ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಎನ್‌ಇಪಿ ರದ್ದತಿಗೆ ಎಬಿವಿಪಿ ವಿರೋಧ

Published 15 ಮೇ 2024, 5:06 IST
Last Updated 15 ಮೇ 2024, 5:06 IST
ಅಕ್ಷರ ಗಾತ್ರ

ಕಲಬುರಗಿ: ರಾಜ್ಯ ಸರ್ಕಾರವು ನೂತನ ರಾಷ್ಟ್ರೀಯ ಶಿಕ್ಷಣ ನೀತಿ–2020 ಅನ್ನು ಯಾವುದೇ ಕಾರಣಕ್ಕೂ ರದ್ದು ಮಾಡಬಾರದು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜಿಲ್ಲಾ ಘಟಕದ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.

ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಹನುಮಂತ ಬಗಲಿ ಮಾತನಾಡಿ, ‘ಬ್ರಿಟಿಷ್ ಶಿಕ್ಷಣ ನೀತಿಯಿಂದ ಮುಕ್ತರಾಗಿ ಭಾರತೀಯ ಶಿಕ್ಷಣ ಪಡೆಯುವಂತಾಗಬೇಕು ಎಂಬ ಆಶಯದೊಂದಿಗೆ ಕೇಂದ್ರ ಸರ್ಕಾರವು ನೂತನ ಶಿಕ್ಷಣ ನೀತಿ ಜಾರಿಗೆ ತಂದಿದೆ. ಯಾವುದೇ ಕಾರಣಕ್ಕೆ ಇದನ್ನು ಹಿಂಪಡೆಯಬಾರದು. ಭಾರತೀಯ ಶಿಕ್ಷಣ ನೀತಿ ಜಾರಿ ಹಾಗೂ ಕೌಶಲಯುಕ್ತ ಯುವಶಕ್ತಿ ನಿರ್ಮಾಣಕ್ಕೆ ಇದು ಅಗತ್ಯವಾಗಿದೆ’ ಎಂದು ಹೇಳಿದರು.

‘ಎನ್‌ಇಪಿ ಅನ್ನು ಮೊದಲ ಬಾರಿಗೆ ಅನುಷ್ಠಾನಗೊಳಿಸಿದ್ದು ಕರ್ನಾಟಕ ರಾಜ್ಯ. ಚುನಾವಣಾ ಪ್ರಣಾಳಿಕೆಯಲ್ಲಿ ಎನ್‌ಇಪಿ ತೆಗೆಯುವುದಾಗಿ ಹೇಳಿದ ಕಾರಣಕ್ಕಾಗಿಯೇ ಹೊಸ ಶಿಕ್ಷಣ ನೀತಿಯನ್ನು ಬದಲಾವಣೆ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಸರ್ಕಾರದ ಈ ನಡೆಯನ್ನು ಎಬಿವಿಪಿ ಖಂಡಿಸುತ್ತದೆ’ ಎಂದರು.

‘ಮುಂದಿನ 20-25 ವರ್ಷಗಳನ್ನು ಗಮನದಲ್ಲಿ ಇರಿಸಿಕೊಂಡು ಇಡೀ ದೇಶಕ್ಕೆ ಅನ್ವಯವಾಗುವಂತಹ ಒಂದೇ ಬಗೆಯ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರಲಾಗಿದೆ. ರಾಜ್ಯ ಸರ್ಕಾರವು ರಾಷ್ಟ್ರೀಯತೆಯನ್ನು ತುಂಡರಿಸಿ, ಪ್ರತ್ಯೇಕತೆಯತ್ತ ಹೆಜ್ಜೆ ಇರಿಸುತ್ತಿರುವುದು ಸರಿಯಲ್ಲ. ರಾಜ್ಯದ ಬೆಳೆವಣಿಗೆಗೆ ಇದು ಹಿನ್ನಡೆಯಾಗಲಿದೆ. ಕೂಡಲೇ ರಾಜ್ಯ ಸರ್ಕಾರವು ಈ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು. ಇಲ್ಲದಿದ್ದರೇ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು’ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ಬಸವರಾಜ ಗುರುಗುಂಟಿ, ದಿಲೀಪ್ ದಾನೂರ, ಗುರು ಪೂಜಾರಿ, ಶಾಂತಕುಮಾರ್, ಮನೋಜ್, ಶಿವಾನಿ, ತರುಣ, ಅರುಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT