ಅಫಜಲಪುರ ಕ್ಷೇತ್ರ ಸ್ಥಿತಿ–ಗತಿ: ಟಿಕೆಟ್‌ಗಾಗಿ ತಂದೆ–ಮಗ, ಸಹೋದರರ ಮಧ್ಯೆ ಪೈಪೋಟಿ

ಕಲಬುರಗಿ: ಅಫಜಲಪುರ ಕ್ಷೇತ್ರದ ಹಾಲಿ ಶಾಸಕರಾಗಿರುವ ಕಾಂಗ್ರೆಸ್‌ನ ಎಂ.ವೈ. ಪಾಟೀಲ ಅವರ ಕುಟುಂಬದಲ್ಲಿಯೇ ಈ ಬಾರಿಯ ಟಿಕೆಟ್‌ಗೆ ಪೈಪೋಟಿ ನಡೆದಿದ್ದರೆ, ಬಿಜೆಪಿಯಲ್ಲಿ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಹಾಗೂ ಅವರ ಸಹೋದರ ನಿತಿನ್ ಗುತ್ತೇದಾರ ಮಧ್ಯೆ ಟಿಕೆಟ್‌ಗಾಗಿ ಫೈಟ್ ನಡೆದಿದೆ. ಜೆಡಿಎಸ್ ಕ್ಷೇತ್ರದಲ್ಲಿ ಹೆಚ್ಚಾಗಿರುವ ಕೋಲಿ ಸಮಾಜದ ಮುಖಂಡ ಶಿವಕುಮಾರ್ ನಾಟೀಕಾರ ಅವರಿಗೆ ಟಿಕೆಟ್ ಘೋಷಿಸಿದೆ.
ಬದಲಾದ ರಾಜಕೀಯ ಸನ್ನಿವೇಶದಲ್ಲಿ 2018ರಲ್ಲಿ ಕಾಂಗ್ರೆಸ್‌ನಲ್ಲಿದ್ದ ಈಡಿಗ ಸಮುದಾಯದ ಹಿರಿಯ ಮುಖಂಡ ಮಾಲೀಕಯ್ಯ ಗುತ್ತೇದಾರ ಅವರು ಬಿಜೆಪಿ ಸೇರ್ಪಡೆಯಾದರು. ಮಾಲೀಕಯ್ಯ ಅವರ ಎದುರಾಳಿ ಎಂ.ವೈ. ಪಾಟೀಲ ಕೆಜೆಪಿ ತೊರೆದು ಕಾಂಗ್ರೆಸ್‌ಗೆ
ಮರಳಿ ಪಕ್ಷದ ಟಿಕೆಟ್ ಪಡೆದು ಗೆಲುವು ಸಾಧಿಸಿದರು. ಇದರಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದ ಮಾಲೀಕಯ್ಯ ಅವರಿಗೆ ಪಕ್ಷವು ವಿಧಾನಪರಿಷತ್ ಸದಸ್ಯತ್ವ ಸ್ಥಾನ ಕೊಡಬಹುದು ಎಂಬ ನಿರೀಕ್ಷೆ ಅವರ ಅಭಿಮಾನಿಗಳಲ್ಲಿತ್ತು. ಆದರೆ, ಪಕ್ಷದ
ಉಪಾಧ್ಯಕ್ಷ ಸ್ಥಾನಕ್ಕಷ್ಟೇ ಸೀಮಿತಗೊಳಿಸಿತು.
ಮಾಲೀಕಯ್ಯ ಅವರ ಬದಲು ತಮಗೆ ಟಿಕೆಟ್ ನೀಡಬೇಕು ಎಂದು ಅವರ ಸಹೋದರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ ಅವರು ಪರೋಕ್ಷವಾಗಿ ಬೇಡಿಕೆ ಇಟ್ಟಿದ್ದಾರೆ. ಮತ್ತೊಂದೆಡೆ ಹಾಲಿ ಶಾಸಕ ಎಂ.ವೈ. ಪಾಟೀಲ ಅವರ ಪುತ್ರರಾದ ಅರುಣಕುಮಾರ ಪಾಟೀಲ ಹಾಗೂ ಸಂಜು ಪಾಟೀಲ ಅವರು ತಮಗೇ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಇದು ದಾಯಾದಿಗಳ ಕಲಹಕ್ಕೂ ಕಾರಣವಾಗಿದ್ದು, ಎಂ.ವೈ. ಪಾಟೀಲ ಅವರ ಸಹೋದರ, ಪ್ರಥಮ ದರ್ಜೆ ಗುತ್ತಿಗೆದಾರ ಎಸ್.ವೈ. ಪಾಟೀಲ ಅವರ ಪುತ್ರ ಅಮರ್ ಪಾಟೀಲ ಸಹ ತಮಗೇ ಟಿಕೆಟ್ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ, ಒಂದೇ ಕುಟುಂಬದಲ್ಲಿ ಶಾಸಕ ಪಾಟೀಲ ಸೇರಿದಂತೆ ಮೂವರು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ.
ಮತ್ತೊಂದೆಡೆ ಕುರುಬ ಸಮಾಜದ ಮುಖಂಡ ಜೆ.ಎಂ. ಕೊರಬು ಅವರೂ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಬಿಜೆಪಿಗಿಂತ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಪೈಪೋಟಿ ತೀವ್ರವಾಗಿದ್ದು, ಕಾಂಗ್ರೆಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಎಂ.ವೈ. ಪಾಟೀಲ ಅವರು ಯುವಕರಿಗೆ ಟಿಕೆಟ್ ನೀಡಿ ಎಂದು ಹೈಕಮಾಂಡ್‌ಗೆ ಮನವಿ ಮಾಡಿದ್ದಾರಾದರೂ ಹೈಕಮಾಂಡ್ ಸೂಚಿಸಿದರೆ ತಾವೇ
ಮತ್ತೊಮ್ಮೆ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ. ಹಾಲಿ ಶಾಸಕರಿಗೆ ಮತ್ತೆ ಟಿಕೆಟ್ ನೀಡಲಾಗುವುದು ಎಂದು ಪಕ್ಷದ ನಾಯಕರು ಘೋಷಿಸಿದ್ದರಿಂದ ಬಹುತೇಕ ಎಂ.ವೈ.ಪಾಟೀಲ ಅವರೇ ಕಣಕ್ಕಿಳಿಯುವ ಸಾಧ್ಯತೆಗಳು ದಟ್ಟವಾಗಿವೆ.
ಜೆಡಿಎಸ್ ಅಭ್ಯರ್ಥಿ ಘೋಷಣೆ: ಅಫಜಲಪುರ ಕ್ಷೇತ್ರದಲ್ಲಿ ಹೆಚ್ಚಾಗಿರುವ ಕೋಲಿ ಸಮುದಾಯಕ್ಕೆ ಸೇರಿದ ಶಿವಕುಮಾರ್ ನಾಟೀಕಾರ
ಅವರನ್ನು ಜೆಡಿಎಸ್ ಈ ಬಾರಿ ಕಣಕ್ಕಿಳಿಸಲಿದ್ದು, ಈಗಾಗಲೇ ಪಾದಯಾತ್ರೆ, ಪಂಚರತ್ನ ಯಾತ್ರೆ ಮೂಲಕ ಪ್ರತಿ ಗ್ರಾಮಗಳನ್ನು ನಾಟೀಕಾರ ತಲುಪುತ್ತಿದ್ದಾರೆ. ಇತ್ತೀಚೆಗೆ ಪಕ್ಷದ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿ ಸಂಚರಿಸಿ
ತಮ್ಮ ಅಭ್ಯರ್ಥಿಗೆ ಬಲ ತುಂಬಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಇನ್ನಷ್ಟೇ ಶುರುವಾಗಬೇಕಿದೆ.
ಕುತೂಹಲ ಮೂಡಿಸಿದ ಆರ್.ಡಿ.ಪಾಟೀಲ ನಡೆ
ಪಿಎಸ್‌ಐ ಹಗರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರೂ ವಿಚಾರಣೆಗೆ ಹಾಜರಾಗದೇ ಪೊಲೀಸರಿಂದ ತಪ್ಪಿಸಿಕೊಂಡು ಹೋಗಿದ್ದಕ್ಕಾಗಿ ಮತ್ತೆ ಜೈಲು ಸೇರಿರುವ ಆರ್.ಡಿ. ಪಾಟೀಲ ಕ್ಷೇತ್ರದ ಜನತೆ ಬಯಸಿದರೆ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮತ್ತೊಂದೆಡೆ ಕಲಬುರಗಿ, ಬೆಂಗಳೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸಿಐಡಿ ಅಧಿಕಾರಿಗಳು ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಕೋರಿಕೆ ಸಲ್ಲಿಸಿದ್ದಾರೆ. ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಸಹ ಆರ್.ಡಿ. ಪಾಟೀಲ ಬೆನ್ನು ಬಿದ್ದಿದ್ದಾರೆ. ಹೀಗಾಗಿ, ಚುನಾವಣಾ ಕಣಕ್ಕಿಳಿಯುತ್ತಾರೋ, ಇಲ್ಲವೋ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಲಿಂಗಾಯತ, ಕೋಲಿ ಸಮಾಜ ನಿರ್ಣಾಯಕ
ಅಫಜಲಪುರ ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ಕೋಲಿ ಸಮಾಜವು ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿದೆ. ಆದಿ, ದೀಕ್ಷ ಪಂಚಮಸಾಲಿ ಸೇರಿದಂತೆ ಲಿಂಗಾಯತ ಸಮುದಾಯದ ಎಲ್ಲ ಉಪಪಂಗಡಗಳು ಸೇರಿ 65 ಸಾವಿರ ಮತದಾರರಿದ್ದರೆ, ಕೋಲಿ ಸಮಾಜದ 36 ಸಾವಿರ ಮತದಾರರಿದ್ದಾರೆ. ಮುಸ್ಲಿಂ ಸಮುದಾಯದ 34 ಸಾವಿರ, ಕುರುಬ ಸಮಾಜದ 22 ಸಾವಿರಕ್ಕೂ ಅಧಿಕ ಮತದಾರರಿದ್ದಾರೆ.
ಕೋಲಿ ಸಮಾಜದ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ದೇವಲಗಾಣಗಾಪುರದಲ್ಲಿ ಇತ್ತೀಚೆಗೆ ನಡೆದ ಕೋಲಿ ಸಮಾಜದ ಮುಖಂಡ ದಿ. ವಿಠ್ಠಲ ಹೇರೂರ ಅವರ ಪ್ರತಿಮೆ ಅನಾವರಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರೆಸಿಕೊಂಡಿತ್ತು.
ಮತದಾರರ ವಿವರ
1,15,002
ಪುರುಷರು
1,08,801
ಮಹಿಳೆಯರು
2,23,803
ಒಟ್ಟು ಮತದಾರರು
**
2018ರ ಫಲಿತಾಂಶ
ಅಭ್ಯರ್ಥಿ; ಪಕ್ಷ; ಪಡೆದ ಮತಗಳು
ಎಂ.ವೈ. ಪಾಟೀಲ; ಕಾಂಗ್ರೆಸ್; 71,735
ಮಾಲೀಕಯ್ಯ ಗುತ್ತೇದಾರ; ಬಿಜೆಪಿ; 61,141
ರಾಜೇಂದ್ರಗೌಡ ಪಾಟೀಲ; ಜೆಡಿಎಸ್; 13,340
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.