ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ಜಿಲ್ಲೆಯಲ್ಲಿ 8 ತಿಂಗಳ ಅವಧಿಯಲ್ಲಿ 412 ಶಿಶು ಮರಣ

Published 11 ಜನವರಿ 2024, 6:56 IST
Last Updated 11 ಜನವರಿ 2024, 6:56 IST
ಅಕ್ಷರ ಗಾತ್ರ

ಕಲಬುರಗಿ: ರಕ್ತಹೀನತೆ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ, ಆಂಬುಲೆನ್ಸ್ ಸೇವೆ ಸಿಗದಿರುವುದು, ಶಿಶುವಿನ ಬೆಳವಣಿಗೆ ಕುಂಠಿತ ಸೇರಿ ನಾನಾ ಸಮಸ್ಯೆಯಿಂದ ಜಿಲ್ಲೆಯ ಖಾಸಗಿ ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೆರಿಗೆ ವೇಳೆ ಶಿಶುಗಳು ಹಾಗೂ ಗರ್ಭಿಣಿಯರ ಸಾವಿನ ಪ್ರಮಾಣ ಹೆಚ್ಚುತ್ತಿದೆ.

ಜಿಲ್ಲಾ ಆರೋಗ್ಯ ಇಲಾಖೆ ಅಂಕಿ ಅಂಶ ಮಾಹಿತಿ ಪ್ರಕಾರ 3 ವರ್ಷಗಳ ಅವಧಿಯಲ್ಲಿ ಅಂದಾಜು 1,400 ಶಿಶುಗಳು ಹೆರಿಗೆ ಸಮಯದಲ್ಲಿ ಮೃತಪಟ್ಟರೆ, 35ಕ್ಕೂ ಹೆಚ್ಚು ಗರ್ಭಿಣಿಯರು ಸಾವನ್ನಪ್ಪಿದ್ದಾರೆ.

2021–2022ನೇ ವರ್ಷದಲ್ಲಿ 11 ಗರ್ಭಿಣಿಯರು, 490 ಶಿಶುಗಳು ಹೆರಿಗೆ ವೇಳೆ ಮೃತಪಟ್ಟಿದ್ದು, ಅದರಲ್ಲಿ ಕಡಿಮೆ ತೂಕ 115, ಉಸಿರು ಕಟ್ಟಿ 47, ನಿಮೋನಿಯಾದಿಂದ 25, ರಕ್ತ ನಂಜಿನಿಂದ 106, ಹೃದಯ ಸಮಸ್ಯೆಯಿಂದ 7, ಜಾಂಡೀಸ್‌ 2, ಇತರೆ ಕಾರಣಗಳಿಗೆ 183 ಶಿಶುಗಳು ಸಾವನ್ನಪ್ಪಿವೆ.

2022–23ನೇ ವರ್ಷದಲ್ಲಿ 13 ಗರ್ಭಿಣಿಯರು, 590 ಶಿಶುಗಳು ಸಾವನ್ನಪ್ಪಿವೆ. ಕಡಿಮೆ ತೂಕ 111, ಉಸಿರಾಟ ಸಮಸ್ಯೆ 85, ನಿಮೋನಿಯಾದಿಂದ 25, ರಕ್ತ ನಂಜಿನಿಂದ 145, ಹೃದಯ ಸಮಸ್ಯೆಯಿಂದ 18, ಜಾಂಡೀಸ್‌ನಿಂದ 18, ಇತರೆ ಕಾರಣದಿಂದ 206 ಶಿಶು ಮೃತಪಟ್ಟಿವೆ.

2023ರ ಎಪ್ರಿಲ್‌ನಿಂದ ನವೆಂಬರ್‌ ವರೆಗೆ 14 ಗರ್ಭಿಣಿಯರು, 412 ಶಿಶುಗಳು ಸಾವನ್ನಪ್ಪಿವೆ. ಕಡಿಮೆ ತೂಕದಿಂದ 89, ಉಸಿರಾಟ ಸಮಸ್ಯೆ 75, ನಿಮೋನಿಯಾದಿಂದ 13, ರಕ್ತ ನಂಜಿನಿಂದ 69, ಹೃದಯ ಸಮಸ್ಯೆಯಿಂದ 12, ಡೆಂಗಿ, ಇತರೆ ಕಾರಣದಿಂದ 152 ಶಿಶು ಮೃತಪಟ್ಟಿವೆ.

ಮನೆಯಲ್ಲಿ ಹೆರಿಗೆ:

ಗ್ರಾಮಾಂತರ ಪ್ರದೇಶಗಳಲ್ಲಿ ವಾಸವಾಗಿರುವವರೂ ಮನೆಯಲ್ಲಿ ಹೆರಿಗೆ ಆಗುತ್ತದೆ ಎಂಬ ಭರವಸೆಯಲ್ಲಿ ಕೊನೆಯ ಸಮಯದವರೆಗೆ ಕಾಯುತ್ತಾರೆ. ಮುಂದೆ ಸಾಮಾನ್ಯ ಹೆರಿಗೆ ಆಗದಿದ್ದಾಗ ಆಸ್ಪತ್ರೆ ಕಡೆಗೆ ಮುಖ ಮಾಡುತ್ತಾರೆ. ಸಮಯ ಮೀರಿ ಹೋಗಿರುವುದರಿಂದ ಗರ್ಭಿಣಿಯರ ಸಾವು ಸಂಖ್ಯೆ ಹೆಚ್ಚಾಗುತ್ತವೆ ಎನ್ನುತ್ತಾರೆ ಪ್ರಸೂತಿ ತಜ್ಞರು.

ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿ 18 ವರ್ಷದ ಮೊದಲೆ ಗರ್ಭಿಣಿಯಾಗಿರುವುದು ಹೆರಿಗೆ ವೇಳೆ ಸಾವಿಗೆ ಕಾರಣವಾಗಬಹುದು. ಸರಿಯಾದ ದೇಹ ಬೆಳವಣಿಗೆ ಆಗಿರುವುದಿಲ್ಲ, ತೂಕ ಸಹ ಕಡಿಮೆ ಇರುತ್ತದೆ. ಹೀಗಾಗಿ ತಾಯಂದಿರ ಸಾವು ಹೆಚ್ಚುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಅವರು.

ಹೆಚ್ಚಿನ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ:

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪೌಷ್ಟಿಕ ಆಹಾರ ವಿತರಣೆ ಹಾಗೂ ಆರೋಗ್ಯ ಇಲಾಖೆ ಜಾಗೃತಿ ಹಾಗೂ ಮಾಸಿಕ ಕ್ಯಾಂಪ್‌ಗಳ ಮೂಲಕ ರಕ್ತ ಹೀನತೆ ಕಡಿಮೆ ಮಾಡಲು ಶ್ರಮಿಸಲಾಗುತ್ತಿದೆ. ಆದರೂ ಗರ್ಭಿಣಿಯರಲ್ಲಿ ರಕ್ತಹೀನತೆ ಸಮಸ್ಯೆ ಕಾಡುತ್ತಿದೆ. ಬಡ ಹಾಗೂ ಮಧ್ಯಮ ವರ್ಗದ ಜನ ಕೂಲಿ ಕೆಲಸಗಳ ಮಧ್ಯೆ ಸರಿಯಾದ ಪೌಷ್ಟಿಕ ಆಹಾರ ಸಿಗುವುದಿಲ್ಲ. ಇದೂ ರಕ್ತ ಹೀನತೆಗೆ ಕಾರಣವಾಗಿದೆ.

ಶಿಶು ಮರಣದ ಕುರಿತು ಪ್ರತಿಕ್ರಿಯೆ ಪಡೆಯುಲು ಕರೆ ಮಾಡಿದಾಗ ಜಿಲ್ಲಾ ಆರೋಗ್ಯ ಅಧಿಕಾರಿ ಕರೆಗೆ ಪ್ರತಿಕ್ರಿಯೆ ನೀಡಲಿಲ್ಲ.

ವಿಠ್ಠಲ ಚಿಕ್ಕಣಿ
ವಿಠ್ಠಲ ಚಿಕ್ಕಣಿ
ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೌಲಭ್ಯ ಸಿಬ್ಬಂದಿ ಕೊರತೆಯಿಂದ ಬಳಲುತ್ತಿವೆ. ತಜ್ಞ ಸಿಬ್ಬಂದಿ ನೇಮಕ ಮಾಡಬೇಕು ಆಧುನಿಕ ಉಪಕರಣಗಳ ಸರಬರಾಜು ಮಾಡಬೇಕು.
ವಿಠ್ಠಲ ಚಿಕಣಿ ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT