ಮಂಗಳವಾರ, ಮೇ 17, 2022
29 °C
ಲೋಕಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನೆಗೆ ಆರೋಗ್ಯ ಖಾತೆ ರಾಜ್ಯ ಸಚಿವ ಚೌಬೆ ಉತ್ತರ

ಕಲಬುರ್ಗಿಯ ಕೈತಪ್ಪಿದ ಏಮ್ಸ್ ಹುಬ್ಬಳ್ಳಿಗೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕಲಬುರ್ಗಿಯಲ್ಲಿ ಸ್ಥಾಪನೆಯಾಗಬೇಕಿದ್ದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯು ಹುಬ್ಬಳ್ಳಿ– ಧಾರವಾಡ ಪಾಲಾಗಲಿದ್ದು, ಧಾರವಾಡ ಸಂಸದರೂ ಆಗಿರುವ ಕೇಂದ್ರ ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅಲ್ಲಿನ ಜನತೆಗೆ ಭರವಸೆ ಕೊಟ್ಟಂತೆ ಏಮ್ಸ್ ಆರಂಭಕ್ಕೆ ಭೂಮಿಕೆ ಸಿದ್ಧಪಡಿಸಿದ್ದಾರೆ.

ಹಿಂದಿನ ಯುಪಿಎ ಸರ್ಕಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಮಿಕ ಸಚಿವರಾಗಿದ್ದಾಗ ನಗರದಲ್ಲಿ ₹ 1380 ಕೋಟಿ ವೆಚ್ಚದಲ್ಲಿ ಇಎಸ್‌ಐ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ನಿರ್ಮಿಸಲಾಗಿದೆ. ಭವಿಷ್ಯದ ದಿನಗಳಲ್ಲಿ ಇದನ್ನೇ ಏಮ್ಸ್ ಸಂಸ್ಥೆಯನ್ನಾಗಿ ಮೇಲ್ದರ್ಜೆಗೇರಿಸುವ ಆಶಯವನ್ನೂ ಖರ್ಗೆ ವ್ಯಕ್ತಪಡಿಸಿದ್ದರು.

‘ಕಳೆದ ಚುನಾವಣೆಯಲ್ಲಿ ಖರ್ಗೆ ಪರಾಭವಗೊಂಡ ಬಳಿಕ ಕಲಬುರ್ಗಿಗೆ ಏಮ್ಸ್ ಸಂಸ್ಥೆಯನ್ನು ತರುವ ಪ್ರಯತ್ನಕ್ಕೂ ಭಾರಿ ಹಿನ್ನಡೆಯಾಯಿತು. ಇದನ್ನೇ ಬಂಡವಾಳ ಮಾಡಿಕೊಂಡು ಹುಬ್ಬಳ್ಳಿ– ಧಾರವಾಡಕ್ಕೆ ಏಮ್ಸ್ ಸಂಸ್ಥೆಯನ್ನು ಕೊಂಡೊಯ್ಯಲು ಜೋಶಿ ಅವರು ಯತ್ನಿಸಿದ್ದಾರೆ’ ಎಂಬ ಆರೋಪವನ್ನು ಜಿಲ್ಲೆಯ ಸಾಮಾಜಿಕ ಹೋರಾಟಗಾರರು ಮಾಡುತ್ತಿದ್ದಾರೆ. 

ಕರ್ನಾಟಕದಲ್ಲಿ ಏಮ್ಸ್ ಆರಂಭಿಸುವ ಉದ್ದೇಶವಿದೆಯೇ ಎಂಬ ಸಂಸದೆ ಶೋಭಾ ಕರಂದ್ಲಾಜೆ ಅವರ ಪ್ರಶ್ನೆಗೆ, ಫೆಬ್ರುವರಿ 5ರಂದು ಲೋಕಸಭೆಗೆ ಲಿಖಿತ ಉತ್ತರ ನೀಡಿರುವ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿಕುಮಾರ್ ಚೌಬೆ ಅವರು, ‘ಕರ್ನಾಟಕ ಸರ್ಕಾರ ಹುಬ್ಬಳ್ಳಿ– ಧಾರವಾಡ ಅವಳಿ ನಗರದಲ್ಲಿ ಏಮ್ಸ್ ಆರಂಭಿಸಲು ಜಾಗವನ್ನು ಮೀಸಲಿಟ್ಟಿರುವುದಾಗಿ ತಿಳಿಸಿದೆ. ಕೇಂದ್ರ ತಂಡ ಸ್ಥಳ ಪರಿಶೀಲನೆಯನ್ನೂ ನಡೆಸಿದೆ’ ಎಂದು ತಿಳಿಸಿದ್ದಾರೆ. ‘ಇದಕ್ಕೂ ಮುನ್ನ ರಾಜ್ಯ ಸರ್ಕಾರ ಕಲಬುರ್ಗಿಯ ಇಎಸ್‌ಐ ಆಸ್ಪತ್ರೆಯನ್ನು ಏಮ್ಸ್‌ ಸಂಸ್ಥೆಯನ್ನಾಗಿ ಮೇಲ್ದರ್ಜೆಗೇರಿಸಲು ಮನವಿ ಮಾಡಿತ್ತು. ಆದರೆ, ನಮ್ಮ ಇಲಾಖೆ ಆ ಪ್ರಸ್ತಾವ ಒಪ್ಪಿಲ್ಲ’ ಎಂದು ಸಚಿವರು ಉತ್ತರಿಸಿದ್ದಾರೆ.

ಕೇಂದ್ರ ಸರ್ಕಾರದ ಈ ನಿರ್ಧಾರ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಎಚ್‌ಕೆಸಿಸಿಐ ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ, ‘ಏಮ್ಸ್ ಆರಂಭಕ್ಕೆ ಅಗತ್ಯವಾದ ಎಲ್ಲ ಸೌಕರ್ಯಗಳು ಕಲಬುರ್ಗಿಯ ಇಎಸ್‌ಐ ಆಸ್ಪತ್ರೆಯಲ್ಲಿವೆ. ಆದರೆ, ಹುಬ್ಬಳ್ಳಿಯಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಮಾಡಬೇಕು. ಇಷ್ಟಾಗಿಯೂ ಏಮ್ಸ್ ಸಂಸ್ಥೆಯನ್ನು ಹುಬ್ಬಳ್ಳಿಯಲ್ಲಿ ಆರಂಭಿಸಲು ಯತ್ನಿಸುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕ್ರಮ ಕಲ್ಯಾಣ ಕರ್ನಾಟಕ ವಿರೋಧಿ’ ಎಂದಿದ್ದಾರೆ.

‘ಕಲಬುರ್ಗಿಗೆ ಮಂಜೂರಾಗಿದ್ದ ಐಐಐಟಿ, ರಾಯಚೂರಿಗೆ ಬರಬೇಕಿದ್ದ ಐಐಟಿಯನ್ನು ಪ್ರಲ್ಹಾದ‌ ಜೋಶಿ ಅವರು ಧಾರವಾಡ ಜಿಲ್ಲೆಗೆ ಮಂಜೂರು ಮಾಡಿಸಿಕೊಂಡರು. ಇದೀಗ ಏಮ್ಸ್ ಸಂಸ್ಥೆಯೂ ಅತ್ತಕಡೆ ಹೋಗುತ್ತಿದೆ. ಹಾಗಿದ್ದರೆ ಕಲ್ಯಾಣ ಕರ್ನಾಟಕದವರೇನು ಕುಂತಿಯ ಮಕ್ಕಳೇ’ ಎಂದು ಪ್ರಶ್ನಿಸುತ್ತಾರೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿಯ ಮುಖಂಡ ಸುನೀಲ ಕುಲಕರ್ಣಿ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಸಂಸದ ಡಾ.ಉಮೇಶ ಜಾಧವ ಅವರನ್ನು ಸಂಪರ್ಕಿಸಿದಾಗ ಅವರು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ಏಮ್ಸ್‌ಗೆ 200 ಎಕರೆ ಭೂಮಿ
ಹುಬ್ಬಳ್ಳಿ:
ಹುಬ್ಬಳ್ಳಿ–ಧಾರವಾಡ ನಗರದ ಜನತೆಗೆ ಅನುಕೂಲವಾಗುವಂತಹ 200 ಎಕರೆ ಭೂಮಿಯನ್ನು ‘ಏಮ್ಸ್‌’ ನಿರ್ಮಾಣಕ್ಕಾಗಿ ಗುರುತಿಸಲಾಗಿದೆ.

ಎಲ್ಲರಿಗೂ ಅನುಕೂಲಕರವಾಗಿದೆ. ಈಗಾಗಲೇ ಕೇಂದ್ರದ ಅಧಿಕಾರಿಗಳ ತಂಡವೂ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು