ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿಯಲ್ಲಿ ಇಂದಿನಿಂದ ಶೇ 30 ರಷ್ಟು ಬಸ್‌ ಸಂಚಾರ

ಡಿಪೊಗಳಲ್ಲಿ ನಿಂತಿದ್ದ ಬಸ್ ತೊಳೆದು, ಸ್ಯಾನಿಟೈಸ್‌ ಸಿಂಪಡಿಸಿದ ಸಿಬ್ಬಂದಿ, ತಾಂತ್ರಿಕ ದುರಸ್ತಿಯೂ ಪೂರ್ಣ
Last Updated 20 ಜೂನ್ 2021, 15:19 IST
ಅಕ್ಷರ ಗಾತ್ರ

ಕಲಬುರ್ಗಿ: ಕೊರೊಲಾ ಲಾಕ್‌ಡೌನ್‌ ಕಾರಣ ಒಂದೂವರೆ ತಿಂಗಳಿಂದ ಡಿಪೊದಲ್ಲೇ ನಿಂತಿದ್ದ ಸರ್ಕಾರಿ ಬಸ್‌ಗಳು ಸೋಮವಾರ (ಜೂನ್‌ 21)ದಿಂದ ಮತ್ತೆ ರಸ್ತೆಗಿಳಿಯಲಿವೆ.

ಜಿಲ್ಲೆಯಲ್ಲಿ ವೈರಾಣು ಸಂಪೂರ್ಣ ಹತೋಟಿಗೆ ಬಂದಿದ್ದರಿಂದ ಸರ್ಕಾರಿ ಹಾಗೂ ಖಾಸಗಿ ಬಸ್‌ ಸಂಚಾರಕ್ಕೆ ಅನುವು ಮಾಡುವುದಾಗಿ ಸರ್ಕಾರ ಘೋಷಿಸಿದೆ. ಇದರ ಬೆನ್ನಲ್ಲೇ ಇಲ್ಲಿನ ನಾಲ್ಕೂ ಡಿಪೊಗಳಲ್ಲಿ ಬಸ್‌ಗಳನ್ನು ಭಾನುವಾರದಿಂದಲೇ ಸನ್ನದ್ಧಗೊಳಿಸಲಾಯಿತು.

ಬಸ್‌ಗಳ ತಾಂತ್ರಿಕ ಚೆಕ್‌ಅಪ್‌, ಎಂಜಿನ್‌ ಆಯಿಲಿಂಗ್‌, ಸ್ಯಾನಿಟೈಜೇಷನ್‌, ವಾಟರ್‌ ಸರ್ವಿಸ್‌ ಸೇರಿದಂತೆ ವಿವಿಧ ಕೆಲಸಗಳಲ್ಲಿ ಸಿಬ್ಬಂದಿ ತೊಡಗಿಕೊಂಡಿದ್ದು ಭಾನುವಾರ ಕಂಡುಬಂತು. ಇನ್ನೊಂದೆಡೆ, ಖಾಸಗಿ ಬಸ್‌ ಚಾಲಕರು ಸಹ ವಾಹನಗಳನ್ನು ಸಿದ್ಧಗೊಳಿಸಿದ್ದು ಓಡಾಟಕ್ಕೆ ಸಜ್ಜಾಗಿದ್ದಾರೆ.

‘ಒಂದೂವರೆ ತಿಂಗಳಿಂದ ಬಸ್‌ಗಳು ನಿಂತಲ್ಲೇ ನಿಂತಿವೆ. ಹಾಗಾಗಿ, ಸಾಮಾನ್ಯ ದುರಸ್ತಿಗಳನ್ನು ಮಾಡಬೇಕಾಗುತ್ತದೆ. ಕಾರ್ಯಾಚರಣೆಗೆ ಇಳಿಸುವ ಮುನ್ನ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ಅಲ್ಲದೇ, ಮೊದಲ ಹಂತದಲ್ಲಿ ಶೇ 30ರಿಂದ 40ರಷ್ಟು ಬಸ್‌ಗಳನ್ನು ಮಾತ್ರ ಓಡಿಸಲಾಗುವುದು. ನಂತರ ಪ್ರಯಾಣಿಕರಿಂದ ಬೇಡಿಕೆ ಕಂಡುಬಂದರೆ ಹೆಚ್ಚಿನ ಬಸ್‌ ಬಿಡಲಾಗುವುದು’ ಎಂದು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

1500 ಬಸ್‌ ಸಂಚಾರ:ಎನ್‌ಇಕೆಆರ್‌ಟಿಸಿ ವ್ಯಾಪ್ತಿಗೆ ಒಳಪಡುವ ಕಲಬುರ್ಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯಪುರ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಸಹ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಂಟೂ ಜಿಲ್ಲೆಗಳು ಸೇರಿ 1,500ರಿಂದ 2000 ಬಸ್‍ಗಳು ಸಂಚರಿಸುವ ಸಾಧ್ಯತೆ ಇದೆ ಎನ್ನುವುದು ವ್ಯವಸ್ಥಾಪಕ ನಿರ್ದೇಶಕ ಎಂ.ಕೂರ್ಮಾರಾವ್‌ ಅವರ ಹೇಳಿಕೆ.

‘ಬಸ್‌ಗಳಿಗೆ ಈಗಲೂ ಹೆಚ್ಚಿನ ಬೇಡಿಕೆ ಕಂಡುಬಂದಿಲ್ಲ. ಜನರು ನಿರಾಳವಾಗಿ ಓಡಾಡಲು ಇನ್ನೂ ಸಮಯ ಬೇಕಾಗುತ್ತದೆ. ಆದ್ದರಿಂದ ಖಾಲಿ ಬಸ್‌ಗಳನ್ನು ಓಡಿಸಿ ಹಾನಿ ಅನುಭವಿಸುವ ಬದಲು, ಬೇಡಿಕೆ ಬಂದ ಮಾರ್ಗಗಳಲ್ಲೇ ಬಿಡಲಾಗುವುದು. ಎಲ್ಲಕ್ಕಿಂತ ಪ್ರಯಾಣಿಕರ ಸುರಕ್ಷತೆಯೇ ಮುಖ್ಯವಾಗಿದ್ದರಿಂದ ಬಸ್‌ಗಳಲ್ಲಿ ಅಂತರ ಬಿಟ್ಟು ಕುಳಿತುಕೊಳ್ಳುವಂತೆ ನೋಡಿಕೊಳ್ಳಲಾಗುವುದು. ಸುರಕ್ಷಿತವಾಗಿರುವ ಸಿಬ್ಬಂದಿಯನ್ನೇ ಕಾರ್ಯಾಚರಣೆಗೆ ಇಳಿಸಲಾಗುವುದು’ ಎಂದೂ ಅವರು ಮಾಹಿತಿ ನೀಡಿದರು.

ಜಿಲ್ಲಾ ಕೇಂದ್ರದಿಂದ ನೆರೆಯ ಜಿಲ್ಲಾ ಕೇಂದ್ರಗಳಿಗೆ ಹಾಗೂ ಎಲ್ಲ ತಾಲ್ಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಕ್ಕೆ ಬಸ್‌ ಆರಂಭಿಸಲಾಗುವುದು. ಹಳ್ಳಿಗಳ ರೂಟ್ ಕೂಡ ಆರಂಭಿಸಲಾಗುವುದು. ಬಸ್‌ಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಹೊರಗೆ ಬಿಡಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ತಿಳಿಸಿದ್ದಾರೆ.

ಕೊರೊನಾ ನೆಗೆಟಿವ್‌ ವರದಿ ಕಡ್ಡಾಯ‌

‘ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗುವಂತೆ ಈಗಾಗಲೇ ಎಲ್ಲ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಚಾಲಕ ಮತ್ತು ನಿರ್ವಾಹಕರು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿ ತರಲು ಸೂಚಿಸಲಾಗಿದೆ ಎಂದೂ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ನೆಗೆಟಿವ್‌ ವರದಿ ನೀಡಿದವರು, ಎರಡೂ ಡೋಸ್‌ ವ್ಯಾಕ್ಸಿನ್‌ ಹಾಕಿಸಿಕೊಂಡವರನ್ನೇ ಮೊದಲು ಬಸ್‌ಗಳ ರೂಟ್‌ಗೆ ಹಾಕಲಾಗುವುದು. ಜಿಲ್ಲೆಯ ಎರಡೂ ವಿಭಾಗಗಳಲ್ಲಿ ಸುಮಾರು 300ಕ್ಕೂ ಹೆಚ್ಚಿನ ಬಸ್‍ಗಳು ಸೋಮವಾರದಿಂದ ರಸ್ತೆಗಿಳಿಯಲಿವೆ. ಕಲಬುರ್ಗಿ ವಿಭಾಗ 1ರಿಂದ 200 ಬಸ್‍ಗಳನ್ನು ಹಾಗೂ ವಿಭಾಗ–2ರಿಂದ ಕನಿಷ್ಠ 100 ಬಸ್‍ಗಳನ್ನು ಮೊದಲ ದಿನ ಓಡಿಸಲು ಉದ್ದೇಶಿಸಲಾಗಿದೆ’ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT