ಗುತ್ತಲ: ಪಟ್ಟಣದ ವೀರಭದ್ರೇಶ್ವರ ಅಗ್ನಿಕುಂಡ ಜಾತ್ರಾ ಮಹೋತ್ಸವ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.
ಪ್ರತಿ ವರ್ಷದಂತೆ ಶ್ರಾವಣ ಮಾಸದ ಕೊನೆಯ ದಿನ ನಡೆಯುವ ಜಾತ್ರೆಯ ಅಂಗವಾಗಿ ಬೆಳಿಗ್ಗೆ ಅನೇಕ ಪುರವಂತರು ಶಿವ, ವಿಷ್ಣು, ವೀರಭದ್ರೇಶ್ವರ, ದಕ್ಷಬ್ರಹ್ಮನ ಸಂಹಾರ ಸೇರಿದಂತೆ ವಿವಿಧ ದೃಷ್ಠಾಂತಗಳ್ನು ಒಡಪುಗಳ ಮೂಲಕ ಹೇಳುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
ಈ ವೇಳೆ ಪಟ್ಟಣದ ಆರಾದ್ಯ ದೈವ ಶ್ರೀಹೇಮಗಿರಿ ಚನ್ನಬಸವೇಶ್ವರರ ಮಠಕ್ಕೆ ಗುಗ್ಗಳದ ಮೆರವಣಿಗೆ ಆಗಮಿಸಿದಾಗ ಪುರವಂತರಾದ ಬಸವರಾಜ ಗಂಗಣ್ಣನವರ ನೂರಾರು ಮೀಟರ್ ಉದ್ದದ ದಾರವನ್ನು ನಾಲಗಿಯಲ್ಲಿ ಎಳೆಯುತ್ತಾ ಮೆರವಣಿಗೆ ಸಮಾಳದ ಶಬ್ದಕ್ಕೆ ತಕ್ಕಂತೆ ನಾಟ್ಯ ಮಾಡುತ್ತಿದ್ದ ದೃಶ್ಯ ಎಲ್ಲರ ಗಮನ ಸೆಳೆಯಿತು.
ಇದೇ ವೇಳೆ ಅನೇಕರು ತಮ್ಮ ಹರಕೆಯನ್ನು ತೀರಿಸಲು ಬಾಯಿ, ಕೈಗಳಿಗೆ ಶಸ್ತ್ರಗಳನ್ನು ಚುಚ್ಚಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಬಸ್ ನಿಲ್ದಾಣದ ಸರ್ಕಲ್ ಬಳಿ ಶಿವಪ್ಪ ಇಚ್ಚಂಗಿ ಎಂಬ ಭಕ್ತರೊಬ್ಬರು ತಾಮ್ರದ ಸೂಜೆ ಮೂಲಕ ಪೋಣಿಸಲಾದ ನೂರಾರು ಮೀಟರ್ ಉದ್ದನೆ ದಾರವನ್ನು ತನ್ನ ನಾಲಗೆಯಲ್ಲಿ ಚುಚ್ಚಿಕೊಂಡ ಹೊರ ತೆಗೆದ ದೃಶ್ಯ ಭಕ್ತರು ಗಮನ ಸೆಳೆಯಿತು.
ಪಟ್ಟಣ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಸಂಜೆ 5 ಗಂಟೆ ಸುಮಾರಿಗೆ ವೀರಭದ್ರೇಶ್ವರ ದೇವಸ್ಥಾನಕ್ಕೆ ಆಗಮಿಸಿತು. ನಂತರ ಸಂಪ್ರದಾಯದ ಪೂಜಾ ವಿಧಿ ವಿಧಾನಗಳ ಮುಗಿದ ನಂತರ ದೊಡ್ಡದಾದ ಅಗ್ನಿಕುಂಡವನ್ನು ಪುರವಂತರು ಹಾಗೂ ಭಕ್ತರು ಪ್ರವೇಶ ಕಾರ್ಯಕ್ರಮ ಸಾಂಗವಾಗಿ ನೇರವರಿತು.
ಈ ವೇಳೆ ಎಲ್ಲಡೆ ಹರ ಹರ ಮಹದೇವ ಜೈ ಘೋಷ ಕೇಳುತ್ತಿತ್ತು. ಅಪಾರ ಸಂಖ್ಯೆಯಲ್ಲಿ ಭಕ್ತರು ವೀರಭದ್ರೇಶ್ವರ ಸ್ವಾಮಿಯ ದರ್ಶನ ಪಡೆದರು.