ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತರಿಗೆ ಸಂಜೀವಿನಿಯಾದ ‘ಸೇವಾ ಭಾರತಿ’

925 ಮಂದಿಗೆ ‘ಟೆಲಿ ಮೆಡಿಸಿನ್‌’; ಉಚಿತ ಆಹಾರ, ಔಷಧ ವಿತರಣೆ
Last Updated 16 ಜೂನ್ 2021, 12:44 IST
ಅಕ್ಷರ ಗಾತ್ರ

ಹಾವೇರಿ: ಮನೆ ಬಾಗಿಲಿಗೆ ಉಚಿತ ಔಷಧ, ವೈದ್ಯಕೀಯ ಉಪಕರಣ ಮತ್ತು ಆಹಾರ ಪೂರೈಸುವ ಮೂಲಕ ಹುಬ್ಬಳ್ಳಿಯ ‘ಸೇವಾ ಭಾರತಿ ಟ್ರಸ್ಟ್‌’ ಕೋವಿಡ್‌ ಸೋಂಕಿತರ ಪಾಲಿಗೆ ಸಂಜೀವಿನಿಯಾಗಿದೆ.

ಕೋವಿಡ್‌ ಎರಡನೇ ಅಲೆಯಿಂದ ಜಿಲ್ಲೆಯಲ್ಲಿ ಸಾವು–ನೋವು ಹೆಚ್ಚಾಗಿ, ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಇಂಥ ಸಂಕಷ್ಟದ ಕಾಲದಲ್ಲಿ ನಗರದ ‘ಬಹದ್ದೂರ್‌ ದೇಸಾಯಿ ಮೋಟರ್ಸ್‌’ ಸಹಯೋಗ ಹಾಗೂ ಶಾಸಕ ನೆಹರು ಓಲೇಕಾರ ಅವರ ಸಹಕಾರದೊಂದಿಗೆ ಸೇವಾ ಭಾರತಿಯ ಕಾರ್ಯಕರ್ತರು ಮೇ 24ರಿಂದ ‘ಕೋವಿಡ್‌ ಸೇವೆ’ ಕೈಗೊಂಡು ಸೋಂಕಿತರ ಪಾಲಿಗೆ ಆಪತ್ಬಾಂಧವರಾದರು.

ಸಹಾಯವಾಣಿ ಸ್ಥಾಪನೆ:

ಕೋವಿಡ್‌ ಸೋಂಕಿತರು ಉಚಿತವಾಗಿ ಕರೆ ಮಾಡಿ ತಮ್ಮ ಸಮಸ್ಯೆ ಮತ್ತು ಗೊಂದಲಗಳನ್ನು ಪರಿಹರಿಸಿಕೊಳ್ಳಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ‘ಸಹಾಯವಾಣಿ’ ಸ್ಥಾಪಿಸಲಾಯಿತು. ಜೂನ್‌ 10ರವರೆಗೆ 335 ಫಲಾನುಭವಿಗಳು ಕರೆ ಮಾಡಿ ವಿವಿಧ ಸೇವೆ ಪಡೆದಿದ್ದಾರೆ.

ಮೆಡಿಕಲ್ ಕಿಟ್‌:

ಅಗತ್ಯವಿದ್ದ 25 ಫಲಾನುಭವಿಗಳಿಗೆ ಪಲ್ಸ್‌ ಆಕ್ಸಿಮೀಟರ್‌, ಥರ್ಮಾಮೀಟರ್‌, ಸ್ಯಾನಿಟೈಸರ್‌, ಮಾಸ್ಕ್‌, ಮೌತ್‌ ವಾಷ್‌ ಲಿಕ್ವಿಡ್‌, ಓಆರ್‌ಎಸ್‌ ಪಾಕೆಟ್‌ಗಳನ್ನು ಒಳಗೊಂಡ ‘ವೈದ್ಯಕೀಯ ಉಪಕರಣಗಳ ಕಿಟ್‌’ ನೀಡಲಾಗಿದೆ. 50 ಸೋಂಕಿತರಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಬೆಡ್‌ ಮತ್ತು ಇತರೆ ಸೌಲಭ್ಯ ಒದಗಿಸಲಾಗಿದೆಎಂದು ಆರ್‌ಎಸ್‌ಎಸ್‌ ಜಿಲ್ಲಾ ಸಂಪರ್ಕ ಪ್ರಮುಖ್‌ ಡಾ.ಶಿವಾನಂದ ಕೆಂಭಾವಿ ತಿಳಿಸಿದರು.

ಹಾವೇರಿ ನಗರದಲ್ಲಿ ಹೋಂ ಐಸೋಲೇಷನ್‌ನಲ್ಲಿದ್ದ 1095 ಸೋಂಕಿತರನ್ನು ಸೇವಾ ಭಾರತಿ ಕಾರ್ಯಕರ್ತರು ಕರೆ ಮಾಡಿ, ಅವರ ಯೋಗ ಕ್ಷೇಮ ವಿಚಾರಿಸಿದ್ದಾರೆ. 28 ಸೋಂಕಿತರ ಮನೆಗೆ ಶುಶ್ರೂಷಕರನ್ನು ಕಳುಹಿಸಿ ಆರೈಕೆ ಮಾಡಲಾಗಿದೆ. ವಿವಿಧ ಸೋಂಕಿತರಿಗೆ ‘ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌’ ಸೌಲಭ್ಯ ನೀಡಲಾಗಿದೆ ಎಂದು ಕೆಂಭಾವಿ ತಿಳಿಸಿದರು.

ಟೆಲಿ ಮೆಡಿಸಿನ್‌:

‘ಸೋಂಕಿತರಿಗೆ ಉಚಿತ ವೈದ್ಯಕೀಯ ನೆರವು ನೀಡಬೇಕು ಎಂದು 20 ನುರಿತ ವೈದ್ಯರ ತಂಡವನ್ನು ರಚಿಸಲಾಗಿತ್ತು.189 ಫಲಾನುಭವಿಗಳು ವೈದ್ಯರಿಗೆ ವಿಡಿಯೊ ಕಾಲ್‌ ಮಾಡಿ ‘ಆನ್‌ಲೈನ್‌ ಕನ್ಸಲ್ಟೇಷನ್‌’ ಸೇವೆ ಪಡೆದಿದ್ದಾರೆ. ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ‘ಗಣ್ಯ ವ್ಯಕ್ತಿ’ಗಳೊಂದಿಗೆ ಸಂವಾದ ಕಾರ್ಯಕ್ರಮ, ‘ಸಂಗೀತ ಸಂಜೀವಿನಿ’ ಎಂಬ ಆನ್‌ಲೈನ್‌ ಮನರಂಜನಾ ಕಾರ್ಯಕ್ರಮವನ್ನೂ ನಡೆಸಲಾಗಿದೆ’ ಎಂದು ಬಹದ್ದೂರ್‌ ದೇಸಾಯಿ ಮೋಟರ್ಸ್‌ ಮಾಲೀಕ ಪವನ್‌ ದೇಸಾಯಿ ತಿಳಿಸಿದರು.

3 ಸಾವಿರಕ್ಕೂ ಅಧಿಕ ಮಂದಿಗೆ ಊಟ ಮತ್ತು ಉಪಾಹಾರದ ವ್ಯವಸ್ಥೆ, 641 ಆಹಾರ ಧಾನ್ಯ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ. ಅಷ್ಟೇ ಅಲ್ಲದೆ,13 ಸೋಂಕಿತರ ಶವಸಂಸ್ಕಾರ, 1770 ಅಯುರ್ವೇದ ಔಷಧಗಳು, 26,250 ಹೋಮಿಯೋಪತಿ ಔಷಧಗಳು, 300 ಪೋಸ್ಟ್‌ ಕೋವಿಡ್‌ ಕಿಟ್‌, 88 ಮಂದಿಗೆ ಆಂಬುಲೆನ್ಸ್‌ ವ್ಯವಸ್ಥೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT