ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶ ಸುಧಾರಣೆಗೆ ‘ಅಕ್ಷರ ಆವಿಷ್ಕಾರ ಮಿಷನ್‌’

ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾಯೋಗಿಕ ತರಬೇತಿ ಆರಂಭಿಸಿದ ಶಾಸಕ ಡಾ.ಅಜಯಸಿಂಗ್‌
Last Updated 12 ಫೆಬ್ರುವರಿ 2021, 3:12 IST
ಅಕ್ಷರ ಗಾತ್ರ

ಕಲಬುರ್ಗಿ: ‘ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ 100ರಷ್ಟು ಸಾಧನೆ ಮಾಡುವ ಉದ್ದೇಶದಿಂದ ‘ಅಕ್ಷರ ಆವಿಷ್ಕಾರ ಮಿಷನ್‌–100’ ಎಂಬ ವಿನೂತನ ಯೋಜನೆ ಪ್ರಯೋಗಿಸಲಾಗುತ್ತಿದೆ’ ಎಂದು ವಿಧಾನ ಸಭೆಯ ವಿರೋಧ ಪಕ್ಷದ ಮುಖ್ಯಸಚೇತಕ, ಶಾಸಕ ಡಾ.ಅಜಯಸಿಂಗ್‌ ತಿಳಿಸಿದರು.

‘ನಿಧಾನ ಗತಿಯಲ್ಲಿ ಕಲಿಯುವ ಮಕ್ಕಳಿಗೆ ಹೆಚ್ಚು ಆದ್ಯತೆ ನೀಡುವ ಮೂಲಕ ಅವರನ್ನೂ ಸುಧಾರಿತ ಫಲಿತಾಂಶ ಪಡೆಯುವಂತೆ ಮಾಡುವುದು ಇದರ ಉದ್ದೇಶ. ಪ್ರತಿ ವರ್ಷ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳು 25ರಿಂದ 30 ಸ್ಥಾನಗಳಲ್ಲೇ ಬರುತ್ತಿವೆ. ಇದನ್ನು ಸುಧಾರಣೆ ಮಾಡಲು ಗಂಭೀರ ಪ್ರಯತ್ನ ನಡೆಯಬೇಕಿದೆ. ಮುಂದಡಿಯಾಗಿ ಜೇವರ್ಗಿ ವಿಧಾನಸಭಾ ಕ್ಷೇತ್ರದ ಶಾಲೆಗಳಲ್ಲಿ ಈ ವಿನೂತನ ಮಿಷನ್‌ ಪ್ರಯೋಗ ಮಾಡಿ, ನಂತರದ ದಿನಗಳಲ್ಲಿ ಜಿಲ್ಲೆ ಹಾಗೂ ನೆರೆ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಅಕ್ಷರ ಆವಿಷ್ಕಾರ ಮಿಷನ್‌ ಅನ್ನು ನಿವೃತ್ತ ಪ್ರಾಧ್ಯಾಪಕ, ಬೆಂಗಳೂರಿನ ನಾಗರಾಜಯ್ಯ ಅವರ ಪ್ರಯೋಗಿಸುದ್ದಾರೆ. ಈಗಾಗಲೇ ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಇದರ ಪ್ರಯೋಗ ಯಶಸ್ವಿಯಾಗಿದೆ. ಫಲಿತಾಂಶದಲ್ಲಿ 20ನೇ ಸ್ಥಾನದಲ್ಲಿದ್ದ ಚಿಕ್ಕಬಳ್ಳಾಪುರ ಜಿಲ್ಲೆ 2ನೇ ಸ್ಥಾನಕ್ಕೆ, ಮರು ವರ್ಷ 1ನೇ ಸ್ಥಾನಕ್ಕೆ ಏರಿದೆ. 14 ಸ್ಥಾನಕ್ಕಿಂತ ಹಿಂದೆ ಇರುತ್ತಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ 3ನೇ ಸ್ಥಾನಕ್ಕೆ ಬಂದಿವೆ. ಇದನ್ನು ಗಮನಿಸಿಯೇ ಕಲಬುರ್ಗಿ ಜಿಲ್ಲೆಯಲ್ಲಿಯೂ ಇಂಥದ್ದೇ ಪ್ರಯೋಗದ ಮೂಲಕ ಫಲಿತಾಂಶ ಸುಧಾರಣೆ ಮಾಡಬೇಕು ಎಂಬುದು ನನ್ನ ಉದ್ದೇಶ. ಕಳೆದ ವರ್ಷ ಜೇವರ್ಗಿ ತಾಲ್ಲೂಕು ಶೇ 81.87ರಷ್ಟು ಫಲಿತಾಂಶ ಪಡೆದಿದೆ. ಇದು ಕೂಡ ಸುಧಾರಿತ ಫಲಿತಾಂಶ. ಆದರೂ ಶೇ 100ರಷ್ಟು ಪಡೆಯಲು ಯತ್ನಿಸಲಾಗುವುದು’ ಎಂದರು.

‘ಶಿಕ್ಷಣ ಇಲಾಖೆ ಹಾಗೂ ಧರ್ಮಸಿಂಗ್‌ ಫೌಂಡೇಷನ್‌ ಆಶ್ರಯದಲ್ಲಿ ಇದನ್ನು ಈಗಾಗಲೇ ಅನುಷ್ಠಾನ ಮಾಡಿದ್ದೇನೆ. ಈ ಹಿಂದೆ ಆರೋಗ್ಯ ಕ್ಷೇತ್ರ, ಸಮಾಜ ಸೇವೆ, ಗ್ರಾಮ ಸುಧಾರಣೆಯಂಥ ಕೆಲಸಗಳನ್ನು ಈ ಫೌಂಡೇಷನ್‌ ಮಾಡಿಕೊಂಡು ಬಂದಿದೆ. ಈ ಬಾರಿ ಶೈಕ್ಷಣಿಕ ಕ್ಷೇತ್ರಕ್ಕೆ ಆದ್ಯತೆ ನೀಡಿದ್ದೇನೆ. ಜಿಲ್ಲೆಯಾದ್ಯಂತ ಈ ಸುಧಾರಣೆ ಒಂದೇ ವರ್ಷಕ್ಕೆ ಆಗುವುದಲ್ಲ. 3ರಿಂದ 5 ವರ್ಷ ಹಿಡಿಯುತ್ತದೆ. ಈ ಭಾಗದ ಎಲ್ಲ ಜಿಲ್ಲೆಗಳ ಫಲಿತಾಂಶ ಮೊದಲ 10 ಸ್ಥಾನಗಳಲ್ಲಿ ಬರುವವರೆಗೂ ಶ್ರಮಿಸುತ್ತೇನೆ’ ಎಂದರು. ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಅಲ್ಲಮಪ್ರಭು ಪಾಟೀಲ, ಶರಣಕುಮಾರ ಮೋದಿ ಇದ್ದರು.

box

ಕಲಬುರ್ಗಿ: ‘ಈಗಾಗಲೇ ಜೇವರ್ಗಿ ತಾಲ್ಲೂಕಿನ ಶಿಕ್ಷಕರು ಹಾಗೂ ಮುಖ್ಯಶಿಕ್ಷಕರ ಸಭೆ ನಡೆಸಿ ಮಾಹಿತಿ ಪಡೆದಿದ್ದೇನೆ. ಶಿಕ್ಷಕರ ಪ್ರತಿಕ್ರಿಯೆಗಳು, ಆಸಕ್ತಿ ಕಂಡು ನನಗೂ ಹುಮ್ಮಸ್ಸು ಬಂದಿದೆ. ಹಿಂದುಳಿದ ಭಾಗ ಎಂದು ಹೇಳಿಕೊಂಡು ಬಂದಿದ್ದರೂ ಈ ಭಾಗದ ಶಿಕ್ಷಕರಲ್ಲಿ ಅಗಾಧವಾದ ಸಾಮರ್ಥ್ಯ ಹಾಗೂ ಉತ್ಸಾಹ ಇದೆ. ಆದರೆ, ನಿರ್ದಿಷ್ಟ ತರಬೇತಿ ಬೇಕು. ಅದನ್ನು ಅಕ್ಷರ ಆವಿಷ್ಕಾರ ಮಿಷನ್‌–100 ಅಡಿ ಪ್ರಯೋಗಿಸುತ್ತಿದ್ದೇನೆ’ ಎಂದು ಮಿಷನ್‌ನ ರೂವಾರಿ ಪ್ರೊ. ಆರ್‌. ನಾಗರಾಜಯ್ಯ ಹೇಳಿದರು.

‘ತರಗತಿಯ ಮಕ್ಕಳಲ್ಲಿ ಮೂರು ಕೆಟಗರಿ ಮಾಡುತ್ತೇವೆ. ವೇಗವಾಗಿ ಕಲಿಯುವವರು, ಮಧ್ಯಮ ಹಾಗೂ ನಿಧಾನ ಗ್ರಹಿಕೆ ಇರುವವರು. ಸಹಜವಾಗಿ ಎಲ್ಲ ಶಿಕ್ಷಕರಿಗೂ ಮೊದಲ ಎರಡು ವರ್ಗಗಳು ಆಪ್ತವಾಗಿರುತ್ತವೆ. ನಿಧನವಾಗಿ ಕಲಿಯುವ ಮಕ್ಕಳನ್ನು ನಿರ್ಲಕ್ಷ್ಯ ಮಾಡಿದ ಪರಿಣಾಮವೇ ಒಟ್ಟಾರೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಅಕ್ಷರ ಆವಿಷ್ಕಾರ ಮಿಷನ್‌ ನಿಧಾನಗತಿಯ ಮಕ್ಕಳಿಗೇ ಹೆಚ್ಚು ಆದ್ಯತೆ ನೀಡಿ, ಅವರಿಂದಲೇ ಉತ್ತಮ ಫಲಿತಾಂಶ ಪಡೆಯುವ ಪ್ರಯತ್ನ ಮಾಡುತ್ತದೆ’ ಎಂದು ಮಾಹಿತಿ ನೀಡಿದರು.

‘ಶಿಕ್ಷಣವನ್ನು ವೈದ್ಯಕೀಯ ವಿಧಾನದಿಂದ ವಿಮರ್ಶೆ ಮಾಡದ ಹೊರತು ನಮಗೆ ನಿಜವಾದ ಕಾರಣ ಗೊತ್ತಾಗುವುದಿಲ್ಲ. ವಿದ್ಯಾರ್ಥಿ ಫೇಲ್‌ ಆದರೆಂದರೆ ಅದು ಶಿಕ್ಷಕರೇ ಫೇಲ್‌ ಆದಂತೆ. ಮಕ್ಕಳಲ್ಲಿ ಆತ್ಮವಿಶ್ವಾಸ, ಮನೋಬಲ ಹೆಚ್ಚಿಸಬೇಕು ಎಂದು ಬೋಧಿಸುತ್ತಲೇ ಇದ್ದೇವೆ. ಆದರೆ, ಅದನ್ನು ಪ್ರಾಯೋಗಿಕ ಮಾಡಬೇಕಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT