ಕಲಬುರಗಿ: ‘ಬಸವಣ್ಣನವರನ್ನು ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕನಾಗಿ ಘೋಷಿಸಿರುವುದು ಸಂತೋಷ. ಆದರೆ, ಪಠ್ಯದಲ್ಲೂ ಬಸವಣ್ಣ ಬರಬೇಕು. ಅದನ್ನು ಮಾಡುವುದು ಸರ್ಕಾರದ ಕರ್ತವ್ಯ’ ಎಂದು ಲಿಂಗಾಯತ ಪೀಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಪ್ರತಿಪಾದಿಸಿದರು.

ನಗರದ ಬಸವರಾಜಪ್ಪ ಅಪ್ಪ ಸೆಂಟೆನರಿ ಸಭಾಂಗಣದಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಆಯೋಜಿಸಿದ್ದ ಬಸವ ಸಂಸ್ಕೃತಿ ಅಭಿಯಾನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪಠ್ಯವೆಂದರೆ ಬರೀ ಒಂದು ಪಾಠದಲ್ಲಿ ಬಸವಣ್ಣ ಬರುವುದಲ್ಲ. ಬಸವಣ್ಣ ಅರ್ಥಶಾಸ್ತ್ರಜ್ಞ, ಸಮಾಜಶಾಸ್ತ್ರಜ್ಞ, ನೀತಿಶಾಸ್ತ್ರಜ್ಞನೂ ಹೌದು. ಹೀಗಾಗಿ ಸರ್ಕಾರ ಸಮಿತಿಯೊಂದನ್ನು ರಚಿಸಿ, ಅರ್ಥಶಾಸ್ತ್ರ, ನೀತಿಶಾಸ್ತ್ರ, ಸಮಾಜಶಾಸ್ತ್ರ ಸೇರಿದಂತೆ ವಿವಿಧ ವಿಷಯಗಳಲ್ಲಿ ಬಸವಣ್ಣನವರನ್ನು ಸೇರಿಸಿದರೆ, ಆಗ ಬಸವಣ್ಣನವರಿಗೆ ನಿಜವಾದ ಸಾಂಸ್ಕೃತಿಕ ನಾಯಕ ಗೌರವ ಕೊಟ್ಟಂತಾಗುತ್ತದೆ’ ಎಂದು ಪ್ರತಿಪಾದಿಸಿದರು.

‘ಸರ್ಕಾರ ಬಸವಕಲ್ಯಾಣದಲ್ಲಿ ₹600 ಕೋಟಿ ವೆಚ್ಚದಲ್ಲಿ ಭವ್ಯ ಅನುಭವ ಮಂಟಪ ನಿರ್ಮಿಸುತ್ತಿದೆ. ಅದು ಬರೀ ಸ್ಥಾವರ. ಅದಕ್ಕೆ ಜೀವಂತಿಕೆ ಬರಬೇಕಾದರೆ, ಜಂಗಮತ್ವ ಲಭಿಸಬೇಕಾದರೆ, ಆ ನೆಲದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ವಚನ ವಿವಿ ಸ್ಥಾಪನೆಯಿಂದ ಸಾಂಸ್ಕೃತಿಕ ನಾಯಕ ಬಸವಣ್ಣನಿಗೆ ಒಂದು ಕಿರೀಟ ಇಟ್ಟಂತಾಗುತ್ತದೆ’ ಎಂದು ಬಣ್ಣಿಸಿದರು.

‘ಬಸವಣ್ಣನವರ ತತ್ವ ಸತ್ಯದ ಖಡ್ಗ. ಅವರದು ಸತ್ಯದ ಮಾರ್ಗ. ಸತ್ಯದ ಖಡ್ಗವನ್ನು ಹಿಡಿದು ಮಠಾಧೀಶರು, ಬಸವಾಭಿಮಾನಿಗಳು ಚಿಂತನೆ ಮಾಡಿದರೆ ಖಂಡಿತವಾಗಿಯೂ ಬಸವ ಧರ್ಮ ಬೆಳೆಯಲು ಸಾಧ್ಯ. ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಸವಪೀಠಗಳನ್ನು ಸ್ಥಾಪಿಸಿ, ಬಸವ ಧರ್ಮವನ್ನು ಜಾಗತಿಕವಾಗಿ ಬೆಳೆಸಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ಚಿಂತನೆಗಳು, ಅವಲೋಕನ ನಡೆಯಬೇಕಿದೆ’ ಎಂದರು.

ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಕಿ ಗುರುದೇವಿ ಹುಲ್ಲೇಪ್ಪನವರಮಠ ಮಾತನಾಡಿ, ‘ತನು, ಮನ, ಬುದ್ಧಿ, ಭಾವಗಳ ಶುದ್ಧಿಗೆ ಪೂಜೆ ಅತ್ಯುನ್ನತ ಸಾಧನ. ವೈಜ್ಞಾನಿಕವಾದ ಪೂಜಾ ವಿಧಾನ ಜಗತ್ತಿಗೆ ತಿಳಿಸಿಕೊಟ್ಟ ಶ್ರೇಯ ಬಸವಾದಿ ಪ್ರಮಥರ್ದು. ಜ್ಞಾನ–ವಿಜ್ಞಾನ–ತಂತ್ರಜ್ಞಾನ ಎಷ್ಟೆಲ್ಲ ಮುಂದುವರಿದರೂ ಆದಿಮಾನವ ಪಳಿಯುಳಿಕೆಯ ಪರಂಪರೆಯಂತೆ ಕಲ್ಲುದೇವರು, ಮಣ್ಣುದೇವರು, ಮರದೇವರ ಪೂಜೆ ಇಂದಿಗೂ ನಿಲ್ಲದಿರುವುದು ದುರದೃಷ್ಟಕರ. ಶರಣ ಸಂಸ್ಕೃತಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಂಡವರು ಸ್ಥಾವರ ಪೂಜೆ ಮಾಡಲ್ಲ, ಮಾಡಕೂಡದು. ಬರೀ ಇಷ್ಟಲಿಂಗವನ್ನು ಆರಾಧಿಸಬೇಕು’ ಎಂದರು.

ಸಾರಂಧರ ದೇಶಿಕೇಂದ್ರ ಸ್ವಾಮೀಜಿ, ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ, ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಶರಣಕುಮಾರ ಮೋದಿ, ಅರುಣಕುಮಾರ ಪಾಟೀಲ ಕೊಡಲಹಂಗರಗಾ, ದೊಡ್ಡಪ್ಪಗೌಡ ಪಾಟೀಲ, ನೀಲಕಂಠರಾವ ಮೂಲಗೆ ಸೇರಿದಂತೆ ಹಲವು ಮುಖಂಡರು, ಹತ್ತಾರು ಸ್ವಾಮೀಜಿಗಳು ವೇದಿಕೆಯಲ್ಲಿದ್ದರು.

ಅದ್ದೂರಿ ಮೆರವಣಿಗೆ:

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಬಸವರಾಜಪ್ಪ ಅಪ್ಪ ಸಭಾಂಗಣದ ತನಕ ‘ಬಸವ ಸಂಸ್ಕೃತಿ ಅಭಿಯಾನ’ದ ಅದ್ದೂರಿ ಮೆರವಣಿಗೆ ನಡೆಯಿತು.

ಗಮನ ಸೆಳೆದ ಸಂವಾದ:

ಬೆಳಿಗ್ಗೆ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ‘ಸಮಾನತೆ, ಭಕ್ತಿ, ಕಾಯಕ–ದಾಸೋಹ ಪಠ್ಯದಲ್ಲಿ ಅಳವಡಿಸುವುದು ಹೇಗೆ? ಬಸವ ಧರ್ಮ ಇಂದಿಗೂ ವಿಶ್ವಧರ್ಮ ಯಾಕೆ ಆಗಿಲ್ಲ? ಬಸವ ಸಂಸ್ಕೃತಿ, ಶರಣ ಸಂಸ್ಕೃತಿ ಮಕ್ಕಳು ಹೇಗೆ ರೂಢಿಸಿಕೊಳ್ಳಬೇಕು? ಮೂಢನಂಬಿಕೆ ಬೋಧಿಸುವ ಮಠಾಧೀಶರಿಗೆ ಹೇಗೆ ಪ್ರತಿಕ್ರಿಯಿಸಬೇಕು? ಏಕರೂಪ ಲಿಂಗಪೂಜೆ, ಧ್ವಜಗೀತೆ, ಗರ್ಭದಿಂದ ಗೋರಿ ತನಕ ಸಂಸ್ಕಾರ ಏಕಿಲ್ಲ? ಇಂದಿನ ಸಮಾಜಕ್ಕೆ ಮಠಾಧೀಶರು ಮಾರಕವೋ ಪೂರಕವೋ’ ಎಂಬೆಲ್ಲ ಪ್ರಶ್ನೆಗಳು ತೂರಿಬಂದವು. ಅದಕ್ಕೆ ತೋಂಟದ ಸಿದ್ಧರಾಮ ಸ್ವಾಮೀಜಿ, ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯರು, ಬಸವಲಿಂಗ ಪಟ್ಟದ್ದೇವರು ಉತ್ತರಿಸಿದರು.

‘ಲಿಂಗಧಾರಿಗಳ ಅಪ್ಪಲು ಕಾಲಮಿಂಚಿಲ್ಲ’

‘ಬಸವಧರ್ಮ ಹೆಮ್ಮರವಾಗಿ ಬೆಳೆಯುತ್ತಿತ್ತು ಬೆಳೆಯಬೇಕಿತ್ತು. ಆದರೆ ನಾವೂ ತಪ್ಪು ಮಾಡಿದ್ದೇವೆ. ಹಿಂದುಳಿದ ವರ್ಗದವರು ಪರಿಶಿಷ್ಟರು ಸೇರಿದಂತೆ ಯಾರೆಲ್ಲ ಲಿಂಗಧಾರಣೆ ಮಾಡಿದ್ದರೋ ಅವರನ್ನೆಲ್ಲ ನಾವು ಹತ್ತಿರ ಕರೆದು ಅಪ್ಪಿಕೊಳ್ಳಲಿಲ್ಲ ಒಪ್ಪಿಕೊಳ್ಳಲಿಲ್ಲ. ಅದು ಬಹಳ ದೊಡ್ಡ ತಪ್ಪು. ಈಗಲೂ ಕಾಲ ಮೀರಿಲ್ಲ. ಈಗಲೂ ಲಿಂಗಧಾರಿಗಳನ್ನೆಲ್ಲ ಅಪ್ಪಿಕೊಂಡರೆ ಬಸವ ಧರ್ಮ ಬೆಳೆಯುತ್ತದೆ’ ಎಂದು ರಾಜ್ಯ ಯೋಜನಾ ಮತ್ತು ನೀತಿ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಅಭಿಪ್ರಾಯಪಟ್ಟರು.

‘ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಚನ ಸಾಹಿತ್ಯ ಪ್ರಕಟಿಸಿ ಮನೆ–ಮನೆಗೂ ತಲುಪಿಸುವ ಕೆಲಸ ಸರ್ಕಾರ ಮಾಡಲಿದೆ ಎಂದಿದ್ದರು. ನಾಲ್ಕು ತಿಂಗಳು ಕಳೆದರೂ ಈತನಕ ಏನೂ ಆಗಿಲ್ಲ. ಸಚಿವ ಶರಣಪ್ರಕಾಶ ಪಾಟೀಲರು ಸಚಿವ ಸಂಪುಟ ಸಭೆಯಲ್ಲಿ ಈ ಕುರಿತ ಸಿ.ಎಂ ಗಮನ ಸೆಳೆಯಬೇಕು’ ಎಂದು ಒತ್ತಾಯಿಸಿದರು.

‘ಮಕ್ಕಳಿಗೆ ಲಿಂಗಪೂಜೆ ಕಲಿಸಬೇಕಿದೆ’

‘ಬಸವಾದಿ ಶರಣರ ವಚನ ಸಾಹಿತ್ಯ ಲಿಂಗಾಯತ ಧರ್ಮದ ಆಚರಣೆ ಲಿಂಗಪೂಜೆ ಕಾಯಕ–ದಾಸೋಹ ಸಂಸ್ಕೃತಿಯನ್ನು ಸತ್ಯ–ಶುದ್ಧ ಕಾಯಕದ ಪರಿಕಲ್ಪನೆಯನ್ನು ನಾವೆಲ್ಲ ಮಕ್ಕಳಿಗೆ ಪರಿಚಯಿಸಬೇಕಿದೆ. ಅಷ್ಟಾವರಣ ಷಟ್ಸ್ಥಳ ಪಂಚಾಚಾರ್ಯರನ್ನು ಮಕ್ಕಳಿಗೆ ಹೇಳಿಕೊಡಬೇಕಿದೆ. ವಿಶೇಷವಾಗಿ ಲಿಂಗಪೂಜೆ ಕಲಿಸಬೇಕಿದೆ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

‘ಲಿಂಗಪೂಜೆಯಿಂದ ಮನಸ್ಸು ಶಾಂತವಾಗಿ ಬುದ್ಧಿಶಕ್ತಿ ವಿವೇಕ ತಾಳ್ಮೆ ಹೆಚ್ಚಾಗುತ್ತದೆ. ಬೇರೆಯವರನ್ನು ಪ್ರೀತಿಯಿಂದ ಕಾಣಲು ಸಾಧ್ಯವಾಗುತ್ತದೆ. ಧರ್ಮ ಪ್ರಚಾರದಿಂದ ಜನಪ್ರೇರಿತವಾಗಲ್ಲ. ನಡೆ–ನುಡಿ ಒಂದಾದ ಆಚರಣೆಯಿಂದ ಅದು ಜನಪ್ರೇರಣೆಯಾಗುತ್ತದೆ’ ಎಂದರು.

‘ಬೊನ್ಸಾಯ ಮರದಂತಾದ ಬಸವಧರ್ಮ’

‘ಬಸವ ಧರ್ಮದ ಸ್ಥಿತಿ ಶ್ರೀಮಂತ ಮನೆಗಳಲ್ಲಿರುವ ಬೊನ್ಸಾಯ ಮರದಂತಾಗಿದೆ. ಹೀಗಾಗಿ ಅದು ಬೆಳೆಯುತ್ತಿಲ್ಲ’ ಎಂದು ಮೈಸೂರಿನ ಕುಂದೂರು ಮಠದ ಶರಶ್ಚಂದ್ರ ಸ್ವಾಮೀಜಿ ಹೇಳಿದರು.

‘ನಮ್ಮೊಳಗೆಷ್ಟು ಬಸವಧರ್ಮವಿದೆ ಎಂಬುದರ ಆತ್ಮವಿಮರ್ಶೆ ಪ್ರತಿಯೊಬ್ಬ ಬಸವಧರ್ಮೀಯ ಮೊದಲಿಗೆ ಮಾಡಿಕೊಳ್ಳಬೇಕು. ಬಸವಣ್ಣನವರ ವ್ಯಕ್ತಿ ಪೂಜೆ ಬಿಟ್ಟು ಅವರ ತತ್ವಪೂಜೆ ನಡೆಯಬೇಕು. ಬಸವಣ್ಣವರನ್ನು ವ್ಯಕ್ತಿಯಾಗಿ ನೋಡದೇ ತತ್ವ–ಸಿದ್ಧಾಂತವಾಗಿ ನೋಡಬೇಕು. ವಚನ ವಿಶ್ವವಿದ್ಯಾಲಯ ವಚನ ಶಾಲೆಗಳ ಸ್ಥಾಪನೆಯಾಗಬೇಕು. ವಚನ ಶಾಸ್ತ್ರಗಳ ಸಂಶೋಧನೆ ನಡೆಯಬೇಕು. ಬಸವ ಸಂಘಟನೆಗಳು ರಾಜಕೀಯ ರಹಿತವಾಗಿ ಬೆಳೆಯಬೇಕಿದೆ. ಇದರೊಂದಿಗೆ ನಡೆ–ನುಡಿಯಲ್ಲಿ ನಾವೆಲ್ಲ ಬಸವಣ್ಣನವರನ್ನು ಆವಾಹಿಸಿಕೊಂಡು ನಡೆದರೆ ಬಸವಧರ್ಮ ಬೆಳೆಯಲು ಸಾಧ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.