ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಣೂರು: ನೀರಿಗಾಗಿ ಗ್ರಾ.ಪಂ. ಕಚೇರಿಗೆ ಬೀಗ

ಹುರಳಿಕುಪ್ಪಿ ಗ್ರಾಮದ 1ನೇ ವಾರ್ಡ್ ನಿವಾಸಿಗಳಿಂದ ಪ್ರತಿಭಟನೆ
Published 26 ಮಾರ್ಚ್ 2024, 13:45 IST
Last Updated 26 ಮಾರ್ಚ್ 2024, 13:45 IST
ಅಕ್ಷರ ಗಾತ್ರ

ಸವಣೂರು: ಒಂದು ವರ್ಷದಿಂದ ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿದ್ದರೂ ಗ್ರಾಮ ಪಂಚಾಯ್ತಿಯು ಈ ಸಮಸ್ಯೆ ಪರಿಹರಿಸುತ್ತಿಲ್ಲ ಎಂದು ತಾಲ್ಲೂಕಿನ ಹುರಳಿಕುಪ್ಪಿ ಗ್ರಾಮದ 1ನೇ ವಾರ್ಡ್ ನಿವಾಸಿಗಳು ಗ್ರಾಮ ಪಂಚಾಯ್ತಿ ಕಚೇರಿಗೆ ಮಂಗಳವಾರ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

‘ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರೂ ತಾಲ್ಲೂಕು ಆಡಳಿತದ ಅಧಿಕಾರಿಗಳಾಗಲಿ, ಸ್ಥಳೀಯ ಗ್ರಾಮ ಪಂಚಾಯ್ತಿ ಅಧಿಕಾರಿಗಳಾಗಲಿ ಸೌಜನ್ಯಕ್ಕೂ ಸ್ಪಂದಿಸಿಲ್ಲ. ಪಕ್ಕದ ವಾರ್ಡ್‌ಗಳಿಗೆ  ಹೋಗಿ ಕುಡಿಯುವ ನೀರು ತರಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೂಲಿ ಕೆಲಸ ಅವಲಂಬಿಸಿರುವ ಜನರು ಕೆಲಸಕ್ಕೂ ಹೋಗದೇ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸಲು ಜನಪ್ರತಿನಿಧಿಗಳಿಗೆ ಹಾಗೂ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶಿವಲೀಲಾ ಭಜಂತ್ರಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಕುಡಿಯುವ ನೀರು ಕೊಡಿ ಎಂದು ಪ್ರತಿಭಟನೆ ಮಾಡಿದರೆ, ಕಂಬಿ ಎಣಿಸಲು ಸಿದ್ಧರಾಗಿ ಎಂದು ಧಮ್ಕಿ ಹಾಕುತ್ತಾರೆ. ಅಧಿಕಾರಿಗಳೇ ನಮ್ಮೊಂದಿಗೆ ಹೀಗೆ ವರ್ತಿಸಿದರೆ ಸಮಸ್ಯೆ ಯಾರ ಬಳಿ ಹೇಳೋಣ ಎಂದರು.

ಪ್ರತಿಭಟನಾ ಸ್ಥಳಕ್ಕೆ ತಾಲ್ಲೂಕು ಪಂಚಾಯ್ತಿ ಇಒ ಎಫ್.ಜಿ.ಚಿನ್ನಣ್ಣನವರ ಆಗಮಿಸಿ, ಒಂದನೇ ವಾರ್ಡ್‌ಗೆ ಪೈಪ್‌ಲೈನ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಒಂದೆರಡು ದಿನಗಳಲ್ಲಿ ಸಮರ್ಪಕವಾಗಿ ನೀರು ಪೂರೈಕೆ ಮಾಡಲಾಗುವುದು ಎಂದು ಹೇಳಿದರು.

‘ನೀರು ಪೂರೈಸುವವರೆಗೂ ಪ್ರತಿಭಟನೆ ಕೈಬಿಡಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದಾಗ, ‘ಕಾಮಗಾರಿ ಪೂರ್ಣಗೊಳ್ಳುವವರೆಗೂ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು’ ಎಂದು ಅಧಿಕಾರಿ ಎಫ್.ಜಿ.ಚಿನ್ನಣ್ಣನವರ ಅವರು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ರತ್ನಮ್ಮ ಹೆಗ್ಗಣ್ಣನವರ, ಶಾರದಾ ಅಜ್ಜಣ್ಣನವರ, ಮಂಜವ್ವ ಯರೇಸಿಮಿ, ಅನ್ನಪೂರ್ಣ ಮೆಣಸಕ್ಕನವರ, ಮಹಾಂತೇಶ ಮೆಣಸಕ್ಕನವರ, ಚಂದ್ರು ಪಿಳ್ಳಿ, ಸಹದೇವಪ್ಪ ಕರ್ಜಗಿ, ಪ್ರವೀಣ ಕೊಳ್ಳವರ, ಮಹಾಂತೇಶ ಪೂಜಾರ, ನಾಗಪ್ಪ ಯರೇಸಿಮಿ, ಪುಟ್ಟೇಶ ಕಳ್ಳಿಮನಿ, ಪಾಂಡಪ್ಪ ತಿಪ್ಪಕ್ಕನವರ, ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT