ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಸಾಹಿತ್ಯ ಸಮ್ಮೇಳನ: ಹೊರಹೊಮ್ಮಿದ ಆಕ್ರೋಶ; ಸಂಕಟದ ಕಣ್ಣೀರು

ಸರ್ಕಾರದ ವಿರುದ್ಧ ಕಿಡಿ; ಬೆಳಗಾವಿ ಉಪರಾಜಧಾನಿಯಾಗಿ ಘೋಷಿಸಲು ಆಗ್ರಹ
Last Updated 8 ಜನವರಿ 2023, 16:25 IST
ಅಕ್ಷರ ಗಾತ್ರ

ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ವೇದಿಕೆ(ಹಾವೇರಿ): ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ‘ಗಡಿನಾಡು ಮತ್ತು ಹೊರನಾಡು ಕನ್ನಡಿಗರ ತಳಮಳಗಳು’ ಗೋಷ್ಠಿಯಲ್ಲಿ, ಕನ್ನಡ ಶಾಲೆ ಉಳಿಸುವಲ್ಲಿ ಸರ್ಕಾರ ತೋರುತ್ತಿರುವ ನಿರ್ಲಕ್ಷದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.

‘ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಲೇ ಗಡಿನಾಡಲ್ಲಿ ಕನ್ನಡ‌ ಶಾಲೆಗಳ ಕಗ್ಗೊಲೆಯಾಗುತ್ತಿವೆ. ಐಎಎಸ್ ಅಧಿಕಾರಿಗಳು‌ ಇಂಗ್ಲಿಷ್ ಶಾಲೆಗಳ‌ ಏಜೆಂಟ್‌ರಂತೆ, ಕನ್ನಡದ ಬುಡಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಮೂಲ ಸೌಲಭ್ಯವಿಲ್ಲದೆ ಕನ್ನಡ ಶಾಲೆಗಳು ಆಂಗ್ಲ ಮಾಧ್ಯಮ ಶಾಲೆಗಳಾಗುತ್ತಿವೆ’ ಎಂದು ತಜ್ಞರು ಅಂಕಿ–ಸಂಖ್ಯೆಗಳ ಮೂಲಕ ವಿಷಯ ಮಂಡನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ‘ಬೆಂಗಳೂರಿನ ಸಾಹಿತಿಗಳ್ಯಾರೂ ಗಡಿ ವಿಷಯದ ಕುರಿತು ಧ್ವನಿ ಎತ್ತುತ್ತಿಲ್ಲ’ ಎಂದು ಆರೋಪಿಸಿದಾಗ, ಕೇಳುಗರು ‘ಹೌದು... ಹೌದು’ ಎನ್ನುತ್ತ ಸಹಮತ ವ್ಯಕ್ತಪಡಿಸಿದರು.

‘ಗಡಿನಾಡ ಶಾಲೆಗಳ ಅಭಿವೃದ್ಧಿ ಯೋಜನೆಗಳು’ ಕುರಿತು ವಿಷಯ ಮಂಡಿಸಿದ ಶಿಕ್ಷಣ ತಜ್ಞ ರೇವಣಸಿದ್ದಪ್ಪ ಜಲಾದೆ, ಆರಂಭದಿಂದ ಕೊನೆಯವರೆಗೂ ಸರ್ಕಾರದ ನಡೆಯನ್ನು ಟೀಕಿಸಿದರು. ‘ಕನ್ನಡ ಶಾಲೆಗಳನ್ನು ದುರಸ್ತಿ ಮಾಡುವ ಬದಲು, ಆಂಗ್ಲ ಶಾಲೆಗಳನ್ನು ತೆರೆಯಲು ಅನುಮತಿ ನೀಡುತ್ತಿದೆ. ಕನ್ನಡ‌ ಶಾಲೆಯಲ್ಲಿ ಆಂಗ್ಲ ಭಾಷೆ ಕಲಿಸಲು ಮುಂದಾಗಿದೆ. ಕನ್ನಡ ಶಾಲೆಗಳೆಲ್ಲ ಆಂಗ್ಲ ಮಾಧ್ಯಮ ಶಾಲೆಗಳಾಗುತ್ತಿವೆ’ ಎಂದು ಗದ್ಗದಿತರಾದರು. ಆಗ ಅಲ್ಲಿದ್ದ ಕನ್ನಡಿಗರ ಕಣ್ಣಂಚೆಲ್ಲ ತೇವಗೊಂಡಿತ್ತು.

‘ಕನ್ನಡ ಶಾಲೆ ತೆರೆಯಲು ಸರ್ಕಾರ 28 ಬಗೆಯ ಮಾನದಂಡಗಳನ್ನು ಹಾಕಿದ್ದು, ಗಡಿಯಲ್ಲಿ ಕನ್ನಡ ಶಾಲೆ ಅವಸಾನದತ್ತ ಸಾಗಲು ಕಾರಣವಾಗಿದೆ. ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಕೊರತೆಯಿದ್ದರೂ, ಭರ್ತಿ ಮಾಡಿಕೊಳ್ಳುತ್ತಿಲ್ಲ. ಹೀಗಾದರೆ ಕನ್ನಡ ಅಭಿವೃದ್ಧಿ ಸಾಧ್ಯವೇ? ಕನ್ನಡ ಶಾಲೆಗಳನ್ನು ಉಳಿಸುತ್ತೇವೆ ಎನ್ನುವ ಜನಪ್ರತಿನಿಧಿಗಳೇ, ಕನ್ನಡ‌ ಶಾಲೆಗಳ ಮಾರಣ ಹೋಮ ನಡೆಯುತ್ತಿದ್ದಾರೆ. ಕೋಟಿ–ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿ ಸಮ್ಮೇಳನ ಮಾಡುವ ಬದಲು, ಕನ್ನಡ‌ ಶಾಲೆಗಳ ಅಭಿವೃದ್ಧಿಗೆ ಮುಂದಾಗುವ ಪ್ರತಿಜ್ಞೆ ಮಾಡಲಿ’ ಎಂದು ಆಗ್ರಹಿಸಿದರು.

‘ಕನ್ನಡ ಕಟ್ಟುವಲ್ಲಿ ಹೊರನಾಡ ಕನ್ನಡಿಗರ ಪಾತ್ರ’ ಕುರಿತು ಡಾ.ಈಶ್ವರ ಅಲೆವೂರು ಮಾತನಾಡಿದರು. ‘ಹೊರನಾಡಲ್ಲಿ ಕನ್ನಡಿಗರಿಗೆ ಉದ್ಯೋಗ‌ ದೊರಕುವುದಿಲ್ಲ. ಅನ್ನ ನೀಡದ ಭಾಷೆ ಎಲ್ಲಿಯೂ ಉಳಿಯದು. ಹೊರನಾಡಲ್ಲಿ ಕನ್ನಡ ಉಳಿದಿದೆ ಎಂದರೆ, ಭಾಷಾಭಿಮಾನದಿಂದ ಮಾತ್ರ’ ಎಂದರು.

ಸಮ್ಮೇಳನದ ಅಧ್ಯಕ್ಷ ಡಾ.ದೊಡ್ಡ ರಂಗೇಗೌಡ, ಸೊಲ್ಲಾಪುರ ಅಕ್ಕಲಕೋಟೆಯ ಬಸವಲಿಂಗ ಸ್ವಾಮೀಜಿ ಇದ್ದರು. ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

ಶಾಲೆ ಗಡಿಯಲ್ಲಿನ ಸೌಹಾರ್ದ ಕೇಂದ್ರ...

‘ಗಡಿಯಲ್ಲಿ ಭಾಷಾ ಸೌಹಾರ್ದ ಸಾಧ್ಯತೆ’ ವಿಷಯ ಮಂಡಿಸಿದರು. ಭಾಷೆಯ ಜೊತೆ ಗಡಿನಾಡಲ್ಲಿ ಹೇಗೆ ಬದುಕಬೇಕು ಎನ್ನುವುದರ ಕುರಿತು ಮಾತಿನ ಮಧ್ಯ–ಮಧ್ಯ ತಮಿಳು, ತೆಲುಗು, ಮರಾಠಿ ಕವನಗಳನ್ನು ಪ್ರಸ್ತುತ ಪಡಿಸಿದರು. ‘ಗಡಿಯಲ್ಲಿರುವ ಭಾಷೆಗಳನ್ನು ಪ್ರೀತಿಸುತ್ತ ಬದುಕಬೇಕು. ಅಲ್ಲಿರುವ ಶಾಲೆಯೇ ಗಡಿನಾಡಿನ ಸೌಹಾರ್ದ ಕೇಂದ್ರ. ಯಾವ ಭಾಷೆಯೂ ಜಗಳ ಮಾಡುವುದಿಲ್ಲ, ರಾಜಕೀಯ ಮಾಡುವುದಿಲ್ಲ. ರಾಜಕಾರಣ ಭಾಷೆಯ ಜೊತೆ ಕಬಡ್ಡಿಯಾಡುತ್ತಿದೆ’ ಎಂದು ಸಾಹಿತಿ, ಅನುವಾದಕ ಸ. ರಘುನಾಥ್ ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT