ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧ, ಬಸವಣ್ಣ, ಮಾರ್ಕ್ಸ್‌ ಬಂಡುಕೋರರಲ್ಲ: ಡಾ. ಎಚ್‌.ಎಸ್‌. ಶಿವಪ್ರಕಾಶ್

ಹೋಗಿ ಬನ್ನಿ ಋತುಗಳೇ ಕವನ ಸಂಕಲನ ಕುರಿತ ಸಂವಾದ
Last Updated 20 ಡಿಸೆಂಬರ್ 2021, 16:38 IST
ಅಕ್ಷರ ಗಾತ್ರ

ಕಲಬುರಗಿ: ‘ಗೌತಮ ಬುದ್ಧ, ಬಸವಣ್ಣ, ಕಾರ್ಲ್ ಮಾರ್ಕ್ಸ್ ಅವರು ಬಂಡುಕೋರರಲ್ಲ. ಬದಲಾಗಿ ತಮ್ಮ ಕಾಲಘಟ್ಟದಲ್ಲಿ ತಾವು ನಂಬಿದ ವಿಚಾರಗಳ ದರ್ಶನಗಳನ್ನು ಜನರಿಗೆ ನೀಡಿದರು’ ಎಂದು ಹಿರಿಯ ಸಾಹಿತಿ ಡಾ. ಎಚ್‌.ಎಸ್‌. ಶಿವಪ್ರಕಾಶ್ ಅಭಿಪ್ರಾಯಪಟ್ಟರು.

ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಅವರ ನಾಲ್ಕು ದಶಕಗಳ ಕವನಗಳ ಸಂಕಲನ ‘ಹೋಗಿ ಬನ್ನಿ ಋತುಗಳೇ’ ಕವನ ಸಂಕಲನದ ಕುರಿತ ಸಂವಾದ ಹಾಗೂ ಚರ್ಚೆಯಲ್ಲಿ ಮಾತನಾಡಿದ ಅವರು, ‘ಬುದ್ಧ ಶಿಷ್ಯರನ್ನು ಕರೆದು ತನ್ನ ಬೋಧನೆಗಳೆಲ್ಲವನ್ನೂ ಯಥಾವತ್ ಅನುಸರಿಸುವ ಅಗತ್ಯವಿಲ್ಲ. ಪ್ರತಿಯೊಂದನ್ನೂ ಪರಾಮರ್ಶಿಸಿ, ಪರಿಶೀಲಿಸಿಯೇ ಮುಂದುವರಿಯಬೇಕು ಎಂದು ಹೇಳಿದ್ದ. ತಾನು ಹೇಳಿದ್ದೇ ಸರಿ ಎನ್ನುವ ವಾದವನ್ನು ಎಂದಿಗೂ ಮಾಡಲಿಲ್ಲ’ ಎಂದರು.

ಸೂಫಿ ಸಂತರು ತಮ್ಮ ಪ್ರೇಯಸಿಯ ಕಣ್ಣಿನ ಹುಬ್ಬುಗಳಲ್ಲಿ, ತುಟಿಯ ಕೆಂಪಿನಲ್ಲಿ ವಿಶ್ವವನ್ನು ಕಂಡರು. ಅದರಂತೆ ದಾರ್ಶನಿಕರು ಬೇರೆ ಬೇರೆ ವಿಧದಲ್ಲಿ ಲೋಕವನ್ನು ಕಂಡರು. ಕವಿಗಳು ಯಾವಾಗಲೂ ವಿಶ್ವದ ಕುರಿತಾಗಿ ಚಿಂತಿಸುತ್ತಾರೆ. ಹೀಗಾಗಿ, ಅವರನ್ನು ಒಂದು ಪ್ರದೇಶಕ್ಕೆ ಸೀಮಿತಗೊಳಿಸಬಾರದು ಎಂದು ಹೇಳಿದರು.

ಸುಮಾರು ಒಂದೂವರೆ ಶತಮಾನದ ಕಾವ್ಯದ ಸಾರವನ್ನು ತಮ್ಮ ಕವಿತೆಗಳಲ್ಲಿ ತುಂಬಿದ್ದಾರೆ. 2011ರಲ್ಲಿ ಇಲ್ಲಿಯವರೆಗಿನ ಕವಿತೆ ಎಂಬ ಶೀರ್ಷಿಕೆಯಲ್ಲಿ ಕವನ ಸಂಕಲನಗಳನ್ನು ಪ್ರಕಟಿಸಿದ್ದರು. ಇದೀಗ ನಾಲ್ಕು ದಶಕಗಳ ಸಮಗ್ರ ಕವಿತಾ ಸಂಕಲನವನ್ನು ಪ್ರಕಟಿಸಿದ್ದಾರೆ. ಹೋಗಿ ಬನ್ನಿ ಋತುಗಳೇ ಕವನ ಸಂಕಲನವು ಪ್ರತಿಯೊಬ್ಬ ಸಹೃದಯರ ಮನೆಯಲ್ಲಿ ಇರಬೇಕಾದ ಅಪರೂಪದ ಕಾವ್ಯ ಸಂಗ್ರಹ’ ಎಂದು ಹೇಳಿದರು.

ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವ ಪ್ರೊ. ಬಸವರಾಜ ಡೋಣೂರ ಮಾತನಾಡಿ, ‘ಶಿವಪ್ರಕಾಶರ ಕಾವ್ಯದ ಬಗ್ಗೆ ಆಗಾಗ ಪ್ರೊ. ಚಂದ್ರಶೇಖರ ಪಾಟೀಲ, ಪ್ರೊ. ಗಿರಡ್ಡಿ ಗೋವಿಂದರಾಜ ಅವರೊಂದಿಗೆ ಚರ್ಚಿಸುತ್ತಿದ್ದೆ. ಚಂಪಾ ಅವರು ಶಿವಪ್ರಕಾಶರು ಒಬ್ಬ ಅಪ್ಪಟ ಕವಿ ಎಂದು ಶ್ಲಾಘಿಸಿದ್ದಾರೆ. ತಮ್ಮ ಸಂವೇದನೆಗಳನ್ನು ಸ್ವಂತ ನೆಲದೊಂದಿಗೆ ಸಮೀಕರಿಸಿಕೊಂಡಿದ್ದಾರೆ’ ಎಂದು ವಿಶ್ಲೇಷಿಸಿದರು.

ಕೃತಿ ಪರಿಚಯ ಮಾಡಿದ ಶಿವಮೊಗ್ಗದ ವಿಮರ್ಶಕ ಡಾ. ಸಿರಾಜ್ ಅಹ್ಮದ್, ‘ಪ್ರೊ.ಕಿ.ರಂ. ನಾಗರಾಜ್ ಅವರೊಮ್ಮೆ ಮಾತನಾಡುತ್ತಾ ಶಿವಪ್ರಕಾಶರು ಒಂದು ನಿರ್ದಿಷ್ಟ ವಲಯವನ್ನು ಗಮನದಲ್ಲಿಟ್ಟುಕೊಂಡು ಬರೆಯುವ ಕವಿ ಅಲ್ಲ. ತಮ್ಮ ಶೈಲಿಯನ್ನು ನಿರಂತರವಾಗಿ ಭಂಜಿಸಿ ಸೃಜನಶೀಲವಾಗಿ ಹೊಸದನ್ನು ಅಳವಡಿಸಿಕೊಳ್ಳುತ್ತಾ ಬಂದಿದ್ದರು. ಪ್ರೊ. ಕಿ.ರಂ. ಹೇಳಿದಂತೆಯೇ ಶಿವಪ್ರಕಾಶರು ಒಂದು ವಲಯಕ್ಕೆ ಸೀಮಿತರಾಗಲಿಲ್ಲ. ತಾವು ಕಂಡ, ಅನುಭವಿಸಿದ ಪ್ರತಿಯೊಂದರ ಬಗ್ಗೆಯೂ ಬರೆದಿದ್ದಾರೆ’ ಎಂದರು.

ಲೇಖಕ, ಕರ್ನಾಟಕ ಕೇಂದ್ರೀಯ ವಿ.ವಿ. ಪ್ರಾಧ್ಯಾಪಕ ಪ್ರೊ. ವಿಕ್ರಮ ವಿಸಾಜಿ ಮಾತನಾಡಿ, ‘ಚಾಮರಾಜನಗರದಿಂದ ಬೀದರ್‌ವರೆಗಿನ ನನ್ನ ವಾರಿಗೆಯ ಹಲವು ಕವಿಗಳು ಶಿವಪ್ರಕಾಶ್ ಅವರ ಕಾವ್ಯ ಕಟ್ಟುವ ಶೈಲಿಯಿಂದ ಪ್ರಭಾವಿತರಾಗಿದ್ದೇವೆ. ಅವರ ಅನುಭವದ ಹರವು ದೊಡ್ಡದು’ ಎಂದು ಹೇಳಿದರು.

ಪ್ರೊ.ಶ್ರೀಶೈಲ ನಾಗರಾಳ ಕಾರ್ಯಕ್ರಮ ನಿರ್ವಹಣೆ ಮಾಡಿದರು.

‘ಕುಸ್ತಿ ಪೈಲ್ವಾನ್ ಆಗಬೇಕು ಎಂದುಕೊಂಡಿದ್ದೆ’

ಬಾಲ್ಯದಲ್ಲೇ ಗರಡಿ ಮನೆಗೆ ಹೋಗುತ್ತಿದ್ದ ನಾನು ಮುಂದೆ ಕುಸ್ತಿ ಪೈಲ್ವಾನ್ ಆಗಬೇಕು ಎಂದುಕೊಂಡಿದ್ದೆ ಎಂದು ಡಾ.ಎಚ್‌.ಎಸ್‌. ಶಿವಪ್ರಕಾಶ್ ತಮ್ಮ ನೆನಪಿನ ಬುತ್ತಿ ಬಿಚ್ಚಿದರು.

‘ಪೈಲ್ವಾನ್ ಆಗದಿದ್ದರೆ ದನ–ಕರುಗಳ ಡಾಕ್ಟರ್ ಆಗಬೇಕು ಅಂದುಕೊಂಡಿದ್ದೆ. ಯಾವುವೂ ಆಗಲಿಲ್ಲ. ಸುಮ್ಮನೆ ನೋಡೋಣ ಅಂತ ಒಂದಷ್ಟು ಕವಿತೆಗಳನ್ನು ಬರೆದೆ. ಜನರು ತಮ್ಮದೇ ರೀತಿಯಲ್ಲಿ ಅವುಗಳನ್ನು ಸ್ವೀಕರಿಸಿದರು. ಇದೇನೊ ಕವಿತೆ ಬರೆಯುವುದರಲ್ಲೇ ಮಜಾ ಇದೆಯಲ್ಲ ಎಂದುಕೊಂಡು ಅದರಲ್ಲೇ ಮುಂದುವರಿದೆ. ಗರಡಿ ಮನೆಗೆ ಹೋಗುವ ಸಮಯವನ್ನು ಕವಿತೆ ಬರೆಯಲು ಬಳಸಿದ್ದರೆ ಇನ್ನಷ್ಟು ಪ್ರಸಿದ್ಧ ಕವಿಯಾಗುತ್ತಿದ್ದೆ’ ಎಂದು ಚಟಾಕಿ ಹಾರಿಸಿದರು.

ಆಹಾರ ಅವರವರ ಆಯ್ಕೆ: ಶಿವಪ್ರಕಾಶ್


ಕಲಬುರಗಿ: ‘ಯಾವ ಆಹಾರ ತಿನ್ನಬೇಕು ಎಂಬುದು ಅವರವರ ಆಯ್ಕೆಗೆ ಬಿಟ್ಟಿದ್ದು. ಮಾಂಸಾಹಾರವನ್ನು ನಿಷೇಧ ಮಾಡಲು ಅಸಾಧ್ಯ ಎಂಬುದು ಭಗವಾನ್ ಬುದ್ಧನಿಗೂ ಗೊತ್ತಿತ್ತು. ಹೀಗಾಗಿಯೇ ಪ್ರಜ್ಞಾವಂತ ನಿರ್ಧಾರ ತೆಗೆದುಕೊಂಡಿದ್ದ’ ಎಂದು ಹಿರಿಯ ಸಾಹಿತಿ ಡಾ. ಎಚ್‌.ಎಸ್‌. ಶಿವಪ್ರಕಾಶ್ ಅಭಿಪ್ರಾಯಪಟ್ಟರು.

‘ಇಂದಿನ ದಿನಗಳಲ್ಲಿ ಕೆಲ ಸಸ್ಯಾಹಾರಿಗಳೂ ಎಲ್ಲ ಬಗೆಯ ಮಾಂಸವನ್ನು ತಿನ್ನುತ್ತಾರೆ. ಇಂದಿಗೂ ಕೇರಳದಲ್ಲಿ ಕೆಲವರ ಬೆಳಗಿನ ಉಪಾಹಾರ ಮಾಂಸಾಹಾರವೇ ಆಗಿರುತ್ತದೆ. ಅದು ಅವರ ಇಷ್ಟ. ಮಂಜುಗಡ್ಡೆ ಪ್ರದೇಶದಲ್ಲಿ ವಾಸಿಸುವ ಬುಡಕಟ್ಟು ನಿವಾಸಿಗಳಾದ ಎಸ್ಕಿಮೊಗಳಿಗೆ ಸಸ್ಯಾಹಾರಿಗಳಾಗಿ ಎಂದು ಹೇಳುವುದು ಹೇಗೆ ಸಾಧ್ಯ? ಅಲ್ಲಿ ಯಾವ ಬೆಳೆಯನ್ನೂ ಬೆಳೆಯಲು ಸಾಧ್ಯವೇ ಇಲ್ಲ’ ಎಂದು ಹೇಳಿದರು.

ಮತಾಂತರದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಪ್ರಕಾಶ್, ‘ಮತಾಂತರ ಎಂಬುದು ಯಹೂದಿ ಧರ್ಮಗಳಲ್ಲಿ ಮಾತ್ರ ಇರುತ್ತದೆ. ಭಾರತದಲ್ಲಿ ಮತಾಂತರದ ಪರಿಕಲ್ಪನೆ ಇಲ್ಲ. ಆದರೆ ದೀಕ್ಷ ಪದ್ಧತಿ ಇದೆ. ಮಂಟೆಸ್ವಾಮಿ, ಮಲೆ ಮಹದೇಶ್ವರರು ದೀಕ್ಷೆ ಪಡೆದರು. ದೀಕ್ಷೆ ಎಂಬುದು ವಿವಿಧ ಸಮುದಾಯಗಳಲ್ಲಿ ಬೇರೆ ಬೇರೆ ರೀತಿ ಇದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT