ಗುಲ್ಬರ್ಗ: ನಗರದ ಸರ್ಕಾರಿ ಉಪಕರಣಾಗಾರ ಮತ್ತು ತಾಂತ್ರಿಕ ತರಬೇತಿ ಸಂಸ್ಥೆ (ಜಿಟಿಟಿಸಿ)ಯಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿ/ವಿದ್ಯಾರ್ಥಿನಿಯರು ದೇಶ–ವಿದೇಶಗಳ ಕಂಪೆನಿಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿರುವ ಎಸ್ಸೆಸ್ಸೆಲ್ಸಿ ಪಾಸಾಗಿರುವ ವಿದ್ಯಾರ್ಥಿಗಳು ಜಿಟಿಟಿಸಿಯಲ್ಲಿ ಪ್ರವೇಶ ಪಡೆಯುವುದು ಉತ್ತಮ ಆಯ್ಕೆ.
ವೃತ್ತಿ ತರಬೇತಿ ಪಡೆಯುವವರಿಗಾಗಿ ರಾಜ್ಯ ಸರ್ಕಾರ 1994ರಲ್ಲಿ ಜಿಟಿಟಿಸಿ ಆರಂಭಿಸಿದೆ. ಇಲ್ಲಿ ತರಬೇತಿ ಪಡೆದವರು ನಿರುದ್ಯೋಗಿ ಯಾಗಿ ಉಳಿದಿಲ್ಲ! ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷದ ಡಿಪ್ಲೊಮೊ ಕೋರ್ಸ್ನಿಂದ ಹಿಡಿದು ಅಲ್ಪಾವಧಿ ಸರ್ಟಿಫಿಕೇಟ್ ಕೋರ್ಸ್ ಕಲಿಕೆ ಇಲ್ಲಿದೆ. 2014–15ನೇ ಶೈಕ್ಷಣಿಕ ವರ್ಷ ಪ್ರವೇಶಕ್ಕಾಗಿ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 15, 2014 ಕೊನೆಯ ದಿನ.
‘ಟೂಲ್ ಆಂಡ್ ಡೈ ಮೇಕಿಂಗ್’ ಮತ್ತು ‘ಪ್ರಿಶಿಷನ್ ಮ್ಯಾನುಪ್ಯಾಕ್ಚರಿಂಗ್’ ಈ ವಿಷಯಗಳಲ್ಲಿ ಡಿಪ್ಲೊಮೊ ಕೋರ್ಸ್‌ಗಳಿವೆ. ಮೂರು ವರ್ಷ ವಿಷಯಾಧಾರಿತ ತರಬೇತಿ ಹಾಗೂ ಒಂದು ವರ್ಷ ಕೈಗಾರಿಕೆಗಳಲ್ಲಿ ಉದ್ಯಮ ತರಬೇತಿ ಇರುತ್ತದೆ.
ಸೆಮಿಸ್ಟರ್ ಪದ್ಧತಿ: ಇದೇ ವರ್ಷದಿಂದ ಸೆಮಿಸ್ಟರ್ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದ್ದು, ಪ್ರತಿ ಸೆಮಿಸ್ಟರ್‌ಗೆ ₨10 ಸಾವಿರ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ನಾಲ್ಕನೇ ವರ್ಷದಲ್ಲಿ ಮಾತ್ರ ಒಂದು ವರ್ಷಕ್ಕೆ ₨10 ಸಾವಿರ ಶುಲ್ಕ ಭರಿಸಬೇಕಾಗುತ್ತದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯಿಂದ ಶುಲ್ಕವನ್ನು ಶಿಷ್ಯವೇತನದ ರೂಪದಲ್ಲಿ ಮರಳಿ ಪಡೆಯಲು ಅವಕಾಶವಿದೆ. ಟೂಲ್ ಆಂಡ್ ಡೈ ಮೇಕಿಂಗ್ ವಿಭಾಗದಲ್ಲಿ 50 ವಿದ್ಯಾರ್ಥಿಗಳನ್ನು ಹಾಗೂ ಪ್ರಿಶಿಷನ್ ಮ್ಯಾನುಪ್ಯಾಕ್ಚರಿಂಗ್ ವಿಭಾಗದಲ್ಲಿ 30 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಇದಲ್ಲದೆ, ಒಂದು ವರ್ಷ ಅವಧಿಯ ‘ಕಾಂಪೋಸಿಟ್ ಮೆಷಿನಿಸ್ಟ್‌್’ ಮತ್ತು ಎರಡು ವರ್ಷ ಅವಧಿಯ ‘ಟೂಲ್ ಆಂಡ್ ಡೈ ಟೆಕ್ನಿಷಿಯನ್’ ಅಲ್ಪಾವಧಿ ಕೋರ್ಸ್ ಸಹ ಜಿಟಿಟಿಸಿಯಲ್ಲಿ ಅಳವಡಿಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಒಂದು ವರ್ಷದ ಅಧ್ಯಯನಕ್ಕೆ ₨18 ಸಾವಿರ ಶುಲ್ಕ ಭರಿಸಬೇಕಾಗುತ್ತದೆ. ಕಾಂಪೋಸಿಟ್ ಮಷಿನಿಸ್ಟ್‌್‌ನಲ್ಲಿ 30 ಸೀಟುಗಳು ಹಾಗೂ ‘ಟೂಲ್ ಆಂಡ್ ಡೈ ಟೆಕ್ನಿಷಿಯನ್‌ನಲ್ಲಿ 30 ಸೀಟುಗಳಿಗೆ ಪ್ರವೇಶ ನೀಡಲಾಗುತ್ತದೆ. ಅಲ್ಪಾವಧಿ ಕೋರ್ಸ್‌ನಲ್ಲಿ ಕೂಡಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶುಲ್ಕವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಶಿಷ್ಯವೇತನ ರೂಪದಲ್ಲಿ ಮರಳಿ ಪಡೆಯಬಹುದಾಗಿದೆ. ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ರಾಜ್ಯ ಸರ್ಕಾರದ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಪ್ರಯೋಜಕತ್ವದ ಕೆಲವು ಕೋರ್ಸ್‌ಗಳನ್ನು ಜಿಟಿಟಿಸಿಯಲ್ಲಿ ನಡೆಸಲಾಗುತ್ತಿದೆ. ಟೂಲ್ರೂಮ್ ಮೆಷಿನಿಸ್ಟ್್ (ಒಂದು ವರ್ಷ) ಸಿಎನ್‌ಸಿ ಟೆಕ್ನಾಲಾಜಿಸ್ಟ್ (6 ತಿಂಗಳಿನ) ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ವಿಭಾಗದ ಕಲಿಕೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₨1,500 ಶಿಷ್ಯವೇತನವನ್ನು ಸರ್ಕಾರ ಒದಗಿಸುತ್ತದೆ. ಸರ್ಕಾರಿ ಪ್ರಾಯೋಜಕತ್ವದ ಕೋರ್ಸ್‌ಗೆ ಅರ್ಜಿಗಳು ಸಲ್ಲಿಕೆಯಾಗುವ ಸಂಖ್ಯೆಯನ್ನಾಧರಿಸಿ ಮಂಜೂರಿ ಪಡೆಯಲಾಗುತ್ತದೆ. ಎಲ್ಲ ಕೋರ್ಸ್‌ಗಳಲ್ಲಿ ಒಟ್ಟು ಸೀಟು ಹಂಚಿಕೆಯಲ್ಲಿ ವಿದ್ಯಾರ್ಥಿನಿಯರಿಗೆ ಶೇ 30ರಷ್ಟು ಸೀಟುಗಳು ಮೀಸಲಾಗಿವೆ.
ಗುಲ್ಬರ್ಗ ಸೇರಿದಂತೆ ರಾಜ್ಯದ 21 ಕಡೆಗಳಲ್ಲಿ ಜಿಟಿಟಿಸಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಪ್ರವೇಶ ಬಯಸುವ ಎಸ್ಸೆಸ್ಸೆಲ್ಸಿ ಅರ್ಹತೆ ಹೊಂದಿರುವ ವಿದ್ಯಾರ್ಥಿಗಳು ಆಯಾ ಕಾಲೇಜುಗಳ ಪ್ರಾಂಶುಪಾಲರನ್ನು ಸಂಪರ್ಕಿಸಿ ಅರ್ಜಿ ನಮೂನೆ ಪಡೆದು ಸಲ್ಲಿಸ ಬೇಕು. ಜಿಟಿಟಿಸಿಯಲ್ಲಿ ನಾಲ್ಕು ವರ್ಷದ ಡಿಪ್ಲೊಮೊ ಓದಿದ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಮೂರನೇ ಸೆಮಿಸ್ಟರ್‌ಗೆ ಲ್ಯಾಟರಲ್ ಪ್ರವೇಶ ಹೊಂದಲು ಅವಕಾಶವಿದೆ.
‘ಜಿಟಿಟಿಸಿಯಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ತರಬೇತಿ ನೀಡಲು 12 ಶಿಕ್ಷಕರು ಹಾಗೂ 3 ಶಿಕ್ಷಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ವರ್ಷ ಕ್ಯಾಂಪಸ್ ಸಂದರ್ಶನಗಳನ್ನು ಏರ್ಪಡಿಸುತ್ತೇವೆ. ಸದ್ಯ 19ನೇ ಬ್ಯಾಚ್ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿಯವರೆಗೂ ಸುಮಾರು 500 ವಿದ್ಯಾರ್ಥಿಗಳು ತರಬೇತಿ ಪಡೆದು ಹೋಗಿದ್ದಾರೆ. ನೂರಕ್ಕೆ ನೂರರಷ್ಟು ವಿದ್ಯಾರ್ಥಿಗಳು ಉದ್ಯೋಗ ಪಡೆದಿದ್ದಾರೆ.
ಶೇ 5ರಷ್ಟು ತರಬೇತಿ ಪಡೆದವರು ಸ್ವಂತ ಕೈಗಾರಿಕೆ ಸ್ಥಾಪಿಸಿ ಉದ್ಯೋಗದಾತರು ಆಗಿದ್ದಾರೆ’ ಎಂದು ಗುಲ್ಬರ್ಗದ ಜಿಟಿಟಿಸಿ ಪ್ರಾಂಶುಪಾಲ ಜೈರಾಜ್ ಟಿ. ನರಗುಂದ ಹೆಮ್ಮೆಯಿಂದ ಹೇಳಿದರು.
ವಿಳಾಸ: ಸರ್ಕಾರಿ ಉಪಕರಣಾಗಾರ ಮತ್ತು ತಾಂತ್ರಿಕ ತರಬೇತಿ ಸಂಸ್ಥೆ (ಜಿಟಿಟಿಸಿ), ಪ್ಲಾಟ್ ನಂ. 122–123, ದರ್ಶನಾಪುರ ಲೇಔಟ್, ಎಂ.ಬಿ. ನಗರ, ಸಂತ್ರಾಸವಾಡಿ, ಗುಲ್ಬರ್ಗ–585101. ದೂರವಾಣಿ ಸಂಖ್ಯೆ: 9141630308, 08472 230084.
ಪ್ರವೇಶ ವಿವರ
*ಡಿಪ್ಲೋಮಾ ಕೋರ್ಸ್‌ಗಳು
*ಅರ್ಜಿ ಸಲ್ಲಿಸಲು ಜೂನ್ 15, ಕೊನೆಯ ದಿನ
*ಅತ್ಯಾಧುನಿಕ ಯಂತ್ರೋಪಕರಣಗಳ ಬಳಕೆ
*ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಲಭ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.