ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಮಾಲರ ಬದುಕಿಗೆ ಬೇಕಿದೆ ಬೆಂಬಲ

ಹೆಚ್ಚಳವಾಗದ ಸಂಬಳ; ಕೋವಿಡ್‌ನಲ್ಲೂ ಸಿಗದ ನೆರವು: ಮನೆ ನೀಡುವ ಯೋಜನೆಯೂ ನನೆಗುದಿಗೆ
Last Updated 21 ನವೆಂಬರ್ 2022, 5:28 IST
ಅಕ್ಷರ ಗಾತ್ರ

ಕಲಬುರಗಿ: ತೋಳ್ಬಲವನ್ನೇ ನಂಬಿ ಎಪಿಎಂಸಿ, ಸಿಮೆಂಟ್‌ ಅಂಗಡಿ, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಹಮಾಲಿಗಳ ಬದುಕು ಸುಧಾರಿಸುವ ಬದಲು ದಿನೇ ದಿನೇ ಅಧೋಗತಿಗೆ ಇಳಿಯುತ್ತಿದೆ. ಒಂದು ಕಡೆ ಕೆಲಸ ಕಡಿಮೆ, ಅದರ ಜತೆ ಸಂಬಳವೂ ಕಡಿಮೆ. ಇನ್ನೊಂದೆಡೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ) ಬರುವ ಧಾನ್ಯಗಳ ಪ್ರಮಾಣವೂ ಕಡಿಮೆಯಾಗಿ ಹಮಾಲಿಗಳು ಕಷ್ಟದಲ್ಲಿಯೇ ಜೀವನ ನಡೆಸುವ ಸ್ಥಿತಿ ಇದೆ. ಇನ್ನೂ ಮೂಲ ಸೌಕರ್ಯಗಳ ಕೊರತೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಕಲಬುರಗಿ ಜಿಲ್ಲೆಯ ಎಪಿಎಂಸಿಗಳಲ್ಲಿ ದಶಕಗಳ ಕಾಲ ಬೆವರು ಸುರಿಸುತ್ತಿರುವ ಬೆರಳೆಣಿಕೆಯಷ್ಟು ಹಮಾಲಿಗಳು ಮಾತ್ರ ತಾವು ಗಳಿಸಿದ ಹಣದಲ್ಲಿ ಉಳಿತಾಯ ಮಾಡಿ, ಮನೆ ಕಟ್ಟಿಕೊಂಡು ಸಂಸಾರವನ್ನು ಸರಿದೂಗಿಸಿಕೊಂಡು ಹೋಗಿರಬಹುದು. ಹಲವರು ಸ್ವಂತ ಸೂರು ಕಾಣದೇ, ಬಾಡಿಗೆಯನ್ನೂ ಸಕಾಲಕ್ಕೆ ಭರಿಸಲಾಗದೆ ಬಾಡಿಗೆ ಮನೆಯಲ್ಲೇ ದಿನ ದೂಡುತ್ತಿದ್ದಾರೆ. ‘ಮನೆ’ ಯಾವಾಗ ಸಿಕ್ಕೀತು ಎಂದು ಹಲವರು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಇಳಿವಯಸ್ಸಿನಲ್ಲಿ ಬದುಕು ಸಾಗಿಸಲು ಪಿಂಚಣಿಯಂತಹ ‘ಆಸರೆ’ ಸಿಕ್ಕೀತೆ ಎಂದು ಸರ್ಕಾರದತ್ತ ದೃಷ್ಟಿ ನೆಟ್ಟಿದ್ದಾರೆ.

ಎಪಿಎಂಪಿಸಿಯಲ್ಲಿ 280ಕ್ಕೂ ಹೆಚ್ಚು ದಲ್ಲಾಳಿ ಅಂಗಡಿಗಳಿವೆ. ಸಾಮಾನ್ಯ ದಿನಗಳಲ್ಲಿ 1,250 ಹಮಾಲಿಗಳು ಕೆಲಸ ಮಾಡುತ್ತಾರೆ. ಇದರಲ್ಲಿ 350 ಮಂದಿ ನೋಂದಾಯಿತ ಹಮಾಲಿಗಳು ಇದ್ದಾರೆ. ಉಳಿದವರು ದಿನ ದುಡಿದು, ಹೊಟ್ಟೆ ತುಂಬಿಸಿಕೊಳ್ಳುವವರು. ತೊಗರಿ, ಜೋಳ, ಶೇಂಗಾ, ಈರುಳ್ಳಿ, ಭತ್ತ ಹಾಗೂ ಮೆಕ್ಕೆಜೋಳದ ಸುಗ್ಗಿಯ ಅವಧಿಯಲ್ಲಿ 2,000ರಿಂದ 2,500 ಹಮಾಲಿಗಳು ಕೆಲಸಕ್ಕೆ ಬರುತ್ತಾರೆ. ಬಿಸಿಲು–ಮಳೆ–ಚಳಿ ಎನ್ನದೇ ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಕೆಲಸ ಮಾಡುವ ಹಮಾಲಿಗಳಿಗೆ ಎಪಿಎಂಸಿಯೇ ಬದುಕಿಗೆ ಆಸರೆಯಾಗಿದೆ.

ಬೆಲೆ ಏರಿಕೆ ಬಿಸಿ: ‘ಹದಿನೈದು ವರ್ಷಗಳ ಹಿಂದೆ ದಿನಕ್ಕೆ ₹100 ದುಡಿದರೂ ಸಾಕಾಗುತ್ತಿತ್ತು. ಈಗ ₹ 500 ಗಳಿಸಿದರೂ ಉಳಿತಾಯ ಮಾಡಲು ಆಗುತ್ತಿಲ್ಲ. ₹ 10ಕ್ಕೆ ಸಿಗುತ್ತಿದ್ದ ಉಪಾಹಾರ ಈಗ ₹ 100ರ ಗಡಿ ದಾಟಿದೆ. ₹ 10ಕ್ಕೆ ಊಟ ಮಾಡುತ್ತಿದ್ದೆವು. ಈಗ ₹ 100 ಖರ್ಚಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದರಿಂದ ದುಡಿದದ್ದು ಸಾಕಾಗುತ್ತಿಲ್ಲ’ ಎಂದು ಹಮಾಲಿ ಶಂಕರಪ್ಪ ಅವರು ಅಳಲು ತೋಡಿಕೊಂಡರು.

ಜೇವರ್ಗಿ ಮೂಲದವರಾದ ಹನುಮಂತಪ್ಪ ಊರು ಬಿಟ್ಟು ಕಲಬುರಗಿ ನಗರಕ್ಕೆ ಬಂದು 35 ವರ್ಷಗಳಿಂದ ಎಪಿಎಂಸಿಯಲ್ಲಿ ಹಮಾಲಿ ಮಾಡಿ ಬದುಕು ಸಾಗಿಸುತ್ತಿದ್ದಾರೆ.

‘ತೊಗರಿ, ಶೇಂಗಾ, ಈರುಳ್ಳಿ, ಜೋಳ, ರಾಗಿ ಸುಗ್ಗಿಯ ಸಮಯದಲ್ಲಿ ಮಾರ್ಕೆಟ್‌ಗೆ ನಿರಂತರವಾಗಿ ಉತ್ಪನ್ನಗಳು ಬಂದರೆ ದಿನಕ್ಕೆ ₹ 1,000ವರೆಗೂ ಕೂಲಿ ಸಿಗುತ್ತದೆ. ಆಫ್‌ ಸೀಸನ್‌ನಲ್ಲಿ ಕೆಲ ದಿನ ಕೆಲಸವೇ ಇರುವುದಿಲ್ಲ. ತಿಂಗಳಿಗೆ ಸರಾಸರಿ ₹ 15,000 ಗಳಿಸಿದರೆ ಹೆಚ್ಚು’ ಎನ್ನುತ್ತಾರೆ ರಾಮಪ್ಪ ಪಟೇಲ್.

‘ಮೊದಲು 100 ಕೆ.ಜಿ ತೂಕದ ಚೀಲ ಬರುತ್ತಿತ್ತು. ಈಗ 50 ಕೆ.ಜಿ ಚೀಲ ಬರುತ್ತಿದೆ. ಈಗಿನ ಯುವಕರು ತಂಬಾಕು, ಗುಟ್ಕಾ, ಕುಡಿತದ ಚಟಕ್ಕೆ ಬಿದ್ದು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ವಯಸ್ಸಾಗಿರುವ ನಮ್ಮಷ್ಟು ತೂಕವನ್ನೂ ಈಗಿನ ಹುಡುಗರು ಎತ್ತುವುದಿಲ್ಲ’ ಎಂದು ವಿಷಾದದಿಂದಲೇ ನಗೆ ಬೀರಿದರು ಸೋಮಪ್ಪ ಪಾಟೀಲ.

ಎಲ್ಲರಿಗೂ ಮನೆ ಕೊಡಲಿ: ‘ಎಸ್‌ಸಿ–ಎಸ್‌ಟಿ ಹಮಾಲರ ಸಲುವಾಗಿ ಮನೆ ನಿರ್ಮಿಸಲಾಗಿದೆ. ಇಲ್ಲಿ ಕೆಲಸಕ್ಕೆ ಬರುವ ಎಲ್ಲರೂ ಬಡವರೇ ಆಗಿದ್ದಾರೆ. ಹೀಗಾಗಿ ಎಲ್ಲಾ ವರ್ಗದವರಿಗೂ ಮನೆ ನಿರ್ಮಿಸಿಕೊಡಬೇಕು. ಮಕ್ಕಳ ಶಿಕ್ಷಣಕ್ಕೆ ಈ ಹಿಂದೆ ನೀಡುತ್ತಿದ್ದ ಸಹಾಯಧನವನ್ನು ಪುನರಾರಂಭಿಸಬೇಕು’ ಎಂಬುವುದು ಎಪಿಎಂಸಿ ಹಮಾಲರ ಸಂಘದ ಜಿಲ್ಲಾ ಅಧ್ಯಕ್ಷ ಮೌಲಾಲ ಡಿಗ್ಗಿ ಅವರ ಒತ್ತಾಯ.

ಕೋವಿಡ್‌ ಅವಧಿಗಿಂತಲೂ ಈಗ ಹಮಾಲಿಗಳ ಪರಿಸ್ಥಿತಿ ಶೋಚನೀಯವಾಗಿದೆ. ನಿತ್ಯವೂ ಕೆಲಸಕ್ಕೆ ಆಗಮಿಸಿ ಅಂಗಡಿ ಮುಂದೆ ಕುಳಿತು ಕೆಲಸ ಇಲ್ಲದೇ ಖಾಲಿ ಕೈಯಲ್ಲಿ ತೆರಳುತ್ತಿದ್ದಾರೆ. ಕೋವಿಡ್‌ಗೂ ಮುನ್ನ ಕೆಲಸ ಇತ್ತು. ಈಗ ಸಿಕ್ಕಸಿಕ್ಕಲ್ಲಿ ಮಾರುಕಟ್ಟೆ ಆಗಿದೆ. 105ಕ್ಕೂ ಅಧಿಕ ಹಮಾಲಿಗಳಿಗೆ ಕೆಲಸ ಇಲ್ಲದಂತಾಗಿದೆ. ಕೋವಿಡ್‌ ಮುನ್ನ ಹಾಗೂ ನಂತರ ಯಾವುದೇ ರೀತಿಯಲ್ಲಿ ಬದಲಾವಣೆಯಾಗಿಲ್ಲ ಎನ್ನುತ್ತಾರೆ ಸೇಡಂನ ವರ್ತಕರ ಸಂಘದ ಅಧ್ಯಕ್ಷ ಶಿವಕುಮಾರ ಬೋಳಶೆಟ್ಟಿ.

ಎಪಿಎಂಸಿ ಮತ್ತು ಇತರೆ ಹಮಾಲರನ್ನು ಕಾರ್ಮಿಕ ಕಾಯ್ದೆಗೆ ಒಳಪಡಿಸಿ ನಿವೃತ್ತಿ ವೇತನ, ಆಸ್ಪತ್ರೆ ಸೌಲಭ್ಯ, ವಿಮಾ ಯೋಜನೆ, ಲೈಸನ್ಸ್ ಸೇರಿದಂತೆ ಎಲ್ಲ ರೀತಿಯ ನ್ಯಾಯಬದ್ದ ಸೌಕರ್ಯ ಒದಗಿಸಬೇಕು. ಹಮಾಲರ ಸ್ವಾಭಾವಿಕ ಮರಣಕ್ಕೆ ₹5 ಲಕ್ಷ, ಅಪಘಾತದಿಂದ ಮರಣ ಹೊಂದಿದರೆ ₹10 ಲಕ್ಷ, ಕೈ ಕಾಲು ಕಳೆದುಕೊಂಡರೆ ₹10 ಲಕ್ಷ ಪರಿಹಾರ ನೀಡಬೇಕು. ನಿವೇಶನ ನೀಡಿ ವಸತಿ ಸೌಲಭ್ಯ ಕಲ್ಪಿಸಬೇಕು. ಕಾರ್ಮಿಕರ ಮಕ್ಕಳ ವಿವಾಹಕ್ಕೆ ₹50 ಸಾವಿರ ಸಹಾಯಧನ ಕೊಡಬೇಕು ಎಂಬ ಬೇಡಿಕೆ ಇವರದು. ಆಡಳಿತಗಳು ಈ ಕುರಿತು ಮನಸ್ಸು ಮಾಡಿ ಇವರ ಶ್ರಮಕ್ಕೆ ಬಲ ತುಂಬುವ ಕೆಲಸ ಆಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT