ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡ ಪಿಸ್ತೂಲ್ ವಶ; ನಾಲ್ವರ ಬಂಧನ

ಮಧ್ಯಪ್ರದೇಶದಿಂದ ತಂದು ಮಾರಾಟ: ಎಸ್ಪಿ ಇಶಾ ಪಂತ್ ಮಾಹಿತಿ
Last Updated 1 ಸೆಪ್ಟೆಂಬರ್ 2022, 16:57 IST
ಅಕ್ಷರ ಗಾತ್ರ

ಕಲಬುರಗಿ: ‘ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ತಯಾರಾದ ನಾಲ್ಕು ನಾಡ ಪಿಸ್ತೂಲ್‌ಗಳನ್ನು ಜಿಲ್ಲೆಗೆ ಮಾರುತ್ತಿದ್ದ ಮತ್ತು ಖರೀದಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಅಫಜಲಪುರ ಬಸ್ ನಿಲ್ದಾಣದ ಬಳಿ ಬುಧವಾರ ಸಂಜೆ ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ತಿಳಿಸಿದರು.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಯಡ್ರಾಮಿ ತಾಲ್ಲೂಕಿನ ಸುಂಬಡ ಗ್ರಾಮದ ಭೀಮಣ್ಣ ಅಮ್ಮಣ್ಣ ಪೂಜಾರಿ, ಸಿದ್ದಪ್ಪ ಸಿದ್ರಾಮಪ್ಪ ಡಿಗ್ಗಾವಿ, ಮಳ್ಳಿ ಗ್ರಾಮದ ಪರಸಯ್ಯ ಮಲ್ಲಿಕಾರ್ಜುನ ಗುತ್ತೇದಾರ ಮತ್ತು ಜೇವರ್ಗಿ ತಾಲ್ಲೂಕು ಮಂದೇವಾಲದ ಸಲೀಂ ಮಿಟ್ಟೇಸಾಬ್ ಶಿರಸಗಿ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ ನಾಲ್ಕು ನಾಡ ಪಿಸ್ತೂಲ್ ಮತ್ತು 18 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಹಲವು ಬಾರಿ ಮಧ್ಯಪ್ರದೇಶದಿಂದ ನಾಡ ಪಿಸ್ತೂಲ್‌ಗಳನ್ನು ತಂದು ಮಾರುತ್ತಿರುವ ಸಂಗತಿಯನ್ನು ಆರೋಪಿಗಳು ವಿಚಾರಣೆ ವೇಳೆ ಅಫಜಲಪುರ ಠಾಣೆ ಪೊಲೀಸರ ಎದುರು ಒಪ್ಪಿಕೊಂಡಿದ್ದಾರೆ. ಇದರಲ್ಲಿ ಈಗಾಗಲೇ ಒಂದು ಕೊಲೆ, ಏಳು ಶಸ್ತಾಸ್ತ್ರ ಕಾಯ್ದೆ ಪ್ರಕರಣ ಸೇರಿ 10 ಪ್ರಕರಣಗಳನ್ನು ಎದುರಿಸುತ್ತಿರುವ ಸೈಫನ್‌ಸಾಬ್ ಭಾಗಿಯಾದ ಬಗ್ಗೆ ಸುಳಿವು ಸಿಕ್ಕಿದೆ. ಆತನನ್ನು ಶೀಘ್ರವೇ ಬಂಧಿಸಲಾಗುವುದು’ ಎಂದು ಅವರು ವಿವರಿಸಿದರು.

‘ಭೀಮಣ್ಣ ಪೂಜಾರಿ ಮತ್ತು ಸಿದ್ದಪ್ಪ ಡಿಗ್ಗಾವಿ ಇಬ್ಬರೂ ನಾಡಪಿಸ್ತೂಲ್‌ಗಳನ್ನು ಸಲೀಂ ಮತ್ತು ಪರಸಯ್ಯಗೆ ಮಾರಿದ್ದರು. ₹ 65 ಸಾವಿರ ಕೊಟ್ಟು ಪರಸಯ್ಯ ಖರೀದಿಸಿದ್ದರೆ, ಮತ್ತೊಂದು ಪಿಸ್ತೂಲನ್ನು ಸಲೀಂ ₹ 50 ಸಾವಿರಕ್ಕೆ ಖರೀದಿಸಿದ್ದ. ಮಧ್ಯಪ್ರದೇಶದಿಂದ ₹ 20 ಸಾವಿರಕ್ಕೆ ಖರೀದಿಸಿ ತಂದಿರುವುದಾಗಿ ಒಪ್ಪಿಕೊಂಡಿದ್ದಾರೆ’ ಎಂದು ಅವರು ತಿಳಿಸಿದರು.

ರಸ್ತೆ ಮಾರ್ಗವಾಗಿ ಮಹಾರಾಷ್ಟ್ರದಿಂದ ಆರೋಪಿಗಳು ಬರುತ್ತಿರುವಾಗ, ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು. ನಾಲ್ವರ ಮೇಲೆ ಹಿಂದೆ ಯಾವುದೇ ಪ್ರಕರಣಗಳಿಲ್ಲ. ಈಗ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಫಜಲಪುರದಲ್ಲಿ ಬಂದೂಕು ತಯಾರಿಕೆ ಬಂದ್ ಆಗಿರುವ ಕಾರಣ ಮಧ್ಯಪ್ರದೇಶದಿಂದ ಅಕ್ರಮವಾಗಿ ಪಿಸ್ತೂಲ್ ತರುತ್ತಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ಅಫಜಲಪುರ ಸಿಪಿಐ ರಾಜಶೇಖರ ಬಡದೆಸಾರ, ಪಿಎಸ್‌ಐ ಸುರೇಶಕುಮಾರ್, ಯಡ್ರಾಮಿ ಪೊಲೀಸ್ ಠಾಣೆಯಪಿಎಸ್‌ಐ ಬಸವರಾಜ ಚಿತಕೋಟಿ, ಎಎಸ್‌ಐ ರಾಜಶೇಖರ, ಸಿಬ್ಬಂದಿಯಾದ ಸಂತೋಷ, ಪಂಡಿತ, ಇಮಾಮ್, ಭಾಗಣ್ಣ, ಆನಂದ ಅವರನ್ನು ಒಳಗೊಂಡ ತಂಡವು ಕಾರ್ಯಾಚರಣೆ ನಡೆಸಿತು ಎಂದು ಅವರು ತಿಳಿಸಿದರು.

ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಡಿವೈಎಸ್ಪಿ ರವೀಂದ್ರ ಶಿರೂರ ಹಾಗೂ ಅಫಜಲಪುರ, ಯಡ್ರಾಮಿ ಠಾಣೆಗಳ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಹೊಡೆತ ತಪ್ಪಿಸಿಕೊಳ್ಳಲು ಪಿಸ್ತೂಲ್ ಖರೀದಿ!

‌‘ನಿಧಿ ಶೋಧಿಸುವ ಕೆಲಸ ಮಾಡುತ್ತಿದ್ದ ಆರೋಪಿ ಮಂದೇವಾಲದ ಸಲೀಂ ಮಿಟ್ಟೇಸಾಬ ಶಿರಸಗಿ ಅಂತಹ ಸಂದರ್ಭದಲ್ಲಿ ಗ್ರಾಮಸ್ಥರಿಂದ ಥಳಿತಕ್ಕೆ ಒಳಗಾಗುತ್ತಿದ್ದ. ಹೀಗಾಗಿ, ತನ್ನ ಬಳಿ ಪಿಸ್ತೂಲ್ ಇದ್ದರೆ ಯಾರೂ ಹತ್ತಿರ ಬರುವುದಿಲ್ಲವೆಂದು ಪಿಸ್ತೂಲ್ ಖರೀದಿಸಿದ್ದ’ ಎಂದು ಎಸ್ಪಿ ಇಶಾ ಪಂತ್ ತಿಳಿಸಿದರು.

ಆಸ್ತಿ ವಿವಾದದ ಚಿಂತೆಯಲ್ಲಿದ್ದ ಮಳ್ಳಿ ಗ್ರಾಮದ ಪರಸಯ್ಯ ಗುತ್ತೇದಾರ ಎದುರಾಳಿಗಳನ್ನು ಹೆದರಿಸಲು ಪಿಸ್ತೂಲ್ ಖರೀದಿಸಿದ್ದ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT