ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರಸ್ಯದ ಗ್ರಾಮ ಅಡವಿಸೋಮಾಪುರ

ಐತಿಹಾಸಿಕ ದೇವಾಲಯಗಳ ತಾಣ, 9 ಕೆರೆಗಳುಳ್ಳ ವಿಶೇಷ ಗ್ರಾಮ
Last Updated 25 ಫೆಬ್ರುವರಿ 2023, 19:31 IST
ಅಕ್ಷರ ಗಾತ್ರ

ತಡಸ: ಅಡವಿಸೋಮಾಪುರ ಗ್ರಾಮವು ಪೂರ್ವಿಕರ ಮಾಹಿತಿಯ ಪ್ರಕಾರ ಹೊನ್ನಾಪೂರ ಗ್ರಾಮದಲ್ಲಿ ಉಂಟಾದ ಪ್ಲೇಗ್ ಮತ್ತು ಕಾಲರಾ ರೋಗಕ್ಕೆ ಒಳಗಾಗಿ ಇಡೀ ಊರಿಗೆ-ಊರೇ ಸ್ಮಶಾನವಾಗಿತ್ತು, ಇದರಿಂದ ಜೀವ ಉಳಿಸಿಕೊಳ್ಳಲು ಬಹುಸಂಖ್ಯಾತ ಜನರು ಆ ಗ್ರಾಮವನ್ನು ತೊರೆದು, ಸೋಮಪ್ಪ ಎಂಬ ಬಲಶಾಲಿಯ ಹಿಂಬಾಲಕರಾಗಿ ಅಡವಿಯಲ್ಲಿ ನೆಲೆಯನ್ನು ಕಂಡುಕೊಂಡರು ಇದರ ಹಿನ್ನೆಲೆಯಲ್ಲಿ ಸೋಮಪ್ಪನ ಹಿಂಬಾಲಕರಿರುವ ಈ ಗುಂಪಿಗೆ ‘ಅಡವಿಸೋಮಾಪುರ’ ಎಂಬ ಹೆಸರು ಬಂದಿದೆ ಎನ್ನುವ ಐತಿಹ್ಯ ಜನರ ಬಾಯಿಯಲ್ಲಿದೆ.

ಇನ್ನೂ ಕೆಲವೊಂದಿಷ್ಟು ಜನರು ಬೆಣ್ಣೆಹಳ್ಳದ ದಂಡೆಯ ಅಕ್ಕ-ಪಕ್ಕದಲ್ಲಿ ವಾಸವಾಗಿದ್ದವರು. ಹಳ್ಳದ ಪ್ರವಾಹದಿಂದ ಎತ್ತರದ ಪ್ರದೇಶಕ್ಕೆ ಬಂದು ವಿಶಾಲವಾದ ಅಡವಿಯ ಮಧ್ಯದಲ್ಲಿ ವಾಸವಾಗಿದ್ದರಿಂದ ಈ ಗ್ರಾಮಕ್ಕೆ ಅಡವಿಸೋಮಾಪುರ ಎಂಬ ಹೆಸರು ಬಂದಿದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.

ಇಂದಿಗೂ ಬೆಣ್ಣೆಹಳ್ಳದ ಪಕ್ಕದ ಜಮೀನಿನಲ್ಲಿ ಉಳುಮೆ ಮಾಡುವಾಗ ಅಲ್ಲಿ ಸಾಕಷ್ಟು ಒಡೆದ ಮಡಕೆ, ಸುಟ್ಟ ಇಟ್ಟಿಗೆಯ ಚೂರುಗಳು ಸಿಗುತ್ತವೆ. ಪ್ರಸ್ತುತ ಅಡವಿಸೋಮಾಪುರ ಗ್ರಾಮವು, ಶಿಗ್ಗಾವಿ ತಾಲ್ಲೂಕಿನ ಕುನ್ನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುತ್ತದೆ. ಕಂಬಾರರು, ಬಡಿಗೇರ, ಅಕ್ಕಸಾಲಿಗರು, ಇಂತಹ ವೃತ್ತಿಕಸುಬುಗಳಿದ್ದು ಎಲ್ಲರೂ ಒಗ್ಗಟ್ಟಿನಿಂದ ಬದುಕು ಸಾಗಿಸಿತ್ತಿದ್ದಾರೆ.

ಈ ಗ್ರಾಮ ಅಪಾರವಾದ ಅರಣ್ಯ ಸಂಪತ್ತು ಮತ್ತು ನೈಸರ್ಗಿಕ ವೈವಿಧ್ಯತೆಯಿಂದ ಕೂಡಿದ್ದು, ದಟ್ಟವಾದ ಅಡವಿ ಅಂಚಿನಲ್ಲಿದೆ. ಇಲ್ಲಿನ ಮೌಖಿಕ ಸಾಹಿತ್ಯವಾದ ಜನಪದಗೀತೆ, ಗಾದೆ, ಕಥೆ, ಒಗಟು ಲಾವಣಿ, ಮೊಹರಂ ಹಾಡುಗಳು ಸಂಗ್ರಹವಾಗಬೇಕಾಗಿದೆ. ಅಡವಿಸೋಮಾಪುರ ಗ್ರಾಮವು ಶಿಗ್ಗಾವಿ ತಾಲ್ಲೂಕಿನಲ್ಲೇ ವೈಶಿಷ್ಟ್ಯಪೂರ್ಣ ಗ್ರಾಮ ಎನ್ನಿಸಿಕೊಂಡಿದೆ.

ಐತಿಹಾಸಿಕ ದೇವಾಲಯಗಳು:

ಐತಿಹಾಸಿಕ ದೇವಾಲಯಗಳಾದ ಶರಣಬಸವೇಶ್ವರ, ಪಾಂಡುರಂಗ, ಬಸವಣ್ಣನ ದೇವಾಲಯಗಳು ಇಲ್ಲಿವೆ. ದ್ಯಾಮವ್ವ, ಕರೆವ್ವ, ಮರೆವ್ವ, ತಾಯವ್ವ, ದುರ್ಗವ್ವ ಎಂಬ ಗ್ರಾಮದೇವತೆಯ ಗುಡಿಗಳಿವೆ. ಇಲ್ಲಿ ಬಸವ ಜಯಂತಿಯಂದು ಶರಣ ಬಸವಣ್ಣನವರ ಜಾತ್ರೆ, ಭಾರತ ಹುಣ್ಣಿಮೆಯ ದಿನ ಪಾಂಡುರಂಗನ ಜಾತ್ರೆ, ಯುಗಾದಿಗೆ ಮರೆವ್ವನ ಜಾತ್ರೆ, ತಾಯವ್ವನ ಜಾತ್ರೆ ವಡ್ಡಮ್ಮನ ಜಾತ್ರೆ ನಡೆಸಲಾಗುತ್ತದೆ. ಗರಡಿಮನೆ, ವೀರಗಲ್ಲು, ನಿಪ್ಪಿಕಲ್ಲುಗಳು ಮತ್ತು ಬೇಣ್ಣಿಹಳ್ಳ ಬಂದು ಸೇರುವ ಹೀರೆಕೆರಿ ಈ ಗ್ರಾಮದ ನೀರಿನ ಮೂಲ ಸಂಪತ್ತು.

ವಿಶಾಲವಾದ ಕೆರೆಗಳು:

ಹಿರೆಕೆರಿ, ತುಂಬಿಕೆರಿ, ಹೊಸಮನಿಕೆರಿ, ಕೋಟಿಹೊಂಡ, ಗೌಡಗಟ್ಟಿಕೆರೆ, ಹಾಲಕ್ಕನಕೆರಿ, ಮಾದನಗಟ್ಟಿ, ಬಾಸನಗಟ್ಟಿ, ಜೋವನಗಟ್ಟಿಕೆರಿ, ಹುಣಸಿಕಟ್ಟಿಕೆರಿ ಸೇರಿದಂತೆ ಒಟ್ಟು 9 ಕೆರೆಗಳನ್ನು ಹೊಂದಿದ್ದು, ಹಿರೆಕೆರಿಯಿಂದ ಬರುವ ಮೇಲು ಕಾಲುವೆ, ಮತ್ತು ಬೆಣ್ಣಿಹಳ್ಳ, ಇಲ್ಲಿನ ರೈತರ ಜಮೀನಿಗೆ ನೀರುಣಿಸುತ್ತವೆ.

ಮೊಹರಂ ಆಚರಣೆ:

ಈ ಗ್ರಾಮದಲ್ಲಿ ಮುಸ್ಲಿಂ ಸಮುದಾಯ ಇಲ್ಲದಿದ್ದರು ಮೊಹರಂ ಹಬ್ಬವನ್ನು ಎಲ್ಲ ಸಮುದಾಯದವರು ಒಟ್ಟಿಗೆ ಸೇರಿ ಸಂಭ್ರಮದಿಂದ ಆಚರಿಸುವರು, ಎಲ್ಲಾ ಸಮುದಾಯದ ಜನರು ಅಲಾವಿ ದೇವರನ್ನು ಆರಾಧಿಸುತ್ತಾರೆ.

ಇಟ್ಟಂಗಿ ಬಟ್ಟಿಗೆ ಹೆಸರುವಾಸಿ

‘ಈ ಗ್ರಾಮವನ್ನು ಇಟ್ಟಂಗಿ ಬಟ್ಟಿ (ಇಟ್ಟಿಗೆ) ಕಾರ್ಖಾನೆ ಎಂತಲೂ ಕರೆಯುತ್ತಾರೆ. ಇಟ್ಟಂಗಿ ತಯಾರಕರ ಸಂಖ್ಯೆ ಹೆಚ್ಚು. ವಿಜಯಪುರ ಜಿಲ್ಲೆಯಿಂದ ಕೂಲಿ ಕಾರ್ಮಿಕರು ಬಂದು ಇಟ್ಟಂಗಿ ತಯಾರಿಕಾ ಕೆಲಸದಲ್ಲಿ ತೊಡುಗುತ್ತಾರೆ. ಗ್ರಾಮದಲ್ಲಿ ಒಂದು ದಿನದ ವಹಿವಾಟು ಸುಮಾರು ₹6 ರಿಂದ 8 ಲಕ್ಷ ಆಗಿರಬಹುದು. ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಇಟ್ಟಂಗಿ ತಯಾರಿಸುವ ಗ್ರಾಮ ನಮ್ಮದು’ ಎಂದು ಗ್ರಾಮಸ್ಥ ನಾಗರಾಜ ಲಂಗೋಟಿ ಹೇಳುತ್ತಾರೆ.

ಜಾತಿ-ಧರ್ಮದ ಭೇದವಿಲ್ಲದೇ ಮುಕ್ತ ಮನಸ್ಸಿನಿಂದ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾರೆ. ಗ್ರಾಮಸ್ಥರು ಧಾರ್ಮಿಕ ಆಚರಣೆ ಮೇಲೆ ಅಪಾರ ನಂಬಿಕೆ ಹೊಂದಿದ್ದಾರೆ
– ಎಂ.ಎಚ್ ದುಂಡಪ್ನವರ, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT