ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಟ್ಟೀಹಳ್ಳಿ | ನೀರಿನ ಕೊರತೆ: ಗ್ರಾಮಸ್ಥರ ಪರದಾಟ

Published 1 ಏಪ್ರಿಲ್ 2024, 6:37 IST
Last Updated 1 ಏಪ್ರಿಲ್ 2024, 6:37 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ಈ ವರ್ಷ ಹಿಂಗಾರು ಮಳೆ ಸಮರ್ಪಕವಾಗಿ ಆಗದೆ ಬರಗಾಲದ ಛಾಯೆ ಎಲ್ಲೆಡೆ ಆವರಿಸಿದೆ. ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಾಲ್ಲೂಕಿನಾದ್ಯಂತ ತಲೆದೋರಿದೆ.

ಈ ಭಾಗದಲ್ಲಿ ಮುಂಗಾರಿನಲ್ಲಿ ಮಳೆ ಬಾರದಿದ್ದರೂ ಮಲೆನಾಡಿನಲ್ಲಿ ಮಳೆಯಾಗಿ ಶಿವಮೊಗ್ಗದ ಗಾಜನೂರು ಡ್ಯಾಂನಿಂದ ತಾಲ್ಲೂಕಿನ ತುಂಗಾ ಮೇಲ್ದಂಡೆ ಕಾಲುವೆಗೆ ನೀರು ಬಿಟ್ಟಿದ್ದರಿಂದ ತಾಲ್ಲೂಕಿನ ಜನತೆಗೆ ಡಿಸೆಂಬರ್ ಅಂತ್ಯದವರೆಗೆ ನೀರಿನ ಸಮಸ್ಯೆ ಎದುರಾಗಲಿಲ್ಲ. ಈ ಮುಖ್ಯ ಕಾಲುವೆಯಿಂದಾಗಿ ತಾಲ್ಲೂಕಿನ ಬಹುತೇಕ ಕೆರೆಗಳು, ಕೊಳವೆಬಾವಿಗಳ ಅಂತರ್ಜಲಮಟ್ಟ ಉತ್ತಮವಾಗಿತ್ತು.

ಇದೀಗ ಕಳೆದ ಎರಡು ತಿಂಗಳುಗಳಿಂದ ತುಂಗಾ ಮೇಲ್ದಂಡೆ ಮುಖ್ಯಕಾಲುವೆಯಲ್ಲಿ ಹಾಗೂ ಕುಮದ್ವತಿ ನದಿ ಬತ್ತಿರುವುದರಿಂದ ಕೆರೆಗಳು ಬತ್ತಿವೆ ಹಾಗೂ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಬಹಳಷ್ಟು ಕುಸಿತವಾಗಿದೆ. ಬರುವ ಏಪ್ರಿಲ್‌, ಮೇ ತಿಂಗಳುಗಳಲ್ಲಿ ಇನ್ನಷ್ಟು ನೀರಿನ ಕೊರತೆ ಉಂಟಾಗುವ ಆತಂಕ ಎದುರಾಗಿದೆ. 

ತಾಲ್ಲೂಕಿನ ಹುಲ್ಲತ್ತಿ, ಮಾಸೂರು, ಮಕರಿ, ಕುಂಚೂರು, ಮೇದೂರು ಗ್ರಾಮಗಳಲ್ಲಿ ತೀವ್ರವಾಗಿ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಬಹುತೇಕ ಕಡೆ ಜಲಜೀವನ ಮೀಷನ್ ಯೋಜನೆಯಡಿ ಕಾಮಗಾರಿ ಇನ್ನೂ ಪ್ರಗತಿ ಹಂತದಲ್ಲಿದೆ. ಕೆಲವೊಂದು ಗ್ರಾಮಗಳಲ್ಲಿ ನಳಗಳಿಗೆ ನೀರು ಪೂರೈಕೆಯಾಗುತ್ತಿಲ್ಲ.

ಶುದ್ಧ ನೀರಿನ ಘಟಕ ಬಂದ್‌: ನೀರಿನ ಕೊರತೆಯಿಂದಾಗಿ ಅಲ್ಲಲ್ಲಿ ಗ್ರಾಮ ಪಂಚಾಯ್ತಿಯ ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್ ಆಗಿವೆ. ಗ್ರಾಮ ಪಂಚಾಯ್ತಿ ಕೊಳವೆ ಭಾವಿಗಳಲ್ಲಿ ಅಂತರ್ಜಲಮಟ್ಟ ತೀವ್ರ ಕುಸಿತ ಕಂಡಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲು ಪಂಚಾಯ್ತಿ ವತಿಯಿಂದ ಸಾರ್ವಜನಿಕ ನಳಗಳಿಗೆ ದಿನಕ್ಕೆ ಒಂದು ಗಂಟೆಗಳ ಕಾಲ ನೀರು ಪೂರೈಸಲಾಗುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಪೂರೈಕೆ ಸಾಕಾಗುತ್ತಿಲ್ಲ. ಕೆರೆಕಟ್ಟೆಗಳು ಬತ್ತಿದ ಕಾರಣ ಬಳಕೆ ನೀರಿಗೂ ತೊಂದರೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. 

‘ರಟ್ಟೀಹಳ್ಳಿ ತಾಲ್ಲೂಕಿನ 19 ಗ್ರಾಮ ಪಂಚಾಯ್ತಿಗಳ ಪೈಕಿ ಇಂಗಳಗೊಂದಿ, ಹುಲ್ಲತ್ತಿ, ಕುಂಚೂರು, ಮಕರಿ, ಚಿಕ್ಕಯಡಚಿ, ಮಾಸೂರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರನ್ನು ಸಾರ್ವಜನಿಕರಿಗೆ ಪೂರೈಸಲಾಗುತ್ತಿದೆ. ತಾಲ್ಲೂಕಿನಲ್ಲಿ 37 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಇವುಗಳಲ್ಲಿ ಮಾವಿನತೋಪ, ಯಲಿವಾಳ, ಸಣ್ಣಗುಬ್ಬಿ ಗ್ರಾಮಗಳ ಘಟಕ ದುರಸ್ತಿಯಲ್ಲಿವೆ’ ಎನ್ನುತ್ತಾರೆ ರಟ್ಟೀಹಳ್ಳಿ ತಾ.ಪಂ. ಸಹಾಯಕ ನಿರ್ದೇಶಕ (ಪಂಚಾಯತ್‌ ರಾಜ್‌) ದೇವರಾಜ ಸಣ್ಣಕಾರಗೇರ. 

‘ನಳ ಸಂಪರ್ಕವಿದ್ದರೂ ನೀರಿಲ್ಲ’

‘ತಾಲ್ಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ಮನೆಗಳಿಗೆ ನಳ ಸಂಪರ್ಕವಿದ್ದರೂ ಕಳೆದ ಒಂದು ತಿಂಗಳುಗಳಿಂದ ನೀರಿನ ಕೊರತೆಯಿಂದಾಗಿ ಕುಡಿಯುವ ನೀರು ಬಿಡುತ್ತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಪಂಚಾಯ್ತಿಯಿಂದ ನಳದ ವ್ಯವಸ್ಥೆ ಮಾಡಿದ್ದರೂ ಹೊಲ-ಮನೆ ಕೆಲಸಬಿಟ್ಟು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ನೀರು ಶೇಖರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎನ್ನುತ್ತಾರೆ ಹುಲ್ಲತ್ತಿ ಗ್ರಾಮದ ನಿವಾಸಿ ಗುರುರಾಜ ಕಡೇಮನಿ.

‘ಹುಲ್ಲತ್ತಿ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿಯ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಗ್ರಾಮದ ಎಲ್ಲ ಮನೆಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಅಲ್ಲಲ್ಲಿ ಖಾಸಗಿ ರೈತರಿಂದ ಕೊಳವೆಬಾವಿ ಬಾಡಿಗೆ ಪಡೆದು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಾರ್ವಜನಿಕ ಸ್ಥಳಗಳಲ್ಲಿ ನೀರು ಪೂರೈಸಲಾಗುತ್ತಿದೆ’ ಎನ್ನುತ್ತಾರೆ ಹುಲ್ಲತ್ತಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ ಸುಂಕಾಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT