ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ವರ್ಷಗಳಲ್ಲಿ ಮೋದಿ ಸಾಧನೆ ಏನು? ಸಚಿವ ಸಂತೋಷ್‌ ಲಾಡ್‌

Published 5 ಮೇ 2024, 14:27 IST
Last Updated 5 ಮೇ 2024, 14:27 IST
ಅಕ್ಷರ ಗಾತ್ರ

ಹಾವೇರಿ: ‘ಪ್ರಧಾನಿ ನರೇಂದ್ರ ಮೋದಿ ಮುಸ್ಲಿಮರಿಗೆ ಮೀಸಲಾತಿ ನೀಡಲು ಬಿಡುವುದಿಲ್ಲ ಅನ್ನುತ್ತಾರೆ. ಭಾಷಣದಲ್ಲಿ ದ್ವೇಷ ಕಾರುತ್ತಾರೆ. ಇದೇನಾ ಇವರ ‘ಸಬ್‌ ಕಾ ಸಾತ್‌, ಸಬ್‌ ಕಾ ವಿಕಾಸ್‌?. ವಿಶ್ವಗುರು ಎನಿಸಿಕೊಂಡ ಮೋದಿ ಅವರು ಜಾತಿ, ಧರ್ಮಗಳ ವಿಚಾರ ಬಿಟ್ಟು, 10 ವರ್ಷಗಳ ತಮ್ಮ ಸರ್ಕಾರದ ಸಾಧನೆಯ ವಿವರವನ್ನು ಜನರ ಮುಂದೆ ಇಡಲಿ’ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಹೇಳಿದರು. 

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಮಮಂದಿರ ನಿರ್ಮಾಣ, ಮುಸ್ಲಿಮರ ವಿರುದ್ಧ ಮಾತನಾಡುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ. ಈ ಚುನಾವಣೆ ನ್ಯಾಯ- ಅನ್ಯಾಯ, ಸುಳ್ಳು- ಸತ್ಯಗಳ ನಡುವಿನ ಸ್ಪರ್ಧೆಯಾಗಿದೆ. ಅಂಬೇಡ್ಕರ್ ರಚಿಸಿದ ಸಂವಿಧಾನ ಉಳಿಸುವ ಚುನಾವಣೆಯಾಗಿದೆ’ ಎಂದರು. 

‘ನಾವು ಗ್ಯಾರಂಟಿ ಯೋಜನೆಗಳ ಬಗ್ಗೆ ಹಾಗೂ ನರೇಂದ್ರ ಮೋದಿ ಸರ್ಕಾರದ ವೈಫಲ್ಯಗಳ ಬಗ್ಗೆ ಜನರಿಗೆ ತಿಳಿಸಿ ಮತ ಕೇಳಿದ್ದೇವೆ. ಮೋದಿ ಅವರು ನೀಡಿದ ಭರವಸೆಗಳು 10 ವರ್ಷ ಕಳೆದರೂ ಈಡೇರಿಲ್ಲ. ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ, ಚೀನಾ ಸೇನೆ ಭಾರತದ ಗಡಿಯೊಳಗೆ ಬಂದಿದೆ ಈ ಬಗ್ಗೆ ಚರ್ಚೆಯಾಗಬೇಕಲ್ಲವೇ? 2019ರಲ್ಲಿ ಪುಲ್ವಾಮಾದಲ್ಲಿ 300 ಕೆ.ಜಿ ಆರ್‌.ಡಿ.ಎಕ್ಸ್ ದೇಶದೊಳಗಡೆ ಹೇಗೆ ಬಂತು. ಇದು ಭದ್ರತಾ ವೈಫಲ್ಯವಲ್ಲವೇ? ಸುಳ್ಳು ಹೇಳುವುದರಲ್ಲಿ ಬಿಜೆಪಿಗರು ನಿಸ್ಸೀಮರು’ ಎಂದು ಜರಿದರು. 

ಅದಾನಿ, ಅಂಬಾನಿಗೆ ಅಷ್ಟು ಆಸ್ತಿ ಹೇಗೆ ಬಂತು? 6 ವರ್ಷಗಳಲ್ಲಿ 11 ಲಕ್ಷ ಕೋಟಿ ಹೇಗೆ ಗಳಿಸಿದರು? ದೇಶದ ಆಸ್ತಿ ಬಂಡವಾಳಶಾಹಿಗಳ ಪಾಲಾಗುವುದು ಸರಿಯೇ? ಬಂಡವಾಳಶಾಹಿಗಳ ಆಸ್ತಿಯನ್ನು ಬಡವರಿಗೆ ಹಂಚಿಕೆ ಮಾಡುತ್ತೇವೆ ಎಂದು ನಾವು ಹೇಳಿದರೆ ತಪ್ಪೇನು? ಎಂದು ಹೇಳಿದರು. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಮುಸ್ಲಿಮರ ತುಷ್ಟೀಕರಣ ಎಂದು ಟೀಕಿಸುವ ಮೋದಿ ಮತ್ತು ಜೋಶಿಯವರಿಗೆ ಕನ್ನಡಕದ ಬದಲಾಗಿ, ದುರ್ಬೀನು ಕೊಡಿ. ಆ ರೀತಿ ಇದ್ದರೆ ನಾನು ರಾಜಕಾರಣ ಬಿಡುತ್ತೇನೆ. ಅವರು ಸಿದ್ಧರಿದ್ದಾರಾ? ಎಂದು ಸವಾಲು ಹಾಕಿದರು. 

ಬಿಜೆಪಿಯವರು ನಾವೆಲ್ಲರೂ ಹಿಂದೂ ಎಂದು ಹೇಳುತ್ತಾರೆ. ಹಿಂದೂ ಧರ್ಮದಲ್ಲಿರುವ ಸಣ್ಣ ಸಣ್ಣ ಸಮುದಾಯಗಳ ನಡುವೆ ವಿವಾಹ ಸಂಬಂಧ ಬೆಳೆಸಲಿ. ಗುಡಿ, ಮಂದಿರಗಳಿಗೆ ದಲಿತರು, ಶೋಷಿತರಿಗೆ ಪ್ರವೇಶ ನೀಡಲಿ. ಇದನ್ನೇಕೆ ಮಾಡುವುದಿಲ್ಲ ಎಂದು ಪ್ರಶ್ನಿಸಿದರು. ನಮ್ಮ ಸರ್ಕಾರದ ಗ್ಯಾರಂಟಿಯ ಬಲದಿಂದ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಗಳಾದ ಆನಂದಸ್ವಾಮಿ ಗಡ್ಡದೇವರಮಠ (ಹಾವೇರಿ) ಮತ್ತು ವಿನೋದ ಅಸೂಟಿ (ಧಾರವಾಡ) ಗೆಲುವು ಖಚಿತ ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ರುದ್ರಪ್ಪ ಲಮಾಣಿ, ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ವಿನೋದ ಅಸೂಟಿ, ಎಂ.ಎಂ.ಹಿರೇಮಠ, ರಾಜೇಶ್ವರಿ ಪಾಟೀಲ, ಪ್ರೇಮಾ ಪಾಟೀಲ, ಇತರರಿದ್ದರು.

ಮೋದಿ- ರಾಹುಲ್ ಸಂವಾದ ಮಾಡಲಿ

‘ಪ್ರಧಾನಿ ಅಭ್ಯರ್ಥಿ ಯಾರೆಂದು ನಾವು ಘೋಷಿಸಿಲ್ಲ ನಿಜ. ನಮ್ಮ ಹಿಂದಿನ ಪ್ರಧಾನಿ ಮನಮೋಹನ ಸಿಂಗ್ ಅವರು ಹತ್ತು ವರ್ಷಗಳಲ್ಲಿ 111 ಬಾರಿ ಮಾಧ್ಯಮಗೋಷ್ಠಿ ಮಾಡಿದ್ದರು. ಆದರೆ, ಪ್ರಧಾನಿ ಮೋದಿ ಒಂದೇ ಒಂದು ಬಾರಿ ಸುದ್ದಿಗೋಷ್ಠಿ ಮಾಡಲಿಲ್ಲ. ನಟ ಅಕ್ಷಯ ಕುಮಾರ ಜತೆ ಸಂದರ್ಶನ ಮಾಡುತ್ತಾರೆ. ಅವರು ನೀವು ಮಾವು ಹೇಗೆ ತಿನ್ನುತ್ತೀರಿ? ಎಂದು ಪ್ರಶ್ನೆ ಕೇಳುತ್ತಾರೆ. ಅಮೆರಿಕ ಮಾದರಿಯಲ್ಲಿ ಮೋದಿ- ರಾಹುಲ್ ಇಬ್ಬರನ್ನೂ ಒಟ್ಟಿಗೆ ಕುಳಿತು ಸಂವಾದ ಮಾಡಲು ಒಪ್ಪಲಿ ಎಂದು ಲಾಡ್ ಸವಾಲು ಎಸೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT