ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನಸಿರಿ ಕಣ್ತುಂಬಿಕೊಳ್ಳಲು ಸಕಾಲ

ಚಿಂಚೋಳಿ: ಪ್ರವಾಸಿಗರನ್ನು ಕೈಮಾಡಿ ಕರೆಯುತ್ತಿರುವ ಸಸ್ಯಕಾಶಿ
Last Updated 6 ಆಗಸ್ಟ್ 2020, 7:50 IST
ಅಕ್ಷರ ಗಾತ್ರ

ಚಿಂಚೋಳಿ: ಬಿಸಿಲುನಾಡಿನ ಜೀವ ವೈವಿಧ್ಯ ತಾಣವಾಗಿರುವ ಚಿಂಚೋಳಿ ವನ್ಯಜೀವಿಧಾಮ ಹಚ್ಚ ಹಸಿರಿನಿಂದ ಮೈದುಂಬಿಕೊಂಡು ಪ್ರವಾಸಿಗರನ್ನು ಕೈಮಾಡಿ ಕರೆಯುತ್ತಿದೆ.

ಚಿಕ್ಕಲಿಂಗದಳ್ಳಿ ಕೆರೆ, ಶಾದಿಪುರ ನವಿಲು ಗುಡ್ಡ, ಶೇರಿಭಿಕನಳ್ಳಿ ಲಾಲ್ ತಾಲಾಬ್, ಆನೆ ಪಳಗಿಸುವ ಶಾಲೆಯಾಗಿರುವ ಹಾಥಿ ಪಕಡಿ, ಎತ್ತಿಪೋತೆ ಜಲಪಾತ, ಗೊಟ್ಟಂಗೊಟ್ಟ ಪ್ರಕೃತಿಯ ರಮಣೀಯತೆ, ಸೋಮಲಿಂಗದಳ್ಳಿಯ ಮಹಿಶಮ್ಮನ ಬೆಟ್ಟ, ಮಂಡಿ ಬಸವಣ್ಣ ಕ್ಯಾಂಪ್, ಚಂದ್ರಂಪಳ್ಳಿ ಜಲಾಶಯ ಈ ಕಾಡಿನಲ್ಲಿ ಬರುವ ಪ್ರೇಕ್ಷಣೀಯ ತಾಣಗಳಾಗಿವೆ.

ಸುಮಾರು 13,488 ಹೆಕ್ಟೇರ್ ವಿಶಾಲವಾದ, ದಕ್ಷಿಣ ಭಾರತದ ಶುಷ್ಕ ವಲಯದ ಏಕೈಕ ವನ್ಯಜೀವಿ ಧಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇಲ್ಲಿನ ವನಸಿರಿಯನ್ನು ಕಣ್ತುಂಬಿಕೊಳ್ಳಲು ಅರಣ್ಯ ಇಲಾಖೆಯು ಹಾಥಿಪಕಡಿ, ಗೊಟ್ಟಮಗೊಟ್ಟ, ನವಿಲುಗುಡ್ಡ, ಮಹಿಶಮ್ಮನ ಬೆಟ್ಟಗಳಲ್ಲಿ ವೀಕ್ಷಣಾ ಗೋಪುರಗಳನ್ನು ನಿರ್ಮಿಸಿದೆ.

ಚಂದ್ರಂಪಳ್ಳಿ ಜಲಾಶಯದ ದಂಡೆಯಲ್ಲಿ ಕಾಟೇಜ್ ನಿರ್ಮಿಸಲಾಗಿದೆ. ಇಲ್ಲಿನ ರೈತ ತರಬೇತಿ ಭವನವು ತುಂಗಭದ್ರಾ ಜಲಾಶಯದ ವೈಕುಂಠ ಅತಿಥಿಗೃಹವನ್ನು ನೆನಪಿಸುಂತಿದೆ. ಚಂದ್ರಂಪಳ್ಳಿ ಜಲಾಶಯ ಈಗ ಶೇ 40ರಷ್ಟು ಭರ್ತಿಯಾಗಿದೆ. ಇನ್ನೊಂದೆರಡು ದೊಡ್ಡ ಮಳೆಗಳು ಸುರಿದರೆ ಜಲಾಶಯ ತುಂಬಲಿದೆ.

ಅಪರೂಪದ ಗಿಡ ಮರಗಳು, ಔಷಧೀಯ ಸಸ್ಯಗಳು ಮತ್ತು ಅಳಿವಿನ ಅಂಚಿನಲ್ಲಿರುವ ಪ್ರಾಣಿ, ಪಕ್ಷಿಗಳು ಇರುವ ಈ ವನ್ಯಜೀವಿ ಧಾಮವನ್ನು ನೋಡಲು ಈಗ ಸಕಾಲ. ಎಲೆ ಉದುರುವ ಕಾಡಾಗಿರುವ ಇದು ಡಿಸೆಂಬರ್‌ವರೆಗೆ ಹಸಿರು ಸೂಸುತ್ತಿರುತ್ತದೆ.

ಜಲಪಾತಗಳು ಬೇಸಿಗೆಯಲ್ಲಿ ನಿಂತು ಹೋಗುತ್ತವೆ. ಪರಿಸರ ಪ್ರಿಯರು, ಚಾರಣಿಗರು ಮಲೆನಾಡ ಸಿರಿಯಲ್ಲಿ ಮಿಂದೇಳಲು ಈಗ ಬಂದು ಹೋಗಬೇಕು. ಕಾಡಿನ ಒಳಗಡೆ ಹೋಗಬೇಕಾದರೆ ಕಾಡಿನ ಪರಿಚಯ ಉಳ್ಳವರು ಜತೆಗಿರಬೇಕು. ಜತೆಗೆ ಅರಣ್ಯ ಇಲಾಖೆ ಅನುಮತಿ ಪಡೆದುಕೊಳ್ಳಬೇಕು ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ.

ಕಾಟೇಜ್ ಬೇಕಾದರೆ ಚಿಂಚೋಳಿಯ ವನ್ಯಜೀವಿಧಾಮ ಅಥವಾ ಕಲಬುರ್ಗಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬೇಕು. ಮಾಹಿತಿಗಾಗಿ ಸಂಜೀವಕುಮಾರ ಚವ್ಹಾಣ (9008570173) ಅವರನ್ನು ಸಂಪರ್ಕಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT