ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಅಪಾರ ಬೆಳೆ, ಆಸ್ತಿಪಾಸ್ತಿ ನಾಶ

ಜೆಸ್ಕಾಂಗೆ ₹10 ಲಕ್ಷ , ಲೋಕೋಪಯೋಗಿ ಇಲಾಖೆಗೆ ₹3 ಕೋಟಿ ನಷ್ಟ
Last Updated 18 ಸೆಪ್ಟೆಂಬರ್ 2020, 2:54 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನಲ್ಲಿ ಬುಧವಾರ ಸುರಿದ ದಾಖಲೆಯ ಪ್ರಮಾಣದ ಭಾರಿ ಮಳೆಯಿಂದ ಉಂಟಾದ ಪ್ರವಾಹದಿಂದ ರಸ್ತೆ, ಸೇತುವೆಗಳಿಗೆ ಹಾನಿಯಾಗಿದೆ. ಸರಿಪಡಿಸಲು ಅಂದಾಜು ₹3 ಕೋಟಿ ಅನುದಾನದ ಅಗತ್ಯವಿದೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗುರುರಾಜ ಜೋಷಿ ತಿಳಿಸಿದ್ದಾರೆ.

ಚಿಂಚೋಳಿ ಪಟ್ಟಣ ಪ್ರವೇಶದ ಸೇತುವೆ, ಗಣಾಪುರ ಸೇತುವೆ ಮತ್ತು ಯಂಪಳ್ಳಿ– ದೇಗಲಮಡಿ ಮಧ್ಯದ ಸೇತುವೆಗಳು, ಪಸ್ತಪುರ– ರುಮ್ಮನಗೂಡ ಜಿಲ್ಲಾ ಮುಖ್ಯ ರಸ್ತೆ ಹಾಳಾಗಿದೆ ಎಂದರು.

ಪ್ರವಾಹದ ನೀರು ಅಂದಾಜು 350ರಿಂದ 400 ಮನೆಗಳಿಗೆ ನುಗ್ಗಿ ಅಗತ್ಯ ವಸ್ತುಗಳು, ಧಾನ್ಯಗಳು, ಬಟ್ಟೆಬರೆ ಹಾಳಾಗಿವೆ ಎಂದು ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ದೇಗಲಮಡಿ ಮತ್ತು ಕಲ್ಲೂರು ರೋಡ್ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಯ ಮಾಲೀಕರು ಪಡಿತರ ಧಾನ್ಯ ಎತ್ತುವಳಿ ಮಾಡಿ ಪಡಿತರ ಚೀಟಿದಾರರಿಗೆ ಹಂಚಲು ಒಯ್ದಿರುತ್ತಾರೆ. ಶೇ 50ರಷ್ಟು ಕಾರ್ಡ್‌ಗಳಿಗೆ ಪಡಿತರ ವಿತರಿಸಿದ್ದಾರೆ. ಉಳಿದ ಪಡಿತರ ಅಗಡಿಯಲ್ಲಿ ದಾಸ್ತಾನು ಇರುವಾಗಲೇ ಮಳೆಯ ಪ್ರವಾಹದ ನೀರು ನುಗ್ಗಿ ಅಕ್ಕಿ, ಬೇಳೆ ಮೊದಲಾದ ಧಾನ್ಯ ಹಾಳಾಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ನ್ಯಾಯಬೆಲೆ ಅಂಗಡಿಯವರಿಗೆ ಪರಿಹಾರ ಒದಗಿಸಲು ಕೋರುವುದಾಗಿ ಅವರು ತಿಳಿಸಿದರು.

ತಾಲ್ಲೂಕಿನ ಕಲ್ಲೂರುರೋಡ್‌ ಗ್ರಾಮ ಮತ್ತು ಚಿಂಚೋಳಿ ಪಟ್ಟಣದಲ್ಲಿ 8ರಿಂದ 10 ವಿದ್ಯುತ್ ಪರಿವರ್ತಕಗಳು ಸುಟ್ಟಿವೆ. ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಇದರಿಂದ ಅಂದಾಜು ₹10 ಲಕ್ಷ ಹಾನಿ ಉಂಟಾಗಿದೆ ಎಂದು ಜೆಸ್ಕಾಂ ಎಇಇ ಉಮೇಶ ಗೋಳಾ ತಿಳಿಸಿದರು.

ಸಂಪರ್ಕ ಕಡಿತ: ರಾಯಚೂರು– ವನ್ಮಾರಪಳ್ಳಿ ರಾಜ್ಯ ಹೆದ್ದಾರಿ–15ರಲ್ಲಿ ಬರುವ ತಾಲ್ಲೂಕಿನ ಐನೊಳ್ಳಿ ಮತ್ತು ನಾಗಾಈದಲಾಯಿ ಬಳಿ ನಿರ್ಮಿಸಿದ ಸೇತುವೆ ಕೊಚ್ಚಿಕೊಂಡು ಹೋಗಿದೆ.

ಪ್ರವಾಹದ ನೀರು ಹಾಗೂ ಚಂದ್ರಂಪಳ್ಳಿ ಜಲಾಶಯದ ನೀರಿನ ರಭಸಕ್ಕೆ ಐನೋಳ್ಳಿ ಬಳಿಯ ಸೇತುವೆ ಕೊಚ್ಚಿಕೊಂಡು ಹೋದರೆ, ನಾಗಾಈದಲಾಯಿ ಬಳಿಯ ಸೇತುವೆಯೂ ಇದೇ ರೀತಿ ಹಾಳಾಗಿದೆ. ಇದರಿಂದ ಚಿಂಚೋಳಿ– ಬೀದರ್ ಸಂಪರ್ಕ ಕಡಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT