ಭಾನುವಾರ, ಜನವರಿ 19, 2020
27 °C
ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಸಂಚಿರಿಸುವ ಕ್ಯಾನ್ಸರ್‌ ಯೂನಿಟ್‌, ಹಳ್ಳಿ ರೋಗಿಗಳಿಗೆ ಅನುಕೂಲ

ಕ್ಯಾನ್ಸರ್ ಪತ್ತೆ ಕೇಸ್‌ ಬಸ್ ಘಟಕ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇಲ್ಲಿನ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ವಿ.ಟಿ.ಎಸ್.ಎಂ ಪೆರಿಫೆರಲ್ ಕ್ಯಾನ್ಸರ್ ಕೇಂದ್ರ (ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ)ದಲ್ಲಿ ₹ 1.3 ಕೋಟಿ ವೆಚ್ಚದ ವೈದ್ಯಕೀಯ ಸಲಕರಣೆಗಳನ್ನು ಒಳಗೊಂಡ ಕ್ಯಾನ್ಸರ್ ಪತ್ತೆ ಕೇಸ್ (ಸಿಡಿಸಿ) ಬಸ್ ಯೂನಿಟ್ ಹಾಗೂ ವಿದ್ಯುತ್ ಲಾಂಡ್ರಿ ಘಟಕಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಸದರಿ ಸಂಸ್ಥೆಗೆ ಅಗತ್ಯ ಉಪಕರಣಗಳನ್ನು ನೀಡಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನ ಒದಗಿಸಿದೆ. ಸದ್ಯ ಈ ಘಟಕದಲ್ಲಿ ಮ್ಯಾಮೋಗ್ರಾಪಿ, ಎಕ್ಸ್–ರೇ, ಪೇಷಂಟ್ ಕೌಚ್, ಇಸಿಜಿ ಹಾಗೂ ರಕ್ತ ಪರೀಕ್ಷೆ ಸಾಧನಗಳನ್ನು ಒಳಗೊಂಡ ಕ್ಯಾನ್ಸರ್ ಪತ್ತೆ ಕೇಸ್ (ಸಿಡಿಸಿ) ಬಸ್ ಯೂನಿಟ್ ಹಾಗೂ ₹ 20 ಲಕ್ಷ ವೆಚ್ಚದ ವಿದ್ಯುತ್ ಲಾಂಡ್ರಿ ಘಟಕ ಇದೆ.

ಸಿಡಿಎಸ್ ಬಸ್ ಯೂನಿಟ್ ಪ್ರತಿ ತಿಂಗಳು ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಸಂಚರಿಸಿ ಕ್ಯಾನ್ಸರ್ ರೋಗದ ಬಗ್ಗೆ ಆಂದೋಲನ ರೂಪದಲ್ಲಿ ಜನರಲ್ಲಿ ಅರಿವು ಮೂಡಿಸಲಿದೆ. ರೋಗದ ಪತ್ತೆ ಹಚ್ಚುವ ಕೆಲಸವನ್ನೂ ಮಾಡುತ್ತದೆ. ಈ ಬಸ್ ಯೂನಿಟ್ ತಾಲ್ಲೂಕು ಮತ್ತು ಹೋಬಳಿಯಲ್ಲಿ ಬಂದಾಗ ಕ್ಯಾನ್ಸರ್ ರೋಗದ ಬಗ್ಗೆ ಅನುಮಾನವಿರುವ ಜನರು ಇಲ್ಲಿ ಪರೀಕ್ಷೆಗೊಳಪಟ್ಟು, ಖಚಿತವಾದಲ್ಲಿ ವಿ.ಟಿ.ಎಸ್.ಎಂ ಪೆರಿಫೆರಲ್ ಕ್ಯಾನ್ಸರ್ ಕೇಂದ್ರಕ್ಕೆ ಬಂದು ಸೂಕ್ತ ಚಿಕಿತ್ಸೆ ಪಡೆಯಬುಹುದು.

ಹಿಂದೆ ಕ್ಯಾನ್ಸರ್ ರೋಗಿಗಳು ಚಿಕಿತ್ಸೆಗಾಗಿ ದೂರದ ಹೈದರಾಬಾದ್‌, ಬೆಂಗಳೂರು, ಸೋಲಾಪುರ ಹೋಗುತ್ತಿದ್ದರು. ಇದೀಗ ಇಲ್ಲಿಯೆ ಸಕಲ ಸೌಲಭ್ಯದೊಂದಿಗೆ ಕ್ಯಾನ್ಸರ್ ಕೇಂದ್ರ ನಿರ್ವಹಿಸುತ್ತಿದೆ. ಆದ್ದರಿಂದ ಬಡ ರೋಗಿಗಳಿಗೆ ಇದು ವರದಾನವಾಗಿದೆ. ಬಿಪಿಎಲ್‌ ಅಥವಾ ಆರೋಗ್ಯ ಕಾರ್ಡ್‌ ತೋರಿಸಿ ರೋಗದ ಸಂಪೂರ್ಣ ಉಚಿತ ಚಿಕಿತ್ಸೆ ಪಡೆಯಬಹುದು.

ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಶನಿವಾರ ಈ ಕೇಂದ್ರವನ್ನು ಸಾರ್ವಜನಿಕರ ಸೇವೆಗೆ ಅರ್ಪಿಸಿದರು. ಕಿದ್ವಾಯಿ ಸ್ವಾರಕ ಗ್ರಂಥಿ ಸಂಸ್ಥೆಯ ನಿರ್ದೇಶಕ ಡಾ. ರಾಮಚಂದ್ರ ಗೌಡ, ಕಲಬುರ್ಗಿ ವಿ.ಟಿ.ಎಸ್.ಎಂ ಪೆರಿಫೆರಲ್ ಕ್ಯಾನ್ಸರ್ ಕೇಂದ್ರದ ಪ್ರಭಾರಿ ಅಧಿಕಾರಿ ಡಾ.ಗುರುರಾಜ ದೇಶಪಾಂಡೆ, ಸಂಸ್ಥೆಯ ಸಿಬ್ಬಂದಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು