ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಜಲ ಸಂರಕ್ಷಣೆಗೆ ‘ನರೇಗಾ’ ಆದ್ಯತೆ

ಜಿಲ್ಲೆಯ 127 ಕೆರೆಗಳ ಹೂಳೆತ್ತಲು ಕ್ರಮ: ಕೃಷಿ ಜಮೀನಿನಲ್ಲಿ 2,345 ಬದುಗಳ ನಿರ್ಮಾಣ
Last Updated 5 ಜೂನ್ 2020, 4:36 IST
ಅಕ್ಷರ ಗಾತ್ರ

ಹಾವೇರಿ: ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ನೀರು ಸಂರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದೆ. 127 ಕೆರೆಗಳಲ್ಲಿ ಹೂಳು ತೆಗೆಯುವ ಮತ್ತು ಕೃಷಿ ಜಮೀನುಗಳಲ್ಲಿ 2,345 ಬದುಗಳ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದ್ದು, ಮಳೆ ನೀರು ಇಂಗಿಸಲು ಜಿಲ್ಲಾ ಪಂಚಾಯಿತಿ ವಿಶೇಷ ಕಾಳಜಿ ವಹಿಸಿದೆ.

ಹಾನಗಲ್‌ ತಾಲ್ಲೂಕಿನ ಮಾಸನಕಟ್ಟೆ ಕೆರೆ, ರಟ್ಟೀಹಳ್ಳಿ ತಾಲ್ಲೂಕಿನ ಹುಲ್ಲತ್ತಿ ಕೆರೆ, ಹಿರೇಕೆರೂರು ತಾಲ್ಲೂಕಿನ ಚಿನ್ನಮುಳಗುಂದ ಕೆರೆ, ಸಾತೇನಹಳ್ಳಿ ಕೆರೆ, ಬುರುಡಿಕಟ್ಟೆ ಕೆರೆ ಹಾಗೂ ಹಾವೇರಿ ತಾಲ್ಲೂಕಿನ ಅಗಸಿನಮಟ್ಟಿ ಕೆರೆ, ಸಂಗೂರ ಕೆರೆ, ಕುಳೇನೂರ ಕರೆಗಳು ಸೇರಿದಂತೆ ಒಟ್ಟು 127 ಕೆರೆಗಳಲ್ಲಿ ಹೂಳು ತೆಗೆಯಲಾಗುತ್ತಿದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹವಾಗಿ, ಅಂತರ್ಜಲ ಮಟ್ಟ ಹೆಚ್ಚಲಿದೆ.

ಬದು ನಿರ್ಮಾಣ ಮಾಸಾಚರಣೆ: ‘ರೈತರ ಕೃಷಿ ಜಮೀನುಗಳಲ್ಲಿ 2,345 ಬದುಗಳ ನಿರ್ಮಾಣ ಪ್ರಗತಿಯಲ್ಲಿದ್ದು, ಜೂನ್‌ ಅಂತ್ಯಕ್ಕೆ 4,500 ಬದುಗಳು ನಿರ್ಮಾಣವಾಗಲಿವೆ. ಬದು ನಿರ್ಮಾಣದಿಂದ ಪ್ರತಿಎಕರೆಗೆ 2 ಲಕ್ಷ ಲೀಟರ್‌ ಮಳೆ ನೀರು ಇಂಗಲಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಮೇ 19ರಿಂದ ಜೂನ್‌ 20ರವರೆಗೆ ‘ಬದು ನಿರ್ಮಾಣ ಮಾಸಾಚರಣೆ’ ಕಾರ್ಯಕ್ರಮ ಕೈಗೊಳ್ಳಲಾಗಿದೆ’ ಎಂದು ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜನಾಧಿಕಾರಿ ಮಹಾಂತೇಶ ನರೇಗಲ್‌ ಹೇಳಿದರು.

2020–21ನೇ ಸಾಲಿನಲ್ಲಿ 293 ಕೃಷಿ ಹೊಂಡ, 794 ನೀರುಗಾಲುವೆಗಳ ನಿರ್ಮಾಣ ಪ್ರಗತಿಯಲ್ಲಿದ್ದು, ನೈಸರ್ಗಿಕ ಸಂಪನ್ಮೂಲಗಳ ರಕ್ಷಣಾ ಕಾಮಗಾರಿಗಳಿಗೆ ಶೇ 72ರಷ್ಟು ಅನುದಾನ ವಿನಿಯೋಗಿಸಲು ಆದ್ಯತೆ ನೀಡಲಾಗಿದೆ. ಕೊಳವೆಬಾವಿಗಳಿಗೆ ಇದುವರೆಗೆ 1471 ಇಂಗುಗುಂಡಿ ನಿರ್ಮಿಸಲಾಗಿದೆ. ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ, ಬಹು ಕಮಾನು ತಡೆಗೋಡೆ, ಅರಣ್ಯೀಕರಣಕ್ಕೂ ಒತ್ತು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಜಲಮೂಲಗಳ ಪುನಶ್ಚೇತನ: ಜಿಲ್ಲೆಯಲ್ಲಿ ತಾಲ್ಲೂಕುವಾರು ಸಾಂಪ್ರದಾಯಿಕ ನೀರು ಸಂಗ್ರಹಣಾ ವ್ಯವಸ್ಥೆಯನ್ನು ಸಮೀಕ್ಷೆ ಮಾಡಲಾಗಿದೆ. ಅದರಂತೆ ಜಿಲ್ಲೆಯಲ್ಲಿ 11 ಕಲ್ಯಾಣಿ, 79 ಕುಂಟೆ, 253 ಗೋಕಟ್ಟೆ, 275 ಕಟ್ಟೆ ಸೇರಿದಂತೆ ಒಟ್ಟು 618 ಜಲಮೂಲಗಳನ್ನು ಪುನಶ್ಚೇತನಗೊಳಿಸಲು ನರೇಗಾ ಯೋಜನೆಯಡಿ ಕ್ರಮ ಕೈಗೊಳ್ಳಲಾಗಿದೆ. ಒಂದು ಕೆರೆಯಿಂದ ಮತ್ತೊಂದು ಕೆರೆಗೆ ನೀರು ಹರಿದು ಹೋಗಲು ನೀರುಗಾಲುವೆಗಳನ್ನು ಪುನರುಜ್ಜೀವನಗೊಳಿಸಲು ಆದ್ಯತೆ ನೀಡಲಾಗಿದೆ.

ಜಲಾಮೃತ ಯೋಜನೆ: ‘ಜಲಾಮೃತ ಜಲಾನಯನ ಯೋಜನೆ’ಯಡಿ ಜಿಲ್ಲೆಯಲ್ಲಿ 22,082 ಹೆಕ್ಟೇರ್ ಪ್ರದೇಶದಲ್ಲಿ ನೀರು ಮತ್ತು ಮಣ್ಣು ಸಂರಕ್ಷಣೆ ಚಟುವಟಿಕೆ ಮೂಲಕ ಜಲಸಂಪನ್ಮೂಲ ಕ್ರೋಡೀಕರಣ ಕಾರ್ಯ ಕೈಗೊಳ್ಳಲಾಗಿದೆ. ಹಾವೇರಿ ತಾಲ್ಲೂಕಿನಲ್ಲಿ 4849 ಹೆಕ್ಟೇರ್‌, ರಾಣೆಬೆನ್ನೂರು ತಾಲ್ಲೂಕಿನಲ್ಲಿ 2710 ಹೆ., ಸವಣೂರು ತಾಲ್ಲೂಕಿನಲ್ಲಿ 3020.27 ಹೆ, ಶಿಗ್ಗಾವಿ ತಾಲ್ಲೂಕಿನಲ್ಲಿ 2900 ಹೆ., ಬ್ಯಾಡಗಿ ತಾಲ್ಲೂಕಿನಲ್ಲಿ 2850 ಹೆ., ಹಾನಗಲ್ ತಾಲ್ಲೂಕಿನಲ್ಲಿ 2765 ಹೆ., ಹಿರೇಕೆರೂರು ತಾಲ್ಲೂಕಿನಲ್ಲಿ 2986 ಹೆಕ್ಟೇರ್‌ ಪ್ರದೇಶದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಸಿಇಒ ರಮೇಶ ದೇಸಾಯಿ ಮಾಹಿತಿ ನೀಡಿದರು.

ದಿಬ್ಬದಿಂದ ಕಂದಕ: ಜಲಾಮೃತ ಯೋಜನೆಯಡಿ 22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದಿಬ್ಬದಿಂದ ಕಂದಕ ಮಾದರಿಯಲ್ಲಿಜಲಾನಯನ ಅಭಿವೃದ್ಧಿ ಪಡಿಸಲು ₹104 ಕೋಟಿ ವೆಚ್ಚದ ಕ್ರಿಯಾಯೋಜನೆ ತಯಾರಿಸಲಾಗಿದೆ.ಈ ಜಲಾಮೃತ ಯೋಜನೆಯಡಿ 16 ಸಾವಿರ ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಪಾರಂಪರಿಕ ನೀರಿನ ಮೂಲಗಳ ಪುನಶ್ಚೇತನ ಮತ್ತು ಪುನರುಜ್ಜೀವನಗೊಳಿಸಲು 618 ಕಾಮಗಾರಿಗಳನ್ನು ಗುರುತಿಸಲಾಗಿದೆ ಎಂದು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT