ಭಾನುವಾರ, ಮೇ 16, 2021
27 °C
ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ: ವಿಲಿಯಂ ಕ್ರಿಸ್ಟೋಫರ್ ಹೇಳಿಕೆ ‌

‘ಜೀತಪದ್ಧತಿ ಮುಕ್ತ ಕರ್ನಾಟಕ’ಕ್ಕೆ ಸಂಕಲ್ಪ-ವಿಲಿಯಂ ಕ್ರಿಸ್ಟೋಫರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಬಡತನ, ಅನಕ್ಷರತೆ ಹಾಗೂ ನಿರುದ್ಯೋಗ ಜೀತ ಪದ್ಧತಿಗೆ ಕಾರಣವಾಗಿದೆ. ದುರ್ಬಲ ವರ್ಗದವರ ಮೇಲೆ ನಡೆಯುತ್ತಿರುವ ಶೋಷಣೆಯನ್ನು ತಡೆದು ಜೀತಪದ್ಧತಿಯಲ್ಲಿರುವವರನ್ನು ಜೀತಮುಕ್ತಗೊಳಿಸಿ ‘ಜೀತಪದ್ಧತಿ ಮುಕ್ತ ಕರ್ನಾಟಕ’ ಮಾಡಲು ಸಂಕಲ್ಪ ಮಾಡಲಾಗಿದೆ’ ಎಂದು ಬೆಂಗಳೂರು ಇಂಟರ್ ನ್ಯಾಷನಲ್ ಜಸ್ಟೀಸ್‍ನ ಸದಸ್ಯ ಪಿ.ವಿಲಿಯಂ ಕ್ರಿಸ್ಟೋಫರ್ ಹೇಳಿದರು.

ಜಿಲ್ಲಾಡಳಿತ ಹಾಗೂ ಬೆಂಗಳೂರು ಇಂಟರ್ ನ್ಯಾಷನಲ್ ಜಸ್ಟೀಸ್ ಸಹಯೋಗದಲ್ಲಿ ಶುಕ್ರವಾರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜರುಗಿದ ಜೀತ ಪದ್ಧತಿ ನಿರ್ಮೂಲನೆ ಕಾಯ್ದೆ 1976ರ ಕಾನೂನು ರಾಜ್ಯದಾದ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನ ಕುರಿತ ಅಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಜೀತ ಕಾರ್ಮಿಕ ಪದ್ಧತಿ ರಾಜ್ಯದಿಂದ ತೊಲಗಿಸಲು ಹಾಗೂ ಜೀತ ಮುಕ್ತ ಕರ್ನಾಟಕಕ್ಕೆ ಮುಖ್ಯಮಂತ್ರಿಯವರು ಫೆ.9ರಂದು ಅಭಿಯಾನ ಹಾಗೂ ಮಾರ್ಚ್ 6ರಂದು ಕಾರ್ಮಿಕ ಪದ್ಧತಿ ವಿರೋಧಿ ದಿನ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಜೀತದಿಂದ ಮುಕ್ತರಾದವರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸುವುದು ಮುಖ್ಯವಾಗಿದೆ ಎಂದರು. 

ಜೀತ ಪದ್ಧತಿ ಕಾರ್ಮಿಕರನ್ನು ಗುರುತಿಸುವ ಜವಾಬ್ದಾರಿಯನ್ನು ಉಪವಿಭಾಗಾಧಿಕಾರಿಗಳಿಗೆ ಮಾತ್ರ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಜೀತ ಪದ್ಧತಿಯಲ್ಲಿ ತೊಡಗಿರುವ ಕಾರ್ಮಿಕರನ್ನು ಸರ್ವೆ ಮೂಲಕ ಪತ್ತೆ ಹಚ್ಚಬೇಕು. ದುರ್ಬಲ ವರ್ಗದ ಜನತೆ ಆರ್ಥಿಕ ಹಾಗೂ ದೈಹಿಕ ಶೋಷಣೆಗೆ ಒಳಗಾಗುತ್ತಾರೆ. ಜೀತ ಪದ್ಧತಿಯಲ್ಲಿ ಅವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. 

ಜೀತ ಪದ್ಧತಿ ಕಂಡು ಬಂದರೆ ಕೂಡಲೇ ಅವರನ್ನು ಜೀತದಿಂದ ಮುಕ್ತಗೊಳಿಸಿ ತಕ್ಷಣ ₹20 ಸಾವಿರ ಪರಿಹಾರ ಹಣವನ್ನು ಸಂತ್ರಸ್ತರ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ಒಂದು ವೇಳೆ ಅವರ ಬ್ಯಾಂಕ್ ಖಾತೆ ಇಲ್ಲವಾದರೆ ತಕ್ಷಣವೇ ಬ್ಯಾಂಕ್ ಖಾತೆ ತೆರೆಯಲು ಹಾಗೂ ಅವರ ವಾಸಸ್ಥಳಕ್ಕೆ ಹೋಗಲು ಸೂಕ್ತ ವ್ಯವಸ್ಥೆ ಮಾಡಬೇಕು. ಜೀವನೋಪಾಯಕ್ಕೆ ಡಾ.ಅಭಿವೃದ್ಧಿ ನಿಗಮದಿಂದ ಹಾಗೂ ಇತರೆ ಯೋಜನೆಗಳಡಿ ಸಾಲ ಸೌಲಭ್ಯ, ನಿವೇಶನ, ಮನೆ ನಿರ್ಮಾಣ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಸಲಹೆ ನೀಡಿದರು.

ಕಾರ್ಯಾಗಾರದಲ್ಲಿ ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ವಿನೋದಕುಮಾರ ಹೆಗ್ಗಳಗಿ, ಹಾವೇರಿ ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಸವಣೂರ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ವಿವಿಧ ತಾಲ್ಲೂಕು ತಹಶೀಲ್ದಾರರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.