ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಿದ ಹೂಳು; ಕೇಳುವವರಿಲ್ಲ ಗೋಳು

ಬೆಣ್ಣೆತೊರಾ ಬಲದಂಡೆ ಕಾಲುವೆ ಕಲ್ಲುಮಣ್ಣು, ಮುಳ್ಳಿನ ಕಂಟಿಯಿಂದ ಭರ್ತಿ
Last Updated 12 ಜೂನ್ 2022, 4:18 IST
ಅಕ್ಷರ ಗಾತ್ರ

ಚಿತ್ತಾಪುರ: ಕಾಳಗಿ ತಾಲ್ಲೂಕಿನ ಬೆಣ್ಣೆತೊರಾ ಜಲಾಶಯದಿಂದ ರೈತರ ಜಮೀನುಗಳಿಗೆ ನೀರು ಪೂರೈಕೆಯ ಬಲದಂಡೆ ಕಾಲುವೆಗಳಲ್ಲಿ ಕಲ್ಲುಮಣ್ಣು, ಗಿಡಗಂಟಿ, ಮುಳ್ಳುಗಳೇ ತುಂಬಿಕೊಂಡಿದ್ದು, ಕಾಲುವೆ ನಿರ್ವಹಣೆ ಮಾಡಬೇಕಾದ ನೀರಾವರಿ ಇಲಾಖೆಯು ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ರೈತರು ಆರೋಪಿಸಿದ್ದಾರೆ.

ಬೆಣ್ಣೆತೊರಾ ಜಲಾಶಯದಿಂದ ಎಡ ಹಾಗೂ ಬಲದಂಡೆ ಅಚ್ಚುಕಟ್ಟು ಪ್ರದೇಶದಲ್ಲಿ ಒಟ್ಟು 20,234 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ.

ತಾಲ್ಲೂಕಿನ ದಂಡೋತಿ, ಇವಣಿ, ಬೆಳಗುಂಪಾ, ಗುಂಡಗುರ್ತಿ, ಕಾಳಗಿ ತಾಲ್ಲೂಕಿನ ಪೇಠಶಿರೂರ, ಮಾಡಬೂಳ, ಮುಗುಟಾ, ತೊನಸನಹಳ್ಳಿ (ಟಿ) ಗ್ರಾಮಗಳ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಬೆಣ್ಣೆತೊರಾ ಕಾಲುವೆ, ವಿತರಣೆ ಕಾಲುವೆಗಳ ದುಃಸ್ಥಿತಿ ಕಣ್ಣಿಗೆ ರಾಚುತ್ತದೆ.

ದಂಡೋತಿ ಹತ್ತಿರದ ಕಾಗಿಣಾ ನದಿಯಿಂದ ಮರಳು ತುಂಬಿದ ಟಿಪ್ಪರ್‌ಗಳು ಬೆಣ್ಣೆತೊರಾ ಕಾಲುವೆಗಳ ದಂಡೆಯಲ್ಲಿ ನಿರ್ಮಿಸಿದ ರಸ್ತೆಯಲ್ಲಿ ಸಂಚರಿಸುತ್ತಿವೆ. ಹೀಗಾಗಿ ಕಾಲುವೆಗಳಿಗೆ ಧಕ್ಕೆಯುಂಟಾಗುತ್ತಿದೆ. ಬೆಳಗುಂಪಾ, ಪೇಠಶಿರೂರ ಗ್ರಾಮಗಳ ವ್ಯಾಪ್ತಿಯಲ್ಲಿ ರೈತರು ತಮ್ಮ ಜಮೀನುಗಳ ಹತ್ತಿರ ಬೆಳೆದಿರುವ ಮುಳ್ಳಿನ ಕಂಟಿ ಕಡಿದು ಕಾಲುವೆಗಳಲ್ಲಿ ತುಂಬಿದ್ದಾರೆ.

ದಂಡೋತಿ ರೈತರ ಜಮೀನುಗಳಲ್ಲಿನ ಕಾಲುವೆಗಳು ಇನ್ನೂ ಕಾಂಕ್ರಿಟ್‌ ಅನ್ನೇ ಕಂಡಿಲ್ಲ. ಕಾಲುವೆಯ ತುಂಬಾ ಮುಳ್ಳಿನ ಗಿಡಗಂಟಿ, ಹುಲ್ಲು ಬೆಳೆದುಕೊಂಡಿವೆ. ರೈತರ ಜಮೀನುಗಳಿಗೆ ನೀರು ಹರಿಸಲು ಸುಸಜ್ಜಿತ ನೀರು ವಿತರಣೆ ಕಾಲುವೆಗಳನ್ನೂ ಸಹ ನಿರ್ಮಾಣ ಮಾಡಿಲ್ಲ. ಸಿಮೆಂಟ್ ಕಾಂಕ್ರಿಟ್ ಬಳಸಿ ನಿರ್ಮಿಸಿದ ಕಾಲುವೆಗಳಲ್ಲಿ ಕಲ್ಲುಮಣ್ಣು ಹೇರಳವಾಗಿ ಬಿದ್ದಿದೆ. ಬೇಸಿಗೆ ಮುಗಿಯುತ್ತಾ ಬಂದರೂ ಕಾಲುವೆಗಳ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಸಂಬಂಧಿತ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ಮಳೆ ಕೊರತೆಯಿಂದ ತೊಗರಿ, ಕಡಲೆ, ಜೋಳದ ಬೆಳೆ ಇತ್ಯಾದಿ ಬೆಳೆಗಳು ಒಣಗುವ ಸಂದರ್ಭಗಳಲ್ಲಿ ರೈತರ ಒತ್ತಾಯದ ಮೇರೆಗೆ ಜಲಾಶಯದಿಂದ ಈ ಕಾಲುವೆಗೆ ನೀರು ಹರಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ಈಗ ಕಾಲುವೆಗಳ ದುಸ್ಥಿತಿಗೆ ತಲುಪಿರುವ ಕಾರಣ ರೈತರ ಜಮೀನುಗಳಿಗೆ ನೀರು ಲಭಿಸುವುದಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ.

ಬೆಣ್ಣೆತೊರಾ ಜಲಾಶಯದ ಸಂಬಂಧಪಟ್ಟ ಅಧಿಕಾರಿಗಳು ಕಾಲುವೆಗಳ ದುಃಸ್ಥಿತಿ ಸರಿಪಡಿಸಬೇಕು. ಯೋಜನೆಯ ಉದ್ದೇಶಿತ ಜಮೀನುಗಳಲ್ಲಿ ಸಮರ್ಪಕ ನೀರು ವಿತರಣಾ ಕಾಲುವೆಗಳ ನಿರ್ಮಾಣ ಮಾಡಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT