ಸವಣೂರು: ಡಾ. ವಿ.ಕೃ. ಗೋಕಾಕ ಸಾಂಸ್ಕೃತಿಕ ಭವನ ನಿರ್ವಹಣಾ ಸಮಿತಿ ವತಿಯಿಂದ ಶುಕ್ರವಾರ ಡಾ. ವಿ.ಕೃ.ಗೋಕಾಕ ಅವರ 115ನೇ ಜಯಂತಿ ನಿಮಿತ್ತ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಆದರೆ ಗೋಕಾಕರ ಪ್ರತಿಮೆಗೆ ಬಣ್ಣ ಬಳಿಸಿಲ್ಲ ಹಾಗೂ ದೀಪಾಲಂಕಾರಕ್ಕಾಗಿ ಹಾಕಲಾದ ಕಂಬಗಳನ್ನು ಪ್ರತಿಮೆಯ ಕೈಗೆ ಕಟ್ಟಿದ್ದು ಸರಿಯಲ್ಲ ಎಂದು ಸಾಹಿತ್ಯಾಸಕ್ತರು ಬೇಸರ ವ್ಯಕ್ತ ಪಡಿಸಿದ್ದಾರೆ.
ಪಟ್ಟಣದ ಹೊರವಲಯದ ದುರ್ಗಾದೇವಿ ದೇವಸ್ಥಾನದ ಪಕ್ಕದಲ್ಲಿರುವ ವೃತ್ತದಲ್ಲಿ 2011ರ ಅ. 26 ರಂದು ಡಾ.ವಿ.ಕೃ.ಗೋಕಾಕ ಅವರ ಕಂಚಿನ ಪ್ರತಿಮೆ ಅನಾವರಣಗೊಳಿಸಿ ವೃತ್ತಕ್ಕೆ ನಾಮಕರಣ ಮಾಡಲಾಗಿತ್ತು. ಅಂದು ಅನಾವರಣಗೊಂಡ ಗೋಕಾಕರ ಪ್ರತಿಮೆ ಇಂದು ಅನಾಥವಾಗಿ ಎಲ್ಲರ ನಿರ್ಲಕ್ಷಕ್ಕೊಳಗಾಗಿದೆ.
ಪ್ರತಿ ವರ್ಷ ಗೋಕಾಕರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ನಾಗರಪಂಚಮಿಯ ಪ್ರಯುಕ್ತ ಎಲ್ಲ ಶಾಲೆ ಕಾಲೇಜುಗಳಿಗೆ ರಜೆ ಇದ್ದ ಕಾರಣ ಅ. 17 ರಂದು ಕಾರ್ಯಕ್ರಮ ಮುಂದೂಡಲಾಗಿದೆ. ಶುಕ್ರವಾರ ಮಾಲಾರ್ಪಣೆಗೆ ಕಾರ್ಯಕ್ರಮ ಸೀಮಿತವಾಗಿತ್ತು.
ಉಪವಿಭಾಗಾಧಿಕಾರಿ ಮೊಹಮ್ಮದ ಖಿಜರ್, ತಹಶೀಲ್ದಾರ್ ಭರತರಾಜ ಕೆ.ಎನ್, ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ, ಕಸಾಪ ಜಿಲ್ಲಾ ಕಾರ್ಯದರ್ಶಿ ಪ್ರಭು ಅರಗೋಳ, ತಾಲ್ಲೂಕು ಘಟಕ ಅಧ್ಯಕ್ಷ ಸಿ.ಎನ್. ಪಾಟೀಲ, ಪ್ರಮುಖರಾದ ಮಲ್ಲಾರಪ್ಪ ತಳ್ಳಿಹಳ್ಳಿ, ಕರವೇ ಅಧ್ಯಕ್ಷ ಪರಶುರಾಮ ಈಳಗೇರ, ವಿಶ್ವನಾಥ ಹಾವಣಗಿ, ಮಲ್ಲಿಕಾರ್ಜುನ ಶಾಂತಗಿರಿ ಇದ್ದರು.
ಗೋಕಾಕರ ಪ್ರತಿಮೆಗೆ ಬಣ್ಣ ಬಳಿಸಲು ಹಾಗೂ ಕೈಗೆ ಕಟ್ಟಿರುವ ಕಂಬ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತದೆ.–ಮೊಹಮ್ಮದ ಖಿಜರ್, ಡಾ.ವಿ.ಕೃ ಗೋಕಾಕ ಸಾಂಸ್ಕೃತಿಕ ಭವನದ ಉಸ್ತುವಾರಿ ನಿರ್ವಹಣಾ ಸಮಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.