ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಡಿ | ಎರಡೂವರೆ ತಿಂಗಳಲ್ಲಿ 125 ಕ್ವಿಂಟಲ್‌ ಸೀತಾಫಲ ಇಳುವರಿ

ಸಿದ್ದರಾಜ ಎಸ್ ಮಲ್ಕಂಡಿ
Published 6 ಜನವರಿ 2024, 5:23 IST
Last Updated 6 ಜನವರಿ 2024, 5:23 IST
ಅಕ್ಷರ ಗಾತ್ರ

ವಾಡಿ: ಎಲ್ಲಿ ನೋಡಿದರೂ ಒಣ ಭೂಮಿ. ಹಸಿರು ಕಂಗೊಳಿಸಬೇಕಿದ್ದ ಈ ಅವಧಿಯಲ್ಲಿ ಬರದ ಹೊಡೆತಕ್ಕೆ ಎಲ್ಲವೂ ಬರಿದಾಗಿದೆ. ಇಂಥ ಸ್ಥಿತಿಯಲ್ಲೂ ಚಿತ್ತಾಪುರ ತಾಲ್ಲೂಕಿನ ಬಳವಡಗಿ ಗ್ರಾಮದಲ್ಲಿ ಇಬ್ಬರು ರೈತರು ಬರ ಪರಿಸ್ಥಿತಿಯನ್ನೇ ಸವಾಲಾಗಿಸಿಕೊಂಡು ತಮ್ಮ ಜಮೀನಿನಲ್ಲಿ ‘ಸೀತಾಫಲ’ ಬೆಳೆಯುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

ಬಳವಡಗಿ ಗ್ರಾಮದ ಬಸವರಾಜ ಸಜ್ಜನ್ ಹಾಗೂ ನಾಗರಾಜ ಸಜ್ಜನ್ ಎಂಬುವರೇ ತಮ್ಮ 14 ಎಕರೆ ಭೂಮಿಯಲ್ಲಿ ‘ಸೀತಾಫಲ’ ಕೃಷಿ ಮಾಡಿದ್ದಾರೆ.

ತೊಗರಿ, ಹತ್ತಿ, ಹೆಸರು ಹೀಗೆ ಸಾಂಪ್ರದಾಯಿಕ ಬೆಳೆಗಳ ಬದಲು ತೋಟಗಾರಿಕೆ ಬೆಳೆಯಲ್ಲಿ ಆಸಕ್ತಿ ಮೂಡಿಸಿಕೊಂಡಿರುವ ನಾಗರಾಜ ಸಜ್ಜನ ಹಾಗೂ ಅವರ ಚಿಕ್ಕಪ್ಪ ಬಸವರಾಜ ಸಜ್ಜನ ಅವರು ಸೀತಾಫಲ ಕೃಷಿಯಲ್ಲಿ ಲಾಭ ಗಳಿಸುವ ತವಕದಲ್ಲಿದ್ದಾರೆ.

ಒಮ್ಮೆ ಸೀತಾಫಲ ಹಣ್ಣಿನ ಗಿಡ ಬೆಳೆದು ನಿಂತರೆ ಸಾಕು ಪ್ರತಿ ವರ್ಷ ಚಾಟ್ನಿ ಮಾಡಿ ಲಾಭಗಳಿಸಬಹುದು. ಜೊತೆಗೆ ಹೆಚ್ಚು ನೀರಿನ ಅವಶ್ಯಕತೆಯೂ ಈ ಗಿಡಗಳಿಗೆ ಬೇಕಿಲ್ಲ.

ಮಹಾರಾಷ್ಟ್ರದ ಶಹಾಜಾನ್ ಔರಾದ್‌ನಿಂದ ಎನ್‌ಎಂಕೆ ತಳಿಯ 4,500 ಸಸಿಗಳನ್ನು 2020ರಲ್ಲಿ ತರಿಸಿ ನಾಟಿ ಮಾಡಲಾಗಿದೆ. 14 ಎಕರೆ ಪ್ರದೇಶದಲ್ಲಿ ಗಿಡಗಳು ಇಂದು ಹಚ್ಚಹಸಿರಾಗಿ ಬೆಳೆದು ನಿಂತಿದ್ದು ಫಲ ನೀಡುತ್ತಿವೆ. ಪ್ರತಿ ಗಿಡಕ್ಕೂ ಹನಿ ನೀರಾವರಿ ಅಳವಡಿಸಿದ್ದು ಇದಕ್ಕಾಗಿ 50X50 ಅಡಿ ಸುತ್ತಳತೆಯ ದೊಡ್ಡ ಬಾವಿ ಕಟ್ಟಿಸಿದ್ದಾರೆ.

ಗಿಡದಿಂದ ಗಿಡಕ್ಕೆ 8 ಅಡಿ ಹಾಗೂ ಸಾಲಿನಿಂದ ಸಾಲಿಗೆ 15 ಅಡಿ ಅಂತರ ಕಾಯ್ದುಕೊಂಡು ಗಿಡ ಬೆಳೆಸಲಾಗಿದೆ. ನವೆಂಬರ್‌ನಿಂದ ಇಳುವರಿ ಆರಂಭವಾಗಿದ್ದು 2 ತಿಂಗಳ ಅಂತರದಲ್ಲಿ 125 ರಿಂದ 130 ಕ್ವಿಂಟಲ್‌ ಇಳುವರಿ ಬಂದಿದೆ.

200ರಿಂದ 400 ಗ್ರಾಂ ತೂಕ ಹೊಂದಿದ್ದ ಹಣ್ಣುಗಳನ್ನು ಹೈದರಾಬಾದ್, ಬೆಂಗಳೂರು ಹಾಗೂ ಕಲಬುರಗಿ ಮಾರುಕಟ್ಟೆಗೆ ಕಳುಹಿಸಿ ಪ್ರತಿ ಕೆಜಿಗೆ ₹40ರಿಂದ ₹70ರಂತೆ ಮಾರಾಟ ಮಾಡಲಾಗಿದೆ. ಇಳುವರಿ ಈ ವರ್ಷ ಸಾಧಾರಣವಾಗಿದ್ದು ಮುಂದಿನ ದಿನಗಳಲ್ಲಿ ಅಂದಾಜು 200 ಕ್ವಿಂಟಲ್‌ ಬರುವ ನಿರೀಕ್ಷೆಯಿದೆ ಎನ್ನುತ್ತಾರೆ ಅವರು.

ಸೀತಾಫಲ ಗಿಡಗಳು ಬೆಳೆದು ಎತ್ತರ ಆಗುವರೆಗೂ ಜಮೀನು ವ್ಯರ್ಥವಾಗಲು ಬಿಡದೇ ಮೂರು ವರ್ಷಗಳ ಕಾಲ ಅಂತರ ಬೆಳೆಯಾಗಿ ಕಡಲೆ, ಶೇಂಗಾ ಹಾಗೂ ಹೆಸರು ಬೆಳೆ ಬೆಳೆದು ಅದರಿಂದಲೂ ಲಾಭ ಪಡೆದುಕೊಳ್ಳಲಾಗಿದೆ. ಜೂನ್ ತಿಂಗಳಿನಿಂದ ನಿರ್ವಹಣೆ ಆರಂಭಿಸಿದರೆ ನವೆಂಬರ್ ತಿಂಗಳಿಂದ ಜನವರಿ ಮಧ್ಯದವರೆಗೂ ಇಳುವರಿ ನೀಡುತ್ತವೆ.

‘ಪ್ರಗತಿಪರ ರೈತರ ಹೊಲಗಳಿಗೆ ಭೇಟಿ ನೀಡಿದಾಗ ತೋಟಗಾರಿಕೆ ಬೆಳೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡೆ. ಈಗ 5.5 ಎಕರೆ ಪ್ರದೇಶದಲ್ಲಿ ಮೋಸಂಬಿ ಹಾಗೂ ಬಾಳೆಗಿಡ ನಾಟಿ ಮಾಡಿದ್ದೇನೆ. ನನ್ನ ಕೃಷಿ ಕೆಲಸಕ್ಕೆ ನಮ್ಮ ಚಿಕ್ಕಪ್ಪ ಬಸವರಾಜ ಸಜ್ಜನ ಅವರ ಮಾರ್ಗದರ್ಶನ ಹಾಗೂ ಸಹಕಾರ ಇದೆ’ ಎನ್ನುತ್ತಾರೆ ನಾಗರಾಜ.

50X50 ಅಡಿ ಸುತ್ತಳತೆಯ ದೊಡ್ಡ ಬಾವಿ
50X50 ಅಡಿ ಸುತ್ತಳತೆಯ ದೊಡ್ಡ ಬಾವಿ
ಈಚೆಗೆ ನಾಟಿ ಮಾಡಲಾಗಿರುವ ಮೋಸಂಬಿ ಹಾಗೂ ಬಾಳೆ ಬೆಳೆ
ಈಚೆಗೆ ನಾಟಿ ಮಾಡಲಾಗಿರುವ ಮೋಸಂಬಿ ಹಾಗೂ ಬಾಳೆ ಬೆಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT