ಕಲಬುರಗಿ: ಬಡವರಲ್ಲದಿದ್ದರೂ ವೈದ್ಯಕೀಯ ಚಿಕಿತ್ಸೆ, ಅನ್ನಭಾಗ್ಯ ಅಕ್ಕಿ, ಗೃಹಲಕ್ಷ್ಮಿ ಸೇರಿದಂತೆ ವಿವಿಧ ಯೋಜನೆಗಳಡಿ ಲಾಭ ಪಡೆಯುವ ಉದ್ದೇಶದಿಂದ ಅಕ್ರಮವಾಗಿ ಪಡೆದುಕೊಂಡಿದ್ದ 15,535 ಅಧಿಕ ಆದ್ಯತಾ (ಬಿಪಿಎಲ್) ಕಾರ್ಡ್‌ಗಳನ್ನು ಪತ್ತೆ ಹಚ್ಚಿರುವ ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಅವುಗಳನ್ನು ರದ್ದುಗೊಳಿಸಲು ಮುಂದಾಗಿದ್ದಾರೆ.
ಈ ಕ್ರಮದ ಭಾಗವಾಗಿ ಮಂಗಳವಾರ ಒಂದೇ ದಿನ 8 ಸಾವಿರ ಕಾರ್ಡ್‌ಗಳನ್ನು ರದ್ದು ಮಾಡಿ ಅಕ್ರಮವಾಗಿ ಕಾರ್ಡ್ ಪಡೆದವರಿಗೆ ಬಿಸಿ ಮುಟ್ಟಿಸಿದ್ದಾರೆ. ಬುಧವಾರ ಮತ್ತೆ 7 ಸಾವಿರಕ್ಕೂ ಅಧಿಕ ಕಾರ್ಡ್‌ಗಳನ್ನು ರದ್ದುಗೊಳಿಸಲು ಸಿದ್ಧತೆ ನಡೆದಿದೆ.
ಕಳೆದ ಜುಲೈ 8ರಂದು ವಿಧಾನಸೌಧದಲ್ಲಿ ರಾಜ್ಯದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸುವಂತೆ ಖಡಕ್ ಸೂಚನೆ ನೀಡಿದ್ದರು.
ರಾಜ್ಯದಲ್ಲಿ ಶೇ 80ರಷ್ಟು (1.27) ಬಿಪಿಎಲ್ ಕುಟುಂಬಗಳಿದ್ದು, 4.37 ಕೋಟಿ ಜನರು ಬಿಪಿಎಲ್ ಕಾರ್ಡ್ ಸೌಲಭ್ಯ ಪಡೆಯುತ್ತಿದ್ದಾರೆ. ಹೊಸ ಕಾರ್ಡ್‌ಗಳಿಗೆ ಸಲ್ಲಿಕೆಯಾದ 2.95 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದು, ಅನರ್ಹ ಕಾರ್ಡ್ ರದ್ದುಗೊಳಿಸಿ ಅವುಗಳ ಬದಲಾಗಿ ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥ ಮಾಡುವಂತೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಜಿಲ್ಲಾಧಿಕಾರಿಗಳು ಕಳೆದ ಆರು ತಿಂಗಳಲ್ಲಿ ಒಮ್ಮೆಯೂ ಪಡಿತರ ಪಡೆಯದ ಕುಟುಂಬಗಳನ್ನು ಪತ್ತೆ ಹಚ್ಚುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆ ಕಲಬುರಗಿ ಜಿಲ್ಲೆಯಲ್ಲಿ ಆರು ತಿಂಗಳ ಮಾಹಿತಿ ಸಂಗ್ರಹಿಸಿರುವ ಅಧಿಕಾರಿಗಳು ಜಿಲ್ಲೆಯಲ್ಲಿರುವ ಒಟ್ಟು ಬಿಪಿಎಲ್ ಕಾರ್ಡ್‌ಗಳ ಪೈಕಿ 15,535 ಕುಟುಂಬಗಳು ಆರು ತಿಂಗಳಲ್ಲಿ ಒಮ್ಮೆಯೂ ಪಡಿತರ ಪಡೆದಿಲ್ಲ ಎಂಬುದನ್ನು ಪತ್ತೆ ಹಚ್ಚಿದ್ದು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆಯುಕ್ತರ ಅನುಮತಿ ಪಡೆದು ಅಂತಹ ಕಾರ್ಡ್‌ಗಳನ್ನು ರದ್ದುಪಡಿಸಲಾಗುತ್ತಿದೆ ಎಂದು ಇಲಾಖೆಯ ಜಿಲ್ಲಾ ಉಪನಿರ್ದೇಶಕ ಭೀಮರಾಯ ಕಲ್ಲೂರು ‘ಪ್ರಜಾವಾಣಿ’ಗೆ ತಿಳಿಸಿದರು.
24 ಸಾವಿರ ಕಾರ್ಡಿಗಿಲ್ಲ ಡಿಬಿಟಿ
ಜಿಲ್ಲೆಯಲ್ಲಿ 24 ಸಾವಿರ ಬಿಪಿಎಲ್ ಪಡಿತರ ಚೀಟಿಗಳಿಗೆ ಅನ್ನಭಾಗ್ಯ ಅಕ್ಕಿಯ ನೇರ ನಗದು ವರ್ಗಾವಣೆಯು (ಡಿಬಿಟಿ) ಸಾಧ್ಯವಾಗುತ್ತಿಲ್ಲ. ಪಡಿತರ ಚೀಟಿ ಹೊಂದಿರುವವರ ಬ್ಯಾಂಕ್ ಖಾತೆ ಇಲ್ಲದಿರುವುದು, ಕಾರ್ಡ್‌ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಗದೇ ಇರುವುದು, ಬಿಪಿಎಲ್ ಕಾರ್ಡ್, ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಮ್ಯಾಪಿಂಗ್ ಆಗದೇ ಇರುವುದರಿಂದ ಇಷ್ಟು ಕುಟುಂಬಗಳಿಗೆ ನೇರ ನಗದು ವರ್ಗಾವಣೆ ಸಾಧ್ಯವಾಗುತ್ತಿಲ್ಲ ಎಂದು ಭೀಮರಾಯ ಬೇಸರ ವ್ಯಕ್ತಪಡಿಸುತ್ತಾರೆ.
ಇದಕ್ಕಾಗಿ ಜಿಲ್ಲೆಯಲ್ಲಿರುವ ಆಹಾರ ಇಲಾಖೆಯ 22 ಇನ್‌ಸ್ಪೆಕ್ಟರ್‌ಗಳಿಗೆ ಪಡಿತರ ಕಾರ್ಡ್‌ದಾರರ ಬ್ಯಾಂಕ್ ಖಾತೆಗಳನ್ನು ಪತ್ತೆ ಹಚ್ಚಿ ಲಿಂಕ್ ಮಾಡಿಸುವ ಜವಾಬ್ದಾರಿ ವಹಿಸಲಾಗಿದೆ. ಅವರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳನ್ನು ಸಂಪರ್ಕಿಸಿ ಅಲ್ಲಿರುವ ಬಿಪಿಎಲ್ ಕಾರ್ಡ್‌ದಾರರಿಗೆ ಈ ಬಗ್ಗೆ ಮಾಹಿತಿ ನೀಡಿ ತಕ್ಷಣ ಬ್ಯಾಂಕ್ ಅಕೌಂಟ್ ಲಿಂಕ್ ಮಾಡಿಸಲು ಮನವೊಲಿಸುವಂತೆ ಸೂಚನೆ ನೀಡಿದ್ದಾರೆ.
ಇದಕ್ಕಾಗಿ ಹೋಬಳಿ ಮಟ್ಟದಲ್ಲಿ ಬ್ಯಾಂಕ್ ಖಾತೆ ತೆರೆಯುವ ವಿಶೇಷ ಅಭಿಯಾನವನ್ನು ನಡೆಸಲಾಗುತ್ತಿದ್ದು, ಅಂಚೆ ಕಚೇರಿ ಸಿಬ್ಬಂದಿಯ ಸಹಯೋಗದೊಂದಿಗೆ ತಕ್ಷಣ ಬಿಪಿಎಲ್ ಕಾರ್ಡ್ ಇದ್ದವರಿಗೆ ಖಾತೆ ತೆರೆಸಲಾಗುತ್ತಿದೆ.
ಹೊಸದಾಗಿ 20,303 ಅರ್ಜಿ
ಜಿಲ್ಲೆಯಲ್ಲಿ ಹೊಸದಾಗಿ ಬಿಪಿಎಲ್ ಪಡಿತರ ಚೀಟಿ ಪಡೆಯಲು 20,303 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅವುಗಳಲ್ಲಿ ಅರ್ಹ, ಅನರ್ಹ ಫಲಾನುಭವಿಗಳ ಪಟ್ಟಿಯನ್ನೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ತಯಾರಿಸಿದೆ.
ವೈದ್ಯಕೀಯ ಸೌಲಭ್ಯ ಪಡೆಯುವವರು ಅರ್ಜಿ ಹಾಕುವುದಕ್ಕಾಗಿ ಆಗಾಗ ಇಲಾಖೆಯಿಂದ ಪೋರ್ಟಲ್ ತೆರೆಯಲಾಗುತ್ತದೆ. ಆ ಸಂದರ್ಭದಲ್ಲಿ ವೈದ್ಯಕೀಯ ತುರ್ತು ಇಲ್ಲದವರೂ ಅರ್ಜಿ ಸಲ್ಲಿಸಿದ್ದಾರೆ. ಇದೆಲ್ಲ ಪರಿಶೀಲನೆ ಸಂದರ್ಭದಲ್ಲಿ ಪತ್ತೆಯಾಗಿದ್ದು, ಅರ್ಹರಿಗೆ ಮಾತ್ರ ಕಾರ್ಡ್ ಸಿಗಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಭೀಮರಾಯ ಮಾಹಿತಿ ನೀಡಿದರು.
ಆರು ತಿಂಗಳಿಂದ ಪಡಿತರ ಪಡೆಯದೇ ಬರೀ ಇತರ ಸೌಲಭ್ಯಗಳಿಗಾಗಿ ಬಿಪಿಎಲ್ ಕಾರ್ಡ್ ಇಟ್ಟುಕೊಂಡು ಆರ್ಥಿಕವಾಗಿ ಸ್ಥಿತಿವಂತರಾಗಿರುವವರ ಕಾರ್ಡ್‌ಗಳನ್ನು ರದ್ದು ಮಾಡುತ್ತಿದ್ದೇವೆ.ಭೀಮರಾಯ ಕಲ್ಲೂರು,ಉಪನಿರ್ದೇಶಕ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.