ಶನಿವಾರ, ಅಕ್ಟೋಬರ್ 23, 2021
20 °C
ದಸ್ತಾಪುರ: ಕಲುಷಿತ ನೀರು ಕುಡಿದು ಇಬ್ಬರ ಸಾವು

‘ಮೃತರ ಕುಟುಂಬಕ್ಕೆ ₹ 3 ಲಕ್ಷ ಪರಿಹಾರ ನೀಡಿ’; ಮುಖ್ಯಮಂತ್ರಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲಾಪುರ: ‘ತಾಲ್ಲೂಕಿನ ದಸ್ತಾಪುರ ಗ್ರಾಮದಲ್ಲಿ ಕಲುಷಿತ ನೀರು ಕುಡಿದ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಅವರ ಕುಟುಂಬಗಳಿಗೂ ತಲಾ ₹ 3 ಲಕ್ಷ ಪರಿಹಾರ ನೀಡಬೇಕು’ ಎಂದು ‌ಗ್ರಾಮಸ್ಥರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ.

‘ವಿಜಯನಗರ ಜಿಲ್ಲೆಯ ಹುವಿನಹಡಗಿಲಿ ಸಮೀಪದ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟವರ ಕುಟುಂಬಗಳಿಗೆ ಮುಖ್ಯಮಂತ್ರಿ ತಲಾ ₹ 3 ಲಕ್ಷ ಪರಿಹಾರ ಘೋಷಿಸಿದ್ದಾರೆ. ಇಂಥದ್ದೇ ಪ್ರಕರಣದಲ್ಲಿ ದಸ್ತಾಪುರದಲ್ಲಿ ಸೆ. 29ರಂದು ದ್ರೌಪದಿ (65) ಹಾಗೂ ಕಮಲಾಬಾಯಿ (56) ಮೃತಪಟ್ಟಿದ್ದರೂ ಪ್ರತಿಕ್ರಿಯೆ ಕೂಡ ನೀಡಿಲ್ಲ. ಮಾತ್ರವಲ್ಲ; ಈವರೆಗೆ 50 ಮಂದಿ ವಾಂತಿ– ಭೇದಿಯಿಂದ ನರಳಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಮೃತರ ಕುಟುಂಬಕ್ಕೆ ತಲಾ ₹ 2 ಲಕ್ಷ ವೈಯಕ್ತಿಕ ನೆರವು  ನೀಡುವುದಾಗಿ ಶಾಸಕ ಬಸವರಾಜ ಮತ್ತಿಮೂಡ ಹೇಳಿದ್ದಾರೆ. ಆದರೆ, ಇನ್ನೂ ಪರಿಹಾರ ಬಂದಿಲ್ಲ. ಕನಿಷ್ಠಪಕ್ಷ ಸರ್ಕಾರದ ನೆವನ್ನಾದರೂ ಕೂಡಲೇ ನೀಡಬೇಕು’ ಎಂದು ಗ್ರಾಮದ ಮುಖಂಡ ಧೂಳಪ್ಪ ಕಮಲಾಪುರಕರ್‌ ಆಗ್ರಹಿಸಿದ್ದಾರೆ.

‘ಪರಿಹಾರ ನೀಡುವಲ್ಲಿಯೂ ತಾರತಮ್ಯ ಮಾಡಬಾರದು. ದಸ್ತಾಪುರಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಕೂಡ ಪರಿಹಾರದ ಬಗ್ಗೆ ನಿಖರ ಮಾಹಿತಿ ನೀಡಿಲ್ಲ. ಏನು ಬರುತ್ತದೋ ಅದನ್ನು ಕೊಡಿಸಲು ಯತ್ನಿಸುತ್ತೇನೆ ಎಂದಿದ್ದಾರೆ. ಸ್ವತಃ ಮುಖ್ಯಮಂತ್ರಿಯೇ ₹ 3 ಲಕ್ಷ ಪರಿಹಾರ ಘೋಷಿಸಿದ್ದಾರೆಂದರೆ ಅದೇ ರೀತಿಯ ಪರಿಹಾರವನ್ನೂ ಇಲ್ಲೂ ನೀಡಲು ಅಧಿಕಾರಿಗಳು ಏಕೆ ಹಿಂದೇಟು ಹಾಕಬೇಕು’ ಎಂದೂ ಅವರು ಪ್ರಶ್ನಿಸಿದ್ದಾರೆ.

‘ದಸ್ತಾಪುರದಲ್ಲಿ ಈಗಲೂ ವಾಂತಿ ಭೇದಿ ಪ‍್ರಕರಣಗಳು ಮುಂದುವರಿದಿವೆ. ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ತಾತ್ಕಾಲಿಕವಾಗಿ ನೀರಿನ ಡಬ್ಬಗಳನ್ನು ನೀಡಿದ್ದಾರೆ. ಆದರೆ, ಅವು ಯಾರಿಗೂ ಸಾಲುವುದಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಜನರನ್ನು ರೋಗಗಳ ಸಂಕಷ್ಟದಿಂದ ಪಾರು ಮಾಡಬೇಕು’ ಎಂದು ಶಿವರಾಯ ಸೂರನ್‌ ಅವರು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು