಲಕ ಇತ್ತೀಚೆಗಿನ ವರ್ಷದಲ್ಲಿ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಯಾಗಿದೆ.

ಪ್ರತಿಮೆ ಪ್ರತಿಷ್ಠಾಪಿತ ಸ್ಥಳವು ಸುರಕ್ಷಿತವಾಗಿದೆ. ಅಲ್ಲದೆ, ತಾಲ್ಲೂಕು ಪಂಚಾಯ್ತಿ ಸಿಬ್ಬಂದಿ ಆವರಣ ಸ್ವಚ್ಛತೆ ಸಮಯದಲ್ಲಿ ಪ್ರತಿಮೆ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ವಿದ್ಯುತ್‌ ದೀಪದ ವ್ಯವಸ್ಥೆ ಇದೆ. ಆಗಾಗ್ಗೆ ಬಣ್ಣ ಹಚ್ಚುವುದು ನಡೆಯತ್ತದೆ. ವಿರಕ್ತಮಠ ಆವರಣದಲ್ಲಿನ ಬಸವಣ್ಣ, ಚನ್ನಮ್ಮ ಪುತ್ಥಳಿ ಸುರಕ್ಷತೆ ದೃಷ್ಟಿಯಿಂದ ಉತ್ತಮ ಸ್ಥಳದಲ್ಲಿವೆ. ಪ್ರತಿಮೆ ಎತ್ತರದ ಸ್ಥಾನದಲ್ಲಿವೆ. ಸುತ್ತಲೂ ಉದ್ಯಾನ ನಿರ್ಮಾಣ ಮಾಡಲಾಗಿದೆ. ಇಲ್ಲಿನ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಿಬ್ಬಂದಿ ಈ ಪುತ್ಥಳಿ ಸ್ವಚ್ಛತೆ ಮತ್ತು ರಕ್ಷಣೆ ಜವಾಬ್ದಾರಿ ನೋಡಿಕೊಳ್ಳುತ್ತಾರೆ.

ಪ್ರತಿಮೆಗೆ ಹಗ್ಗ ಬಿಗಿಯುವ ವ್ಯಾಪಾರಿಗಳು!

ಶಿಗ್ಗಾವಿ: ಬಸವಣ್ಣನ ಮೂರ್ತಿಯನ್ನು ತಾಲ್ಲೂಕಿನ ಬಂಕಾಪುರ ಹಳೆಯ ನಾಡ ಕಚೇರಿ ಮುಂದೆ ಪ್ರತಿಷ್ಠಾಪಿಸಲಾಗಿದೆ. ಆದರೆ ಇಂದು ಸ್ವಚ್ಛತೆ ಇಲ್ಲದೆ ಹಾಳುಬಿದ್ದಿದೆ. ಸಂಬಂಧಿಸಿದ ಅಧಿಕಾರಿಗಳು ಈ ಕಡೆ ಗಮನ ಹರಿಸುತ್ತಿಲ್ಲ ಎಂದು ಇಲ್ಲಿನ ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಬಸವ ಜಯಂತಿ’ ಮಹೋತ್ಸವದಂದು ಮಾತ್ರ ಮೂರ್ತಿಗೆ ಹೂವು, ಹಾರ ಹಾಕಿ ಪೂಜಿಸುತ್ತಾರೆ. ಮತ್ತೆ ಒಂದು ವರ್ಷದವರೆಗೆ ಯಾರೂ ಈ ಕಡೆ ನೋಡುವುದಿಲ್ಲ. ಬಂಕಾಪುರ ಪೇಟೆ ರಸ್ತೆಯಲ್ಲಿನ ಬಸವ ಪ್ರತಿಮೆ ಇಟ್ಟಿರುವ ಸ್ಥಳದಲ್ಲಿ ರಾತ್ರಿ ಕೆಲ ಪುಂಡುಪೋಕರಿಗಳು ಮದ್ಯದ ಬಾಟಲಿಗಳನ್ನು ಎಸೆದು ಹೋಗುತ್ತಿದ್ದಾರೆ. 

ವೃತ್ತಗಳ ಅಭಿವೃದ್ಧಿಗೆ ಪುರಸಭೆ ನಿರಾಸಕ್ತಿ

ಸವಣೂರ: ಪಟ್ಟಣದಿಂದ ಶಿಗ್ಗಾವಿ ಮತ್ತು ಗದಗ ನಗರಗಳಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ವಿ.ಕೃ. ಗೋಕಾಕರ ಪುತ್ಥಳಿ ಹಾಗೂ ತಾಲ್ಲೂಕು ಸಾರ್ವಜನಿಕರ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತವನ್ನು ಪುರಸಭೆ ವತಿಯಿಂದ ನಿರ್ಮಾಣ ಮಾಡಲಾಗಿದೆ.

ಅಂಬೇಡ್ಕರ್‌ ವೃತ್ತದ ಭಾವಚಿತ್ರ ಮತ್ತು ಗೋಕಾಕರ ಪುತ್ಥಳಿಗೆ ಕರ್ನಾಟಕ ರಾಜ್ಯೋತ್ಸವ ಮತ್ತು ಕನ್ನಡಪರ ಕಾರ್ಯಕ್ರಮದಲ್ಲಿ ಮಾತ್ರ ನೆನಪಿಸಿಕೊಂಡು ಪುರಸಭೆ ಸ್ವಚ್ಛತೆಗೆ ಮುಂದಾದರೆ, ಕನ್ನಡ ಪರ ಸಂಘಟನೆಗಳು ಮಾತ್ರ ಜಯಂತಿ, ವಿವಿಧ ಹೋರಾಟಗಳಲ್ಲಿ ಪೂಜೆ ಸಲ್ಲಿಸುತ್ತವೆ. ವೃತ್ತಗಳ ರಸ್ತೆಯಲ್ಲಿ ಗುಂಡಿಗಳು ಬಿದ್ದು ದೂಳಿನ ಮಜ್ಜನ ನಿರಂತರವಾಗಿದೆ. ವೃತ್ತಗಳನ್ನು ಅಭಿವೃದ್ಧಿಪಡಿಸಿ, ಪಟ್ಟಣದ ಸೌಂದರ್ಯವನ್ನು ಪುರಸಭೆ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಹೆಚ್ಚಿಸಬೇಕಿದೆ ಎಂದು ಜನರು ಒತ್ತಾಯಿಸುತ್ತಾರೆ.

ತಿಮ್ಮನಗೌಡ್ರ ಪ್ರತಿಮೆಗೆ ಬೇಕಿದೆ ರಕ್ಷಣೆ

ರಾಣೆಬೆನ್ನೂರು: ಇಲ್ಲಿನ ಸಿದ್ಧೇಶ್ವರ ನಗರದ ಮಿನಿ ವಿಧಾನಸೌಧದ ಮುಂಭಾಗ ಸ್ವಾತಂತ್ರ್ಯ ಯೋಧ ಮೆಣಸಿನಹಾಳ ತಿಮ್ಮನಗೌಡ್ರ ಪ್ರತಿಮೆ ಇದೆ. ಕೋರ್ಟ್‌ ಆವರಣದಲ್ಲಿ ತಿಮ್ಮನಗೌಡರದ್ದೇ ಸ್ಮಾರಕ ನಿರ್ಮಿಸಲಾಗಿದೆ. ನಗರ ಠಾಣೆ ಎದುರು ಬೃಹತ್‌ ಧ್ವಜ ಸ್ತಂಭವಿದೆ. ಎಲ್ಲ ಕಡೆಗಳಲ್ಲಿ ನಗರಸಭೆಯಿಂದ ಕಸ ಗುಡಿಸಿ ಸ್ವಚ್ಚತೆ ಮಾಡುತ್ತಾರೆ.

ಮಿನಿ ವಿಧಾನಸೌಧದ ಎದುರಿಗೆ ಇರುವ ಮೆಣಸಿನಹಾಳ ತಿಮ್ಮನಗೌಡ್ರ ಪ್ರತಿಮೆ ಸುತ್ತಲೂ ಹಾಕಿದ ಕಬ್ಬಿಣ ಚೈನು, ಕಂಬ ಕಿತ್ತು ಹೋಗಿವೆ. ಪ್ರತಿಮೆ ಸುತ್ತಲೂ ಸೂಕ್ತ ಆವರಣ ಗೋಡೆ ಇಲ್ಲ. ಕಟ್ಟೆ ಮೇಲೆ ಜನರು ಕುಳಿತು ಅಡಿಕೆ ಎಲೆ, ಗುಟಕಾ ತಿಂದು ಉಗಿಯುತ್ತಾರೆ. ವಾರಕ್ಕೊಮ್ಮೆಯಾದರೂ ಸ್ವಚ್ಛತೆಗೆ ಮುಂದಾಗಬೇಕು ಎಂದು ಸ್ವಾಭಿಮಾನಿ ಕರವೇ ರಾಜ್ಯ ಘಟಕದ ಅಧ್ಯಕ್ಷ ನಿತ್ಯಾನಂದ ಕುಂದಾಪುರ ದೂರಿದರು.

ಜಯಂತಿಗಳಲ್ಲಿ ನೆನಪಾಗುವ ಪ್ರತಿಮೆಗಳು!

ಬ್ಯಾಡಗಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ, ನೆಹರೂ ವೃತ್ತದಲ್ಲಿ ಜವಾಹರಲಾಲ್‌ ನೆಹರೂ ಹಾಗೂ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮಹದೇವ ಮೈಲಾರ ಹಾಗೂ ಸಾಹಿತಿ ಮಹದೇವ ಬಣಕಾರ ಅವರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ.

ಪುರಸಭೆ ಆವರಣದಲ್ಲಿ ಸುಭಾಸಚಂದ್ರ ಬೋಸ್‌ ಪ್ರತಿಮೆ ಸ್ಥಾಪಿಸಿದ್ದು, ಸುತ್ತಲೂ ಉದ್ಯಾನ ಬೆಳೆಸಲಾಗಿದ್ದು ಹಸಿರಿನಿಂದ ಕಂಗೊಳಿಸುತ್ತಿದೆ. ರಾತ್ರಿ ಸಮಯದಲ್ಲಿ ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪಟ್ಟಣದ ಮಹಾತ್ಮರ ಇನ್ನುಳಿದ ಪ್ರತಿಮೆಗಳ ಸುತ್ತಲೂ ಹೂವಿನ ಗಿಡಗಳನ್ನು ಬೆಳೆಸಲು ಮುಂದಾಗುವುದಾಗಿ ಪುರಸಭೆ ಅಧ್ಯಕ್ಷೆ ಸರೋಜಾ ಉಳ್ಳಾಗಡ್ಡಿ ತಿಳಿಸಿದರು.

***

ಕಂದಾಯ, ಲೊಕೋಪಯೋಗಿ ಮತ್ತು ನಗರಸಭೆ ಅಧಿಕಾರಿಗಳು ಪ್ರತಿಮೆ ಇರುವ ವೃತ್ತವನ್ನು ಸುಂದರಗೊಳಿಸಲು ಕ್ರಮ ಕೈಗೊಳ್ಳಬೇಕು

ಡಾ.ಗಿರೀಶ ಕೆಂಚಪ್ಪನವರ, ಗೋ ಗ್ರೀನ್‌ ಸಂಚಾಲಕ, ರಾಣೆಬೆನ್ನೂರು

***

ರಾಷ್ಟ್ರೀಯ ಹಬ್ಬಗಳಂದು ಮಾತ್ರ ಸ್ವಚ್ಛತೆ ಮಾಡಲಾಗುತ್ತದೆ. ಮಹಾತ್ಮರ ಪ್ರತಿಮೆಗಳನ್ನು ನಿತ್ಯ ಸ್ವಚ್ಛಗೊಳಿಸುವ ಕಾರ್ಯವಾಗಬೇಕಾಗಿದೆ

ಶೇಖರಗೌಡ ಗೌಡ್ರ, ಬ್ಯಾಡಗಿ ನಿವಾಸಿ

***

ಬಂಕಾಪುರದ ಬಸವಣ್ಣ ಪ್ರತಿಮೆಗೆ ಜಾಹೀರಾತು ಬ್ಯಾನರ್‌, ಸಂತೆ ದಿನ ಟೆಂಟಿನ ಹಗ್ಗ ಕಟ್ಟುತ್ತಾರೆ. ಸುರಕ್ಷತೆ– ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು

ಮಂಜುನಾಥ ಕೂಲಿ, ಸಮಾಜ ಸೇವಕ, ಶಿಗ್ಗಾವಿ

***

ಹಾವೇರಿ ನಗರದಲ್ಲಿ ಜೆ.ಎಚ್‌.ಪಟೇಲರ ಸುಂದರ ಪುತ್ಥಳಿಯನ್ನು ಮರುಪ್ರತಿಷ್ಠಾಪಿಸಲು ಶೀಘ್ರದಲ್ಲೇ ಕ್ರಮ ಕೈಗೊಳ್ಳುತ್ತೇನೆ

ಸಂಜೀವಕುಮಾರ ನೀರಲಗಿ, ಹಾವೇರಿ ನಗರಸಭೆ ಅಧ್ಯಕ್ಷ

***

ಪ್ರಜಾವಾಣಿ ತಂಡ: ಸಿದ್ದು ಆರ್‌.ಜಿ.ಹಳ್ಳಿ, ಮುಕ್ತೇಶ್ವರ ಕೂರಗುಂದಮಠ, ಎಂ.ವಿ.ಗಾಡದ, ಕೆ.ಎಚ್‌.ನಾಯಕ, ಮಾರುತಿ ಪೇಟಕರ, ಪ್ರಮೀಳಾ ಹುನಗುಂದ, ಗಣೇಶಗೌಡ ಎಂ.ಪಾಟೀಲ, ಪ್ರದೀಪ ಕುಲಕರ್ಣಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು